Advertisement

ಆಧುನಿಕ ವಧಾಗಾರ ಕಾಮಗಾರಿ 2020ಕ್ಕೆ ಪೂರ್ಣ

04:07 PM Dec 03, 2019 | Suhan S |

ತುಮಕೂರು: ಮಾಂಸಹಾರಿಗಳಿಗೆ ಉತ್ಕೃಷ್ಟದ ಮಾಂಸ ನೀಡಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜ್ಯದಲ್ಲೇ ಅತೀ ಹೆಚ್ಚು ಕುರಿ, ಮೇಕೆ ಸಾಕಾಣಿಕೆ ಕೇಂದ್ರವಾಗಿರುವ ಶಿರಾದಲ್ಲಿ 44.63 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಆಧುನಿಕ ಕುರಿ, ಮೇಕೆ ವಧಾಗಾರದ ಕಾಮಗಾರಿ ಪ್ರಗತಿಯಲ್ಲಿದ್ದು, 2020ರ ಸೆಪ್ಟೆಂಬರ್‌ ವೇಳೆಗೆ ಕಾರ್ಯಾರಂಭ ಮಾಡಲು ಸಿದ್ಧತೆ ನಡೆಯುತ್ತಿದೆ.

Advertisement

ಜಿಲ್ಲೆಯ ಬಹುತೇಕ ತಾಲೂಕುಗಳು ಬಯಲು ಸೀಮೆ ಪ್ರದೇಶವಾಗಿದ್ದು, ಅನಾವೃಷ್ಟಿ ಹಿನ್ನೆಲೆಯಲ್ಲಿ ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ ಮಾಡುತ್ತಿದ್ದು, ರಾಜ್ಯದಲ್ಲಿ ಹೆಚ್ಚು ಕುರಿ, ಮೇಕೆ ಸಾಕುವ ಜಿಲ್ಲೆ ತುಮಕೂರು ಎನ್ನುವ ಹೆಗ್ಗಳಿಕೆ ಪಡೆದಿದೆ.

ರೈತರಿಗೆ ಅನುಕೂಲ: ಶಿರಾ, ಪಾವಗಡ, ಮಧುಗಿರಿ, ಚಿಕ್ಕನಾಯಕನಹಳ್ಳಿ ಸೇರಿ ಹತ್ತು ತಾಲೂಕಿನಲ್ಲಿಯೂ ಕುರಿ, ಮೇಕೆ ಸಾಕುವ ರೈತರಿದ್ದು, ಕುರಿ, ಮೇಕೆ ಸಾಕಾಣಿಕೆಯಿಂದ ವಾರ್ಷಿಕ ಆದಾಯ ವೃದ್ಧಿಯಾಗುತ್ತಿದೆ. ಕಡಿಮೆ ಖರ್ಚಿನಲ್ಲಿ ಆರ್ಥಿಕಸಬಲರಾಗಲು ರೈತರಿಗೆ ಅನುಕೂಲಕರವಾಗಿದೆ. ಕುರಿ, ಮೇಕೆ ಉತ್ಪನ್ನಗಳಾದ ಮಾಂಸ, ಚರ್ಮ, ಹಾಲು, ಉಣ್ಣೆಯ ಸಂಸ್ಕರಣೆ, ಮೌಲ್ಯವರ್ಧನೆ ಮಾರುಕಟ್ಟೆ ಅಭಿವೃದ್ಧಿಪಡಿಸಲು ನಿಗಮ ಮುಂದಾಗಿದ್ದು, ರಾಜ್ಯದಲ್ಲಿ ಶೇ.79 ಜನ ಮಾಂಸಹಾರಿಗಳಾಗಿದ್ದು, ಉತ್ಕೃಷ್ಟ ಕುರಿ, ಮೇಕೆ ಮಾಂಸನೀಡಲು ರಾಜ್ಯದಲ್ಲಿ 700 ಮೀಟ್‌ ಪಾರ್ಲರ್‌ ತೆರೆಯಲು ಉದ್ದೇಶಿಸಿದ್ದು, ಇದಕ್ಕಾಗಿ ಜಿಲ್ಲೆಯ ಶಿರಾತಾಲೂಕಿನ ತಾವರೆಕೆರೆ ಗ್ರಾಪಂ ವ್ಯಾಪ್ತಿಯ ಸರ್ವೇನಂ.14, 20 ಎಕರೆ ಜಾಗ ‌ದಲ್ಲಿ ಆಧುನಿಕ ವಧಾಗಾರ ಕಾಮಗಾರಿ ನಡೆಯುತ್ತಿದೆ.

ಕಾಮಗಾರಿ ಬಿರುಸು: ಗೃಹ ನಿರ್ಮಾಣ ಮಂಡಳಿ ಕಾಮಗಾರಿ 21 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಕೈಗೆತ್ತಿಕೊಂಡು ಭರದಿಂದ ಕಾಮಗಾರಿ ನಡೆಯುತ್ತಿದೆ. 2020ರ ಸೆಪ್ಟೆಂಬರ್‌ನಲ್ಲಿ ಮುಗಿಯಲಿದ್ದು, ಅಷ್ಟರಲ್ಲಿಅಗತ್ಯವಿರುವ ಶಿಥಿಲೀ ಕರಣ, ಸಂಗ್ರಹಣೆ, ಸಾಗಾಣಿಕೆ ಸೇರಿ ಇತರೆ ಆಧುನಿಕ ಉಪಕರಣ ಅಳವಡಿಸಲು ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಶಿರಾದಲ್ಲಿ ನಿರ್ಮಾಣ ವಾಗುತ್ತಿರುವ ಕುರಿ, ಮೇಕೆವಧಾಗಾರದಲ್ಲಿ ಒಂದು ದಿನಕ್ಕೆ 1500ಕ್ಕೂ ಹೆಚ್ಚು ಕುರಿ, ಮೇಕೆ ವಧೆ ಮಾಡಿ ಮಾಂಸವನ್ನು ರಾಜ್ಯದ ವಿವಿಧ ಕಡೆಗಳಲ್ಲಿ ಸರಬರಾಜು ಮಾಡಲಾಗುತ್ತದೆ. 2 ಕೋಟಿ ರೂ. ವೆಚ್ಚದಲ್ಲಿ ಚರ್ಮ ಸಂಸ್ಕರಣಾ ಘಟಕ ಮಾಡುತ್ತಿದ್ದು, ತುಮಕೂರು ಜಿಲ್ಲೆ ಸೇರಿ ಸುತ್ತಮುತ್ತ ಜಿಲ್ಲೆಗಳಲ್ಲಿ ಕುರಿ, ಮೇಕೆ ಸಾಕುವವರು ಆರ್ಥಿಕವಾಗಿ ಸಬಲರಾಗಲು ಸಹಕಾರಿ ಎನ್ನುತ್ತಾರೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ. ಕೆ. ನಾಗಣ್ಣ.

 

Advertisement

-ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next