ಹೊಸದಿಲ್ಲಿ: ಸತತ 12ನೇ ದಿನವಾದ ಗುರುವಾರವೂ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಯಾಯಿತು.
ಸದ್ಯ ತೈಲ ಬೆಲೆಯೇರಿಕೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. 10 ರೂ.ನಷ್ಟು ಹೆಚ್ಚಾಗುವರೆಗೂ ಈ ಏರಿಕೆ ಮುಂದುವರಿಯಬಹುದೆಂದು ಈಗ ಅಂದಾಜಿಸಲಾಗಿದೆ.
ಪೆಟ್ರೋಲ್ ಲೀ.ಗೆ 54 ಪೈಸೆ ಹೆಚ್ಚಾಗಿ 80.33 ರೂ., ಡೀಸೆಲ್ ಲೀ.ಗೆ 61 ಪೈಸೆ ಹೆಚ್ಚಾಗಿ 72.68 ರೂ.ಗೆ ಮುಟ್ಟಿತು.
ಒಟ್ಟಾರೆ 12 ದಿನಗಳಲ್ಲಿ ಪೆಟ್ರೋಲ್ 6.78 ರೂ., ಡೀಸೆಲ್ 6.72 ರೂ. ಹೆಚ್ಚಾಗಿದೆ. ಮಾರ್ಚ್ ಮಧ್ಯಭಾಗದಲ್ಲಿ ಕೇಂದ್ರ ಸರಕಾರ ತೈಲದ ಆಮದಿನ ಮೇಲೆ ಅಬಕಾರಿ ಸುಂಕ ಹೆಚ್ಚಿಸಿತ್ತು. ಕೋವಿಡ್ ಗೆ ಹಣ ಸಂಗ್ರಹಿಸಲು ಈ ಕ್ರಮ ಅನಿವಾರ್ಯವಾಗಿತ್ತು.
ಆದರೆ ಆಗ ಕಚ್ಚಾತೈಲ ಬೆಲೆ ಬಹಳ ಕಡಿಮೆಯಿದ್ದಿದ್ದರಿಂದ, ಅದನ್ನು ತೈಲ ಕಂಪನಿಗಳು ಗ್ರಾಹಕರ ಮೇಲೆ ಹೇರಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಬೆಲೆಯೇರಿಕೆ ಆರಂಭವಾಗಿದೆ. ಆದ್ದರಿಂದ ಸರಕಾರ ಹೆಚ್ಚಿ ಸಿರುವ ಸುಂಕವನ್ನು ಜನರಿಗೆ ತೈಲಕಂಪನಿಗಳು ವರ್ಗಾಯಿಸಲು ಆರಂಭ ಮಾಡಿವೆ.