Advertisement
2019ರ ಆಗಸ್ಟ್ 5ರಂದು ಪಚ್ಚನಾಡಿಯಲ್ಲಿ ಕೆಲವು ದಶಕಗಳಿಂದ ರಾಶಿ ಬಿದ್ದು ಪರ್ವತಾಕಾರಕ್ಕೆ ಬೆಳೆದು ನಿಂತಿದ್ದ ತ್ಯಾಜ್ಯವೆಲ್ಲ ಮಳೆ ನೀರಿನೊಂದಿಗೆ ಕುಸಿದು ಮನೆ, ಕೃಷಿ ಭೂಮಿ, ಬಾವಿ ಇತ್ಯಾದಿಗಳೆಲ್ಲ ನಾಶ ವಾಗಿದ್ದವು. 1 ಕಿ.ಮೀ. ದೂರಕ್ಕೆ ವರೆಗೆ ಈ ಕಸದ ರಾಶಿ ಕುಸಿದು ಇಲ್ಲಿನ ಕೃಷಿಕರ ಸಮೃದ್ಧ ಭೂಮಿಯ ಮೇಲೆ ಕುಳಿತಿದ್ದರೆಂದ ಅವರೆಲ್ಲ ಬದುಕಿನ ದಾರಿಯಿಲ್ಲದೆ ಸೋತಿದ್ದಾರೆ.
Related Articles
Advertisement
ಸಂತ್ರಸ್ತರು ಆಗಾಗ ಮನಪಾ ಕಚೇರಿ ಅಲೆದಾಡುತ್ತಿದ್ದಾರೆ.
ಹಿಂದೆ ಭೂಮಿಯ ಮಾಲಕತ್ವಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರ ಪಡೆದಿದ್ದರು. ಕೆಲವು ದಿನ ಹಿಂದೆ ಕೇಳಿದಾಗ ದಾಖಲೆಗಳಿಲ್ಲ ಎನ್ನುತ್ತಿದ್ದರು, ಈಗ ಮತ್ತೆ “ಅನಿವಾರ್ಯ ಪ್ರಕ್ರಿಯೆ’ಗಾಗಿ ದಾಖಲೆಗಳನ್ನು ನೋಟರಿ ಸಹಿ ಮಾಡಿಸಿ ನೀಡಲು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಎಷ್ಟು ಮೊತ್ತವೆಂದು ತಿಳಿಸಲಿ
ಸದ್ಯ ಆ ಭಾಗದಲ್ಲಿ ಸೆಂಟ್ಸ್‌ಗೆ 2.5 ಲಕ್ಷ ರೂ. ಸರಕಾರಿ ಮೌಲ್ಯದರ ಇದೆ. ಮಾರುಕಟ್ಟೆ ದರ 4 ಲಕ್ಷ ರೂ., ಆದರೆ ಅಷ್ಟನ್ನು ನೀಡಲಾಗದು, ಎಷ್ಟು ಸಾಧ್ಯವೋ ಅಷ್ಟು ನೀಡುವುದಾಗಿ ಹಾಗೂ ಆ ಮೊತ್ತ ನೇರವಾಗಿ ಸಂತ್ರಸ್ತರ ಖಾತೆಗೆ ಬರುತ್ತದೆ. ಅದಕ್ಕೆ ಯಾವುದೇ ಆಕ್ಷೇಪ ಇದ್ದರೆ ಕೋರ್ಟ್‌ಲ್ಲಿ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಮೊತ್ತ ಎಷ್ಟೆನ್ನುವುದು ನಮಗೆ ತಿಳಿಸಿದ್ದರೆ ಅನುಕೂಲವಿತ್ತು ಎನ್ನುತ್ತಾರೆ ಮನೆ ಕಳೆದುಕೊಂಡಿರುವ ಶ್ರೀರಾಮ್ ಭಟ್.
ಮಧ್ಯಂತರ ಪರಿಹಾರ ಸೆಂಟ್ಸ್‌ಗೆ 50 ಸಾವಿರ ರೂ. ನೀಡಿದ್ದಾರೆ, ನಮಗೆ ಒಂದೋ ಬೇರೆ ಜಾಗ ಕೊಡಿ ಅಥವಾ ವಾಣಿಜ್ಯಮೌಲ್ಯದಂತೆ ಪರಿಹಾರ ನೀಡಲೇಬೇಕು ಎನ್ನುವುದು ಅವರ ಆಗ್ರಹ.
10 ಮಂದಿ ಮರಳಿ ಮಣ್ಣಿಗೆ
ಕಸ ಕುಸಿತದ ಪರಿಣಾಮವಾಗಿ 27 ಮಂದಿ ಸಂತ್ರಸ್ತರಾದರೂ ಅದರಲ್ಲಿ 10 ಮಂದಿ ತಮ್ಮ ಮಣ್ಣು ಬಿಟ್ಟಿರಲಾರದೆ ಅಲ್ಲಿಗೇ ಮರಳಿ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ನೇರವಾಗಿ ಕಸದ ಪರಿಣಾಮ ಆಗಿಲ್ಲ, ಆದರೆ ರಸ್ತೆಗೆ ಭಾರೀ ಪ್ರಮಾಣದಲ್ಲಿ ಕಸ ನಿಂತಿತ್ತು.
ಈಗ ಕಸದ ರಾಶಿಯ ಮೇಲೆ ತಾತ್ಕಾಲಿಕವಾಗಿ ಇಂಟರ್ ಲಾಕ್ ರಸ್ತೆ ಮಾಡಿಕೊಟ್ಟಿದ್ದಾರೆ. 7 ಕೃಷಿ ಕುಟುಂಬಗಳು ತಮ್ಮ ಕೆಲಸ ಮುಂದುವರಿಸಿದ್ದಾರೆ. ಹಾಗಾಗಿ ಬದುಕು ಸಾಗುತ್ತಿದೆ, ಶಾಶ್ವತ ರಸ್ತೆ ಮಾಡಿಕೊಟ್ಟರೆ ನಮಗೆ ಅದೇ ದೊಡ್ಡ ಪರಿಹಾರ ಎನ್ನುತ್ತಾರೆ ಸ್ಥಳೀಯರಾದ ರಂಜಿತ್.
13 ಮಂದಿ ಫ್ಲ್ಯಾಟ್‌ಗಳಲ್ಲಿ ವಾಸ
ಸುಮಾರು 13 ಮಂದಿ ಕೆಎಚ್‌ಬಿಯವರ ಫ್ಲಾಟ್ ಗಳಲ್ಲಿ ವಾಸಿಸುತ್ತಿದ್ದಾರೆ. ಉಳಿದವರು ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದು, ಪರಿಹಾರ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಪರಿಹಾರಕ್ಕೆ ಸಂಬಂಧಿಸಿ ಸಭೆ ಕರೆಯಲಾಗಿದ್ದು, ಕೆಲವರು ತಮ್ಮ ಭೂಮಿ ಬಿಟ್ಟು ಬರುವುದಿಲ್ಲ ಎಂದು ಲಿಖೀತವಾಗಿ ತಿಳಿಸಿದ್ದಾರೆ. ಇನ್ನು ಹಲವರು ತಮಗೆ ಸಿಕ್ಕಿದ ಪರಿಹಾರ ಸಾಲದು ಎಂದು ಸಭೆಯಲ್ಲಿ ಹೇಳಿಕೊಂಡಿದ್ದಾರೆ.
ಪ್ರಕ್ರಿಯೆ ಚಾಲ್ತಿಯಲ್ಲಿದೆ: ಅಂತಿಮ ಪರಿಹಾರ ನಿರ್ಣಯಕ್ಕಾಗಿ ಹಿಯರಿಂಗ್ ಆಗಿದೆ. ಕೆಲವೊಂದು ಆಕ್ಷೇಪಗಳು ಬಂದಿವೆ. ಕೆಲವರು ಅಲ್ಲೇ ಇರುವುದಾಗಿ ಹೇಳುತ್ತಿದ್ದಾರೆ, ಆದರೆ ಆರೋಗ್ಯದ ದೃಷ್ಟಿಯಿಂದ ಅದು ಸರಿಯೇ ಅಲ್ಲವೇ ಎನ್ನುವುದನ್ನು ದೃಢಪಡಿಸಿಕೊಂಡು ಅಂತಿಮ ಪರಿಹಾರ ವಿತರಣೆ ಮಾಡಲಾಗುವುದು. – ಅಕ್ಷಯ್ ಶ್ರೀಧರ್, ಮನಪಾ ಆಯುಕ್ತರು
-ವೇಣುವಿನೋದ್ ಕೆ.ಎಸ್.