Advertisement

ನೌಕಾನೆಲೆ 2ನೇ ಹಂತ 2023ಕ್ಕೆ ಪೂರ್ಣ

01:55 PM Jul 27, 2019 | Suhan S |

ಕಾರವಾರ: ಸೀಬರ್ಡ್‌ ನೌಕಾನೆಲೆ ಎರಡನೇ ಹಂತದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರ್‍ನಾಲ್ಕು ವರ್ಷಗಳು ಬೇಕು. ಆದರೆ ಯೋಜನೆ ಅನುಷ್ಠಾನಕ್ಕೆ ಅಗತ್ಯ ಭೂಮಿಯನ್ನು ಮೊದಲೇ ವಶಪಡಿಸಿಕೊಂಡಿದ್ದು, ಹೆಚ್ಚುವರಿ ಭೂಮಿ ಬೇಕಿಲ್ಲ ಎಂದು ಐಎನ್‌ಎಸ್‌ ಕದಂಬದ ಮುಖ್ಯಸ್ಥ ಹಾಗೂ ಫ್ಲಾಗ್‌ ಆಫೀಸರ್‌ ಕರ್ನಾಟಕ ಮಹೇಶ್‌ ಸಿಂಗ್‌ ಹೇಳಿದರು.

Advertisement

ಸೀಬರ್ಡ್‌ ನೌಕಾನೆಲೆ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 26 ಕಿಮೀ ಕಡಲಿನ ಅಂಚಿಗೆ ಚಾಚಿಕೊಂಡಿರುವ ಸೀಬರ್ಡ್‌ ನೌಕಾನೆಲೆ ಭಾರತದಲ್ಲೇ ಅಷ್ಟೇ ಅಲ್ಲ, ಏಷ್ಯಾ ಖಂಡದಲ್ಲೇ ಅತ್ಯಂತ ಬೃಹತ್ತಾದ ನೌಕಾನೆಲೆ ಆಗಲಿದೆ. 11334 ಎಕರೆ ಪ್ರದೇಶವನ್ನು ಸೀಬರ್ಡ್‌ ನೌಕಾನೆಲೆಗೆ ವಶಪಡಿಸಿಕೊಳ್ಳಲಾಗಿದೆ. ಎರಡನೇ ಹಂತದ ಕಾಮಗಾರಿಗಳು ಪೂರ್ಣಗೊಂಡಾಗ ಕದಂಬ ನೌಕಾನೆಲೆಯಲ್ಲಿ 32 ಯುದ್ಧ ನೌಕೆಗಳು ಹಾಗೂ ಸಬ್‌ ಮರೀನ್ಸ್‌ ನಿಲ್ಲಲು ಅವಕಾಶವಿದೆ. 2025ರ ವೇಳೆಗೆ ನೌಕಾನೆಲೆ ಸಂಬಂಧಿತ ವಿಮಾನ ನಿಲ್ದಾಣ ಕಾಮಗಾರಿ ಮುಗಿದು, ಕಾರ್ಯಾಚರಣೆ ಆರಂಭಿಸಲಿದೆ. ಆಗ 50 ಯುದ್ಧ ನೌಕೆಗಳು ಹಾಗೂ ಸಬ್‌ ಮರೀನ್ಸ್‌ ನಿಲ್ಲಲು ಅವಕಾಶವಿದೆ. ಅಷ್ಟು ವಿಸ್ತಾರವಾದ ನೌಕಾನೆಲೆ ಇದಾಗಿದೆ ಎಂದರು.

ಕಾರ್ಗಿಲ್ ವಿಜಯೋತ್ಸವಕ್ಕೆ 20 ವರ್ಷ ತುಂಬುತ್ತಿದ್ದು, ಭಾರತದ ನೆಲವನ್ನು ಪಾಕಿಸ್ತಾನದಿಂದ ಮರಳಿ ಪಡೆಯಲಾಯಿತು. ಆ ವಿಜಯೋತ್ಸವಕ್ಕೆ 20 ದಶಕಗಳು ತುಂಬುತ್ತಿವೆ. ಹಾಗಾಗಿ ನೇವಿ ಸೇರಿದಂತೆ ಭಾರತದ ಎಲ್ಲಾ ಪಡೆಗಳು ಸಂಭ್ರಮ ಆಚರಿಸುತ್ತಿವೆ. ಯುದ್ಧದಲ್ಲಿ ಗೆಲುವು ಸಾಧಿಸಲು ಪ್ರಾಣಾರ್ಪಣೆ ಮಾಡಿದ ವೀರ ಯೋಧರನ್ನು ನೆನೆಯುತ್ತೇವೆ ಎಂದರು.

5 ಸಾವಿರ ಉದ್ಯೋಗ: 2006ರಲ್ಲಿ ಸೀಬರ್ಡ್‌ ನೌಕಾನೆಲೆಯ ಪ್ರಥಮ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, 1986ರಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಎರಡನೇ ಹಂತದ ಕಾಮಗಾರಿಗಳು 2023ಕ್ಕೆ ಮುಗಿದಾಗ 4 ಸಾವಿರದಿಂದ 5 ಸಾವಿರ ಉದ್ಯೋಗಿಗಳು ಐಎನ್‌ಎಸ್‌ ಕದಂಬ ಸೇರಿಕೊಳ್ಳಲಿದ್ದಾರೆ. ಕಾರವಾರದ ಜನತೆ ನೇವಿಯ ನೌಕರರಿಗೆ ಆಹಾರ ಸೇರಿದಂತೆ ಇನ್ನಿತರೆ ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. ಕಾರವಾರ ಈ ಕಾರಣದಿಂದ ವೇಗವಾಗಿ ಬೆಳೆಯುತ್ತಿದೆ. ಪರೋಕ್ಷ ಉದ್ಯೋಗಗಳು ಹೆಚ್ಚಲಿವೆ. ನೇವಿ ಸಂಬಂಧಿತ ಕೈಗಾರಿಕೆಗಳು ಬೆಳೆಯಲು ಸಾಕಷ್ಟು ಅವಕಾಶವಿದೆ. ಕಾರ್ಪೊರೇಟ್ ಹೌಸ್‌ಗಳು ಸಹ ಬರಲಿವೆ ಎಂದರು.

ಎರಡನೇ ಹಂತದ ಕಾಮಗಾರಿಗೆ 20000 ಕೋಟಿ ವೆಚ್ಚವಾಗುತ್ತಿದೆ. ಹಲವು ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಈಗಾಗಲೇ ಸ್ಥಳೀಯರಿಗೆ ಮತ್ತು ನಿರಾಶ್ರಿತ ಕುಟುಂಬಗಳಿಗೆ ಶೇ.60ರಷ್ಟು ಉದ್ಯೋಗಗಳು ಯೋಜನೆಯ ಪ್ರಥಮ ಹಂತದಲ್ಲಿ ದೊರೆತಿವೆ. ಸೀಬರ್ಡ್‌ ನೌಕಾನೆಲೆ ಎರಡನೇ ಹಂತ ಪೂರ್ಣಗೊಂಡಾಗ ಅದರ ಕಾರ್ಯಾಚರಣೆ ಈಗಿನದಕ್ಕಿಂತ 3 ಪಟ್ಟು ಹೆಚ್ಚಲಿದೆ. ಶಿಪ್‌ ರಿಪೇರಿ ಯಾರ್ಡ್‌ಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಲಿವೆ. ಶಿಪ್‌ ರಿಫೇರ್‌ ಯಾರ್ಡ್‌ ಸಂಬಂಧ ವಸ್ತು ಪೂರೈಕೆ ಹಾಗೂ ತಾಂತ್ರಿಕ ಕೌಶಲ್ಯವನ್ನು ಯುವಕರು ಪಡೆಯಬೇಕಿದೆ. ಕರ್ನಾಟಕದ ಕರಾವಳಿ 320 ಕಿಮೀ ಉದ್ದಕ್ಕೆ ಇದೆ. ಇದನ್ನು ಸೇರಿದಂತೆ ಪಶ್ಚಿಮದ ಕಡಲನ್ನು ನೇವಿ ಕಾಯುತ್ತಿದೆ. ಕರ್ನಾಟಕ ಕರಾವಳಿಯಲ್ಲಿ 101 ಹಳ್ಳಿಗಳಿವೆ. 24 ದ್ವೀಪಗಳಿವೆ. 117 ಶಿಪ್‌ಲ್ಯಾಂಡಿಂಗ್‌ ಸ್ಟೇಶನ್‌ಗಳಿವೆ ಎಂದರು.

Advertisement

ಐಎನ್‌ಎಸ್‌ ಕದಂಬದ ಅಧಿಕಾರಿಗಳಾದ ಸೀಬರ್ಡ್‌ ಎರಡನೇ ಹಂತದ ಅನುಷ್ಠಾನಾಧಿಕಾರಿ ಕಿರಣಕುಮಾರ್‌ ರೆಡ್ಡಿ, ಕದಂಬ ನೆಲೆ ಆ್ಯಡಿಶನಲ್ ಕಮಾಂಡರ್‌ ಎ.ಪಿ. ಕುಲಕರ್ಣಿ, ವಿಕ್ರಮಾದಿತ್ಯ ನೌಕೆ ಕಮಾಂಡರ್‌ ಪುರುವರಿ ದಾಸ್‌, ಪಿಆರ್‌ಒ ಅಜಯ್‌ ಕಪೂರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next