Advertisement

ಬೆಲೆಯೇರಿಕೆ ಎಫೆಕ್ಟ್: ಇಂಧನ ಮಾರಾಟ ಕುಸಿತ

10:54 PM Apr 16, 2022 | Team Udayavani |

ನವದೆಹಲಿ: ಕೇವಲ 16 ದಿನಗಳ ಅವಧಿಯಲ್ಲಿ ತೈಲ ದರವು ದಾಖಲೆಯ ಏರಿಕೆ ಕಂಡ ಪರಿಣಾಮ, ಪ್ರಸಕ್ತ ತಿಂಗಳ ಮೊದಲಾರ್ಧದಲ್ಲಿ ಇಂಧನದ ಮಾರಾಟ ಪ್ರಮಾಣವು ಗಣನೀಯವಾಗಿ ಕುಸಿದಿತ್ತು ಎಂದು ಕೈಗಾರಿಕೆಗಳ ದತ್ತಾಂಶ ತಿಳಿಸಿದೆ.

Advertisement

ಮಾರ್ಚ್‌ ತಿಂಗಳ ಮೊದಲ 15 ದಿನಗಳಿಗೆ ಹೋಲಿಸಿದರೆ ಏಪ್ರಿಲ್‌ ತಿಂಗಳ ಮೊದಲಾರ್ಧದಲ್ಲಿ ಪೆಟ್ರೋಲ್‌ ಮಾರಾಟವು ಶೇ. 10ರಷ್ಟು ಇಳಿಕೆಯಾಗಿದೆ. ಡೀಸೆಲ್‌ ಬೇಡಿಕೆಯು ಶೇ.15.6ರಷ್ಟು ಕುಸಿತ ದಾಖಲಿಸಿದೆ. ಇನ್ನು, ಅಡುಗೆ ಅನಿಲದ ವಿಚಾರಕ್ಕೆ ಬಂದರೆ, ಏ.1-15ರ ಅವಧಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಮಾರಾಟವು ಶೇ. 1.7ರಷ್ಟು ಇಳಿದಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಏ.1-15ರ ಅವಧಿಯಲ್ಲಿ 1.12 ದಶಲಕ್ಷ ಟನ್‌ ಪೆಟ್ರೋಲ್‌ ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ. 12.1ರಷ್ಟು ಹೆಚ್ಚು. ಆದರೆ, ಪೆಟ್ರೋಲ್‌ ಬಳಕೆ ಪ್ರಮಾಣವು 2022ರ ಇದೇ ಅವಧಿಯಲ್ಲಿ 1.24 ದಶಲಕ್ಷ ಟನ್‌ ಆಗಿದ್ದರೆ, ಈ ವರ್ಷ ಶೇ.9.7ರಷ್ಟು ಕಡಿಮೆಯಿದೆ ಎಂದು ಅಂಕಿಅಂಶ ಹೇಳಿದೆ. ಪ್ರಸಕ್ತ ವರ್ಷದ ಮಾರ್ಚ್‌ ತಿಂಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟವು ಕ್ರಮವಾಗಿ ಶೇ. 18 ಮತ್ತು ಶೇ. 23.7ರಷ್ಟು ಹೆಚ್ಚಳವಾಗಿತ್ತು. ಬೆಲೆಯೇರಿಕೆಯ ನಿರೀಕ್ಷೆಯಿಂದ ಕೆಲವರು ಮೊದಲೇ ಟ್ಯಾಂಕ್‌ ಫುಲ್ ಮಾಡಿಟ್ಟುಕೊಂಡಿದ್ದರು ಎನ್ನಲಾಗಿದೆ.

ಮಾರ್ಚ್‌ 22ರಿಂದ ಏ.6ರ ನಡುವೆ ತೈಲ ದರವು ಲೀಟರ್‌ಗೆ 10 ರೂ.ಗಳಷ್ಟು ಏರಿಕೆಯಾಗಿದೆ. ಮಾ.22ರಂದು ಎಲ್‌ಪಿಜಿ ದರ 50 ರೂ. ಏರಿಕೆಯಾದ ಕಾರಣ, ಸಿಲಿಂಡರ್‌ಗೆ 949.50 ರೂ. ಆಗಿದೆ.

ಚಾಲ್ತಿ ಖಾತೆ ಕೊರತೆ ಹೆಚ್ಚಳ ಭೀತಿ
ಜಾಗತಿಕ ಕಚ್ಚಾ ತೈಲದ ದರ ಇದೇ ರೀತಿ ಏರಿಕೆಯಾಗುತ್ತಾ ಹೋದರೆ, ಭಾರತದ ಚಾಲ್ತಿ ಖಾತೆ ಕೊರತೆಯು (ಆಯಾತ-ನಿರ್ಯಾತದ ನಡುವಿನ ಅಂತರ) ಗಗನಕ್ಕೇರುವ ಭೀತಿ ಆರಂಭವಾಗಿದೆ. ಕಚ್ಚಾ ತೈಲ ದರವೇನಾದರೂ ಬ್ಯಾರೆಲ್‌ಗೆ 150 ಡಾಲರ್‌ಗೆ ತಲುಪಿದರೆ, 2022ರ ಚಾಲ್ತಿ ಖಾತೆ ಕೊರತೆಯು(ಸಿಎಡಿ) ಜಿಡಿಪಿಯ ಶೇ.5ಕ್ಕಿಂತಲೂ ಹೆಚ್ಚಾಗಲಿದೆ. ಇದು ದೇಶದ ಆರ್ಥಿಕತೆಗೆ ಭಾರೀ ಪೆಟ್ಟು ನೀಡಲಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ರೇಟಿಂಗ್‌ ಸಂಸ್ಥೆ ಹೇಳಿದೆ. ಆಮದು ಬಿಲ್‌ ಹೆಚ್ಚಳವಾದ ಕಾರಣ ಕಳೆದ ಡಿಸೆಂಬರ್‌ಗೆ ಅಂತ್ಯವಾದ ತ್ತೈಮಾಸಿಕ ಅವಧಿಯಲ್ಲಿ ದೇಶದ ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇ.2.7ಕ್ಕೆ ತಲುಪಿತ್ತು. ಅದಕ್ಕೂ ಹಿಂದಿನ ತ್ತೈಮಾಸಿಕದಲ್ಲಿ ಇದು ಜಿಡಿಪಿಯ ಶೇ.1.3ರಷ್ಟಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next