ಮದ್ದೂರು: ಕೇಂದ್ರ -ರಾಜ್ಯ ಸರ್ಕಾರಗಳು ಗ್ರಾಪಂ ನೌಕರರ ಬೇಡಿಕೆ ಈಡೇರಿಸಲು ಕ್ರಮ ವಹಿಸಿ ನೌಕರರ ಹಿತ ಕಾಯಬೇಕೆಂದು ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಆಗ್ರಹಿಸಿದರು.
ಪಟ್ಟಣದ ಎಚ್.ಕೆ.ವಿ.ನಗರದ ಶಿವ ಕನ್ವೆನ್ಷನ್ ಹಾಲ್‌ನಲ್ಲಿ ಗ್ರಾಪಂ ನೌಕರರ ಸಂಘ ಆಯೋಜಿಸಿದ್ದ 5ನೇ ಮಂಡ್ಯ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೇವೆ ಕಾಯಂಗೊಳಿಸಿ: ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಕಳೆದ 20 ತಿಂಗಳಿಂದಲೂ ವೇತನ ಬಿಡುಗಡೆ ಮಾಡದೆ ತಾರತಮ್ಯವೆಸಗಲಾಗುತ್ತಿದೆ. ತೆರಿಗೆ ವಸೂಲಾತಿ ಮಾಡದ ನೆಪದಲ್ಲಿ ನೌಕರರ ಬೇಡಿಕೆಗಳ ಈಡೇರಿಕೆಗೆ ನಿರ್ಲಕ್ಷ್ಯ ವಹಿಸಿದ್ದು ಕೂಡಲೇ ಸರ್ಕಾರ ನೌಕರರನ್ನು ಕಾಯಂ ಗೊಳಿಸುವಂತೆ ಒತ್ತಾಯಿಸಿದರು.
ಬೇಡಿಕೆಗಳು: ಕನಿಷ್ಠ 21 ಸಾವಿರ ವೇತನ ನೀಡುವ ಜತೆಗೆ ಬಿಲ್‌ಕಲೆಕ್ಟರ್ ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗೆ ಸಿ ದರ್ಜೆ ವೇತನ ಶ್ರೇಣಿ ಪಂಪ್ ಆಪರೇಟರ್ ಅಟೆಂಡರ್, ಪೌರ ಕಾರ್ಮಿಕರಿಗೆ ಡಿ. ದರ್ಜೆ ವೇತನ ಶ್ರೇಣಿ ನಿಗದಿಗೊಳಿಸಬೇಕು. ಬಜೆಟ್ ನಲ್ಲಿ ಘೋಷಣೆ ಮಾಡುವ ಜತೆಗೆ ವೇತನಕ್ಕಾಗಿ 890 ಕೋಟಿ ರೂ.ಹಣದ ಅವಶ್ಯಕತೆಯಿದ್ದು 518 ಕೋಟಿ ರೂ. ಮಾತ್ರ ಹಿಂದಿನ ಸರ್ಕಾರ ಮಂಜೂರು ಮಾಡಿದ್ದು ಕೂಡಲೇ ಉಳಿಕೆ ಹಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು. ಈ ಮುನ್ನ ಮೆರವಣಿಗೆ ನಡೆಸಿ ಕಾರ್ಯಕ್ರಮ ಸ್ಥಳ ತಲುಪಿದರು.
ಸಿಐಟಿಯು ಸಂಘಟನೆ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣಯ್ಯ, ಸಿ.ಕುಮಾರಿ, ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ರಾಮಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್.ರಾಮು, ಪದಾಧಿಕಾರಿಗಳಾದ ಮೊದೂರ್ ನಾಗರಾಜು, ಎಂ.ಎಂ.ಶಿವಕುಮಾರ್, ದೇವೇಗೌಡ, ಚಲುವರಾಜು, ಆನಂದ್, ಬಸವರಾಜು ಇದ್ದರು.