Advertisement
ಸರಕಾರದ ನಿರ್ದೇಶನದಂತೆ ಹುಬ್ಬಳ್ಳಿ ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯದಲ್ಲಿ ಪಾಲಿಕೆಯ ಮಾಜಿ ಸದಸ್ಯ ರಾಮಣ್ಣ ಬಡಿಗೇರ, ಮುಖಂಡ ಹನುಮಂತಪ್ಪ ಉಣಕಲ್ಲ ಗ್ರಾಮದ ಪ್ರಮುಖಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು.ಗೋಕುಲ ಗ್ರಾಮದ ಸರ್ವೇ ನಂ. 49ರ ಕುರಡಿಕೇರಿ ಹಾಗೂ ಸರ್ವೇ ನಂ. 364ರ ಚಿಕ್ಕೇರೆಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿ, ಇಟ್ಟಿಗೆ ಭಟ್ಟಿಗಳನ್ನು ನಡೆಸುತ್ತಿದ್ದಾರೆ. ಇವೆರಡು ಕೆರೆಗಳಿಗೆ ತ್ಯಾಜ್ಯ-ಕಲ್ಮಷ ನೀರು ಸೇರುತ್ತಿದೆ. ಕೈಗಾರಿಕೆಗಳ ಹಾಗೂ ಗ್ರಾಮದ ಚರಂಡಿ ನೀರು ಕುರಡಿಕೇರಿಗೆ ಸೇರಿ ಕಲುಷಿತಗೊಂಡಿದೆ. ಜಾನುವಾರುಗಳು ಕೆರೆ ನೀರು ಕುಡಿದು ಮೃತಪಟ್ಟಿವೆ. ಈ ಕುರಿತು ತಹಶೀಲ್ದಾರರು ಹಾಗೂ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದೆಂದರು. ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಮಾಡ್ಯಾಳ ಭೂ ದಾಖಲೆ, ಸರ್ವೇ ಇಲಾಖೆಗಳ ಅಧಿಕಾರಿಗಳೊಂದಿಗೆ ಕೆರೆಗಳಿಗೆ ತೆರಳಿ ವೀಕ್ಷಿಸಿದರು. ಸೋಮವಾರದಿಂದಲೇ ಕೆರೆ ಸರ್ವೇ ಕಾರ್ಯ ನಡೆಸುವಂತೆ ಸೂಚಿಸಿದರು.
Related Articles
Advertisement
2018ರಲ್ಲಿಯಾದ ಅತಿವೃಷ್ಟಿಯಿಂದ ಗ್ರಾಮದ 5 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಇವುಗಳಿಗೆ ಭಾಗಶಃ ಹಾನಿ ಪರಿಹಾರ ನೀಡಲಾಗಿದೆ.ಸಂಪೂರ್ಣ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಮಹಾಮಳೆ 15 ದಿನಗಳ ಕಾಲ ಎಡಬಿಡದೆ ಸುರಿದಿದ್ದರಿಂದ ಒಮ್ಮೆ ಮನೆ ಹಾನಿ ಕುರಿತು ಸರ್ವೇ ಮಾಡಿ, ದಾಖಲೆಗಳನ್ನು ರಾಜೀವಗಾಂಧಿ ವಸತಿ ನಿಗಮದ ಪೋರ್ಟಲ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ. ನಂತರ ಮುಂದುವರಿದ ಮಳೆಯಲ್ಲಿ ಮನೆಗಳು ಸಂಪೂರ್ಣಹಾನಿಗೊಳಗಾಗಿವೆ. ಈ ಕುರಿತು ತಾಂತ್ರಿಕ ಕಾರಣಗಳಿಂದ ಮಾಹಿತಿ ಅಪ್ ಲೋಡ್ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಭಾಗಶಃ ಪರಿಹಾರಧನ
ಪಾವತಿಯಾಗಿದೆ. ಈ ರೀತಿ ನಗರ ವ್ಯಾಪ್ತಿಯಲ್ಲಿ 172 ಮನೆಗಳು ಹಾನಿಗೊಳಗಾಗಿವೆ. ಈ ಕುರಿತು ಜಿಲ್ಲಾಧಿಕಾರಿಗಳ ಮುಖಾಂತರ ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರೆತ ಕೂಡಲೇ ಜಿಪಿಎಸ್ ಆಧಾರಿತ ಜಂಟಿ ಸರ್ವೇ ಕಾರ್ಯ ನಡೆಸಿ ಪೂರ್ಣಪ್ರಮಾಣದ ಪರಿಹಾರ ನೀಡಲಾಗುವುದು ಎಂದರು.
20ರೂ. ಬಾಂಡ್ ಪೇಪರ್ ಮೇಲೆ ಖಾಸಗಿ ಜಮೀನುಗಳಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿದವರನ್ನು ಅಕ್ರಮ-ಸಕ್ರಮ ಯೋಜನೆಯಡಿ ಖಾತಾ ಮಾಡಿಕೊಡಲು ಬರಲ್ಲ. ಜಮೀನಿನ ಮಾಲಿಕರ ಹೆಸರಿನಲ್ಲಿ ಬಿನ್ ಶೇತ್ಕಿಗೆಅರ್ಜಿ ಸಲ್ಲಿಸಬೇಕು. ನಂತರ ಭೂದಾಖಲೆಗಳಲ್ಲಿ ಕೆಜೆಪಿ ಆದ ಮೇಲೆ ಖಾತೆ ಮಾಡಿಕೊಡಲಾಗುತ್ತದೆ. ಇದನ್ನು ವೈಯಕ್ತಿಕವಾಗಿ ಮಾಡಿಸಿಕೊಳ್ಳಬೇಕೆಂದು ಗ್ರಾಮಸ್ಥರಿಗೆ ತಿಳಿಸಿದರು.
ಗ್ರಾಮದಲ್ಲಿ ಸರಕಾರದ ವತಿಯಿಂದ ಸ್ಮಶಾನ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೆ ಇದರ ಪಕ್ಕದಲ್ಲಿಪರಿಶಿಷ್ಟರಿಗೆ ಸರಕಾರದಿಂದ ನೀಡಿರುವಜಮೀನುಗಳಿವೆ. ಆದರೆ ಇವುಗಳಿಗೆ ತೆರಳುವ ಸಂಪರ್ಕ ರಸ್ತೆ ಇಲ್ಲ. ಸ್ಮಶಾನದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮೂವರು ಯಾವುದೇ ಸಂಬಳ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರನ್ನು ಪಾಲಿಕೆ ವತಿಯಿಂದ ಗುತ್ತಿಗೆ ನೌಕರರನ್ನಾಗಿ ಕೆಲಸಕ್ಕೆತೆಗೆದುಕೊಳ್ಳುವಂತೆ ಮನವಿ ಮಾಡಲಾಯಿತು.ಈ ಕುರಿತು ಸೂಕ್ತ ಕ್ರಮ ಜರುಗಿಸಿ, ಪಾಲಿಕೆ ಆಯುಕ್ತರೊಂದಿಗೆ ಮಾತನಾಡುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು.
ಗ್ರಾಮದ ದೇವಸ್ಥಾನಗಳಿಗೆ ಸುಣ್ಣ ಬಣ್ಣ ಬಳಿಸುವಂತೆ, ಸಾಮಾಜಿಕ ಭದ್ರತಾ ಯೋಜನೆಯಡಿಪಿಂಚಣಿ, ಭೂ ಮೋಜಣಿ, ಒಳ ಚರಂಡಿ ಸ್ವತ್ಛತೆ,ಕುಡಿಯುವ ನೀರಿನ ಸಂಪರ್ಕ, ಆಧಾರ್ ಲಿಂಕ್ ಹಾಗೂ ತಿದ್ದುಪಡಿಗಾಗಿ ಸಾರ್ವಜನಿಕರು ಅರ್ಜಿ ಸಲ್ಲಿಸಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿಜಯಕುಮಾರ ರ್ಯಾಗಿ, ಅಪರತಹಶೀಲ್ದಾರ್ ವಿಜಯಕುಮಾರ ಕಡಕೋಳ, ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕಎಂ.ಜಿ. ಖಂಡಾಟೆ, ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ ಜಿ., ಹಿರೇನಾಯ್ಕರ, ಬಾಬಾಸಾಬಲಡಗಿ ಸೇರಿದಂತೆ ಇತರೆ ಇಲಾಖೆಗಳ ಅಧಿ ಕಾರಿಗಳು ಇದ್ದರು. ಇದೇ ಸಂದರ್ಭದಲ್ಲಿಗ್ರಾಮಸ್ಥರು ಅತಿವೃಷ್ಟಿ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ನಿರ್ವಹಸಿದ ತಹಶೀಲ್ದಾರ್,ಗ್ರಾಮ ಲೆಕ್ಕಿಗ ಪರಮಾನಂದ ಶಿವಳ್ಳಿಮಠ, ಗ್ರಾಮಸಹಾಯಕ ಮಾಲತೇಶ ಅವರನ್ನು ಸನ್ಮಾನಿಸಿದರು. ಇಂದಿರಾಗಾಂಧಿ ಮಾಸಾಶನ ಮಂಜೂರು ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಭೂಮಿ ಮಂಜೂರು :
ಗೋಕುಲ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರ ಸ್ಥಾಪನೆಗೆ ಸರಕಾರಿ ಭೂಮಿ ಮಂಜೂರುಮಾಡಿದರೆ, ಆರೋಗ್ಯ ಇಲಾಖೆಯಿಂದ ಆಸ್ಪತ್ರೆ ಆರಂಭಿಸಲಾಗುವುದು. ಇದಕ್ಕೆ ಭೂಮಿಮಂಜೂರು ಮಾಡುವಂತೆ ಗ್ರಾಮಸ್ಥರುಮನವಿ ಮಾಡಿದರು. ಸರಕಾರದ ಗಾಂವ್‌ಠಾಣಾ ಭೂಮಿಯನ್ನು ಮಂಜೂರು ಮಾಡುವುದಾಗಿ ತಹಶೀಲ್ದಾರ್ ಹೇಳಿದರು.
33 ಅರ್ಜಿಗಳು ಸಲ್ಲಿಕೆ :
ಗೋಕುಲದಲ್ಲಿ ನಡೆದ ಗ್ರಾಮ ವಾಸ್ತವ್ಯಕಾರ್ಯಕ್ರಮದಲ್ಲಿ ಒಟ್ಟು 33 ಅರ್ಜಿಗಳುಸಲ್ಲಿಕೆಯಾಗಿದವು. ಅವುಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 21 ಹಾಗೂ ಬೇರೆ ಇಲಾಖೆಗೆ ಸಂಬಂಧಿಸಿದ 12 ಅರ್ಜಿಗಳುಸಲ್ಲಿಕೆಯಾಗಿವೆ. ಇದರಲ್ಲಿ ಸ್ಥಳದಲ್ಲಿಯೇ 20 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಇನ್ನು 13 ಅರ್ಜಿಗಳು ಬಾಕಿ ಉಳಿದಿವೆ.