ದಾವಣಗೆರೆ: ಜುಲೈ 5ರಂದು ಕೇಂದ್ರ ಸರ್ಕಾರ ಮಂಡನೆ ಮಾಡುವ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸೋಮವಾರ ಎಐಟಿಯುಸಿ ಕಾರ್ಯಕರ್ತರು ನಗರದ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.
ಕಳೆದ 16 ವರ್ಷಗಳಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರು ಯಾವುದೇ ಸೌಲತ್ತುಗಳಿಂದ ವಂಚಿತರಾಗಿ ದುಡಿಯುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಅಡುಗೆಯವರಿಗೆ 2700ರೂ. ಹಾಗೂ ಸಹಾಯಕರಿಗೆ 2600ರೂ. ನೀಡುತ್ತಿದ್ದು, ಈ ಗೌರವಧನದಿಂದ ಜೀವನ ನಿರ್ವಹಣೆ ಮಾಡುವುದು ತುಂಬಾ ಕಷ್ಟವಾಗುತ್ತಿದೆ ಎಂದು ದೂರಿದರು.
ಸರ್ಕಾರ ಬಿಸಿಯೂಟ ತಯಾರಿಕರಿಗೆ ಕನಿಷ್ಠ ವೇತನ ಜಾರಿಗೆ ತರಬೇಕು, ಶಾಲೆಗಳ ಬಿಸಿಯೂಟ ಪೂರೈಕೆಯನ್ನು ಇಸ್ಕಾನ್, ಮತ್ತಿತರೆ ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರವನ್ನು ಕೈಬಿಡಬೇಕು. ಕೆಲಸದ ಭದ್ರತೆ ಒದಗಿಸಬೇಕು, ಬಿಸಿಯೂಟ ಸಿಬ್ಬಂದಿಯನ್ನು ಶಾಲಾ ಸಿಬ್ಬಂದಿಯನ್ನಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ತಯಾರಕರನ್ನು ಕಾರ್ಮಿಕರೆಂದು ಪರಿಗಣಿಸಿ, ಕಾರ್ಮಿಕ ಕಾಯ್ದೆಯಡಿ ತರಬೇಕು. ಪಿಎಫ್,ಇಎಸ್‌ಐ ಜಾರಿಗೊಳಿಸಬೇಕು, ಬಿಸಿಯೂಟ ತಯಾರಕರಿಗೆ 2ಲಕ್ಷ ರೂ. ಅಪಘಾತ ಪರಿಹಾರ ಹಾಗೂ 5 ಲಕ್ಷ ರೂ. ಮರಣ ಪರಿಹಾರ ಕೊಡಬೇಕು. 60 ವರ್ಷ ಆದವರಿಗೆ ಮಾಸಿಕ 3ಸಾವಿರ ರೂ. ನಿವೃತ್ತಿ ಪಿಂಚಣಿ ಮತ್ತು 2 ಲಕ್ಷ ರೂ. ಇಡುಗಂಟು ಹಣ ನೀಡಬೇಕು, ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಎಐಟಿಯುಸಿ ರಾಜ್ಯ ಗೌರವಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ಖಜಾಂಚಿ ರುದ್ರಮ್ಮ ಬೆಳಲಗೆರೆ, ಸಿ.ರಮೇಶ್, ಆವರಗೆರೆ ಚಂದ್ರು, ಮಹಮ್ಮದ್ ಬಾಷಾ, ಆವರಗೆರೆ ಚಂದ್ರು, ಜ್ಯೋತಿಲಕ್ಷ್ಮಿ, ಸರೋಜ, ವನಜಾಕ್ಷಿ, ಸಾವಿತ್ರಮ್ಮ, ದ್ರಾಕ್ಷಾಣಮ್ಮ, ಲಕ್ಷ್ಮೀಬಾಯಿ, ಮಮತ, ಸುಜಾತಮ್ಮ, ಮಂಜಮ್ಮ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.