ನವದೆಹಲಿ:ಸೌದಿ ಅರೇಬಿಯಾದ ಅರಾಮ್ಕೊದಲ್ಲಿನ ತೈಲ ಉತ್ಪನ್ನ ಘಟಕಗಳ ಮೇಲೆ ದಾಳಿ ನಡೆದ ಬಳಿಕ ಜಾಗತಿಕ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಾಣತೊಡಗಿದ್ದು, ಇದೀಗ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಬೆಲೆ 74 ರೂ. ಗೆ ಹಾಗೂ ಮುಂಬೈನಲ್ಲಿ ಪೆಟ್ರೋಲ್ ಲೀಟರ್ ಬೆಲೆ 80 ರೂಪಾಯಿಗೆ ಏರಿಕೆಯಾಗಿದೆ.
ಮಂಗಳವಾರವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 74.13 ರೂ. ಆಗಿದ್ದು, ಡೀಸೆಲ್ ಲೀಟರ್ ಗೆ 67.07 ರೂಪಾಯಿಗೆ ಏರಿಕೆಯಾಗಿದೆ.
ಮುಂಬೈಯಲ್ಲಿ ಪೆಟ್ರೋಲ್ ಲೀಟರ್ ಗೆ 79.79 ರೂಪಾಯಿ ಹಾಗೂ ಡೀಸೆಲ್ ಲೀಟರ್ ಗೆ 70.37 ರೂ.ಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಸೌದಿ ಅರೇಬಿಯಾದಲ್ಲಿ ತೈಲ ಘಟಕಗಳ ಮೇಲೆ ದಾಳಿ ನಡೆದ ಬಳಿಕ ಜಾಗತಿಕ ತೈಲ ಆಮದು ವಹಿವಾಟಿನಲ್ಲಿ ಬೆಲೆ ಏರಿಕೆ ಕಂಡಿದ್ದು, ಭಾರತದಲ್ಲಿ ಕಳೆದ ಎಂಟು ದಿನಗಳಿಂದ 20, 14 ಪೈಸೆಯಷ್ಟು ಏರಿಕೆಯಾಗತೊಡಗಿದೆ.
ಸೌದಿ ಅರೇಬಿಯಾದಿಂದ ಭಾರತ ಅತೀ ದೊಡ್ಡ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿದೆ. ಸೌದಿ ಭಾರತಕ್ಕೆ ಪ್ರತಿ ತಿಂಗಳು 2 ಮಿಲಿಯನ್ ಟನ್ ನಷ್ಟು ಕಚ್ಛಾ ತೈಲವನ್ನು ಸರಬರಾಜು ಮಾಡುತ್ತಿದೆ. ಏತನ್ಮಧ್ಯೆ ಕಚ್ಛಾ ತೈಲ ಬೆಲೆ ಏರಿಕೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಸೌದಿ ಇಂಧನ ಸಚಿವ ಅಬ್ದುಲ್ಲಾಝೀಜ್ ಬಿನ್ ಸಲ್ಮಾನ್ ಜತೆ ಮಾತುಕತೆ ನಡೆಸಿರುವುದಾಗಿ ವರದಿ ವಿವರಿಸಿದೆ.