ಚನ್ನಗಿರಿ: ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಯಂತೆ ಸಮವಸ್ತ್ರ ಕೋಡ್ ನೀಡಿ ಅಭಿವೃದ್ಧಿಗೊಳಿಸುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಯಾರೊಬ್ಬರೂ ಈ ಶಾಲೆಯಿಂದ ಮಕ್ಕಳನ್ನು ಬಿಡಿಸಬೇಡಿ. ನನ್ನ ಮೊಮ್ಮಗಳೊಬ್ಬಳು ಕೂಡ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಳೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ಸೋಮವಾರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮ ಸೇರಿ ವಿವಿಧ ಗ್ರಾಮಗಳಲ್ಲಿ ಒಟ್ಟು 8.92ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಯಾವ ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲದಂತೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದಕ್ಕೆ ನನ್ನ ಪೂರ್ತಿ ಸಹಕಾರ ನೀಡುತ್ತೇನೆ. ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಚರ್ಚಿಸಿ, ಶೆಟ್ಟಿಹಳ್ಳಿ ಶಾಲೆಗೆ ಬೇಕಾದ ಅಗತ್ಯ ಸೌಕರ್ಯ ಕಲ್ಪಿಸುವುದಕ್ಕೆ ಸೂಚನೆ ನೀಡುತ್ತೇನೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಜವಾಬ್ದಾರಿ ತೆಗೆದುಕೊಂಡು ಜಿಲ್ಲೆಯಲ್ಲಿಯೇ ಮಾದರಿ ಶಾಲೆಯನ್ನಾಗಿಸಬೇಕು. ಕಲಿಕೆಯಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವ ಮಟ್ಟದಲ್ಲಿ ಸದಾ ಮುಂದಿರುವಂತೆ ಅವರಿಗೆ ಶಕ್ತಿ ನೀಡಬೇಕು ಎಂದು ಸಲಹೆ ನೀಡಿದರು.
ತಾಲೂಕಿನಲ್ಲಿ ಯಾರೊಬ್ಬರಿಗೂ ಮನೆಯಿಲ್ಲ ಎಂಬ ಮಾತು ಕೇಳಿ ಬರದಂತೆ ಮನೆ ಮಂಜೂರು ಮಾಡಿಸುವ ಗುರಿ ಹೊಂದಿದ್ದೇನೆ. ಖಾಲಿ ನಿವೇಶನವುಳ್ಳವರು ಅರ್ಜಿ ನೀಡಿದರೆ ಅವರಿಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ತಾಪಂ ಅಧ್ಯಕ್ಷೆ ಉಷಾ ಶಶಿಕುಮಾರ, ತಹಶೀಲ್ದಾರ್ ನಾಗರಾಜ್, ಭೂಸೇನಾ ಇಲಾಖೆ ಅಧಿಕಾರಿ ತ್ಯಾಗರಾಜ್, ಮತ್ತಿತರರಿದ್ದರು.