ಮದ್ದೂರು: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘಟನೆಯ(ಮೂಲ ಸಂಘಟನೆ) ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿಮಂದಿರದ ಬಳಿ ಜಮಾಯಿಸಿದ ಸಂಘಟನೆ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರಲ್ಲದೇ ಆಡಳಿತ ನಡೆಸುವ ಸರ್ಕಾರಗಳು ರೈತರನ್ನು ನಿರ್ಲಕ್ಷಿಸಿದ್ದು ಕೂಡಲೇ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ವಿಳಂಬ ಧೋರಣೆ: ಪಟ್ಟಣದ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಾರ್ವಜನಿಕ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯದೆ ಪ್ರತಿನಿತ್ಯ ದೂರದ ಗ್ರಾಮಗಳಿಂದ ಅಲೆದಾಡುತ್ತಿದ್ದು, ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ತಾಲೂಕಿನಲ್ಲಿ ಕಟಾವಿಗೆ ಬಂದಿರುವ ಕಬ್ಬು ಅರಿಸಲು ಎರಡೂ ಕಾರ್ಖಾನೆಗಳ ಅಧಿಕಾರಿಗಳು ಕಬ್ಬು ಸರಬರಾಜು ಮಾಡಿಸಿಕೊಳ್ಳಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ರೈತ ವಿರೋಧಿ ನೀತಿ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರೈತಪರ ಯೋಜನೆಗಳನ್ನು ಜಾರಿಗೊಳಿಸದೆ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ತಾಲೂಕು ಕಚೇರಿಯಲ್ಲಿ ವಿಧವಾ ವೇತನ, ವೃದ್ಧಾಪ್ಯ, ವಿಕಲಚೇತನ, ಆರ್‌ಟಿಸಿ ತಿದ್ದುಪಡಿ, ಭೂ ದಾಖಲಾತಿಗೆ ಸಂಬಂಧಿಸಿದಂತೆ ಅರ್ಜಿಗಳು ಸಮರ್ಪಕವಾಗಿ ವಿಲೇವಾರಿಯಾಗದೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಹಣದ ದಾಹಕ್ಕೆ ಮುಗಿಬಿದ್ದಿದ್ದಾರೆ ಎಂದು ದೂರಿದರು.
ಬೆಳೆ ನಷ್ಟ ಪರಿಹಾರ: ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಯಾವುದೇ ಯೋಜನೆಗಳು ತಲುಪುತ್ತಿಲ್ಲ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳೆ ಕಳೆದುಕೊಂಡಿರುವ ರೈತರಿಗೆ ಪರಿಹಾರ ವಿತರಿಸಲು ಜಿಲ್ಲಾಡಳಿತ ಮುಂದಾಗಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ: ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಸಕ್ಕರೆ ಕಾರ್ಖಾನೆಗಳು ಸಮರ್ಪಕವಾಗಿ ಕಬ್ಬು ನುರಿಸದ ಹಿನ್ನೆಲೆಯಲ್ಲಿ ನ.4ರಂದು ರೈತ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಬೆಳೆಗಾರರು ಭಾಗವಹಿಸಬೇಕೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ತಾಲೂಕು ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಕೆಂಪೇಗೌಡ, ಪದಾಧಿಕಾರಿಗಳಾದ ರಾಮಣ್ಣ, ರಾಮೇಗೌಡ, ಕೆ.ಜಿ.ಉಮೇಶ್, ಸೋ.ಸಿ.ಪ್ರಕಾಶ್, ಕಾಳಯ್ಯ, ನಿಂಗೇಗೌಡ, ಚಿಕ್ಕಣ್ಣ, ಸತೀಶ್, ಕಿರಣ್ ಮತ್ತಿತರರು ಭಾಗವಹಿಸಿದ್ದರು.