Advertisement

ಹೊಸ ವರ್ಷದಲ್ಲಿ ಇಂಧನ ದರ ಇಳಿಕೆ? ಗ್ರಾಹಕರ ಮೇಲಿನ ಹೊರೆ ಇಳಿಕೆಗೆ ಸಚಿವ ಸುನಿಲ್ ಸೂಚನೆ

04:45 PM Dec 02, 2022 | Team Udayavani |

ಬೆಂಗಳೂರು: ಹೊಸ ವರ್ಷ ಆರಂಭಕ್ಕೆ ಮುನ್ನವೇ ರಾಜ್ಯದ ವಿದ್ಯುತ್ ಗ್ರಾಹಕರಿಗೆ ಸಿಹಿ ಸುದ್ದಿ ನೀಡುವ ಪ್ರಸ್ತಾಪವನ್ನು ಇಂಧನ ಇಲಾಖೆ ಸಿದ್ದಪಡಿಸಿದೆ.

Advertisement

ಗೃಹ ಬಳಕೆಯೂ ಸೇರಿದಂತೆ ಎಲ್ಲ ಬಗೆಯ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಇಂಧನ ದರ ಕಡಿತಕ್ಕೆ ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಬಳಕೆದಾರರ ಶುಲ್ಕವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದ್ದು, ಪ್ರತಿ ಯುನಿಟ್ ಗೆ 70 ಪೈಸೆಯಿಂದ 2 ರೂ.ವರೆಗೂ ಶುಲ್ಕ ಇಳಿಕೆಯಾಗುವ ನಿರೀಕ್ಷೆ ಇದೆ.

ಪ್ರತಿ ವರ್ಷ ನಡೆಸುವ ವಾರ್ಷಿಕ ದರ ಪರಿಷ್ಕರಣೆಯಲ್ಲಿ ವಿದ್ಯುತ್ ಶುಲ್ಕ ಹೆಚ್ಚಳದಿಂದ ಗ್ರಾಹಕರ ಮೇಲೆ ಹೊರೆ ಹೇರಲಾಗುತ್ತಿದೆ ಎಂಬ ಆರೋಪದಿಂದ ಮುಕ್ತವಾಗಲು ಇಂಧನ ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸರಬರಾಜು ಕಂಪನಿಗಳಿಂದ ಕೆಇಆರ್ಸಿಗೆ ಸಲ್ಲಿಸುವ ಪ್ರಸ್ತಾವನೆಯಲ್ಲಿ ‘ಬಳಕೆದಾರರ ಶುಲ್ಕವನ್ನು’ ವನ್ನು ಕಡಿಮೆ ಮಾಡಿ ದರಪಟ್ಟಿಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಪ್ರಸ್ತಾಪ ಕೇವಲ ಗೃಹ ಬಳಕೆ ಗ್ರಾಹಕರಿಗೆ ಮಾತ್ರವಲ್ಲ, ಎಚ್ ಟಿ, ಕೈಗಾರಿಕೆ, ವಾಣಿಜ್ಯ ಮತ್ತು ಎಲ್ ಟಿ ಗ್ರಾಹಕರಿಗೂ ಅನ್ವಯವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ವಿಧಿಸಿದ್ದ ಕ್ರಾಸ್ ಸಬ್ಸಿಡಿ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರು ಗ್ರಿಡ್ ತೊರೆಯುತ್ತಿದ್ದರು. ಹೀಗಾಗಿ ಎಚ್.ಟಿ.ಗ್ರಾಹಕರನ್ನು ಉಳಿಸಿಕೊಳ್ಳುವುದಕ್ಕಾಗಿ ಕ್ರಾಸ್ ಸಬ್ಸಿಡಿಯನ್ನು ಸಡಿಲಿಸಲು ಬೆಸ್ಕಾಂ ವ್ಯಾಪ್ತಿಯಲ್ಲಿ ಹೊಸ ಪ್ರಸ್ತಾಪ ಸಲ್ಲಿಕೆಯಾಗಿದ್ದು, ಪ್ರತ್ಯೇಕ ಶುಲ್ಕ ಪದ್ಧತಿಯನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿದು ಬಂದಿದೆ.

ಗ್ರಾಮೀಣ ಗ್ರಾಹಕರಿಗೆ ರಿಯಾಯಿತಿ?: ಇಂಧನ ಇಲಾಖೆ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ತುಸು ರಿಯಾಯಿತಿ ನೀಡುವ ಬಗ್ಗೆಯ ಪ್ರಸ್ತಾಪಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರಿಗೆ ಬಳಕೆದಾರರ ಶುಲ್ಕದಲ್ಲಿ 25 ಪೈಸೆಯಷ್ಟು ರಿಯಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. 50 ಯುನಿಟ್ ವರೆಗೆ ಲೈಫ್ ಲೈನ್ ಬಳಕೆಯ ಎಲ್ಟಿ 2 (ಎ1) ಹಾಗೂ ಎಲ್ಟಿ 2(ಎ2) ಗ್ರಾಹಕರಿಗೆ ಈಗ ಪ್ರತಿ ಯುನಿಟ್ ಗೆ ವಿಧಿಸುತ್ತಿದ್ದ 4.15 ರೂ ಹಾಗೂ 4.05 ರೂ. ಶುಲ್ಕವನ್ನು 3.6 ರೂ.ಗೆ ಇಳಿಸಲು ಚಿಂತನೆ ನಡೆಸಲಾಗಿದೆ.

Advertisement

ಇದನ್ನೂ ಓದಿ;ಪಣಜಿ: ಚೋರ್ಲಾ ಘಾಟ್‍ನಲ್ಲಿ ಕಂದಕಕ್ಕೆ ಬಿದ್ದ ಕಾರು; ಇಬ್ಬರು ಸ್ಥಳದಲ್ಲೇ ಸಾವು, ನಾಲ್ವರಿಗೆ ಗಾಯ

50ರಿಂದ 200 ಯುನಿಟ್ವರೆಗಿನ ಬಳಕೆಗೆ ಈ ವರೆಗೆ ವಿಧಿಸುತ್ತಿದ್ದ ಎರಡು ಸ್ಲ್ಯಾಬ್ ಗಳನ್ನು ಒಂದಕ್ಕೆ ಇಳಿಸಲು ನಿರ್ಧರಿಸಲಾಗಿದ್ದು ಸರಾಸರಿ 5.4 ರೂ. ಪ್ರತಿ ಯುನಿಟ್ ಸರಾಸರಿ ಬಳಕೆದಾರರ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇದರಿಂದ ಪ್ರತಿ ಯುನಿಟ್ಗೆ ಸರಾಸರಿ 2 ರೂ.ವರೆಗೂ ಇಳಿಕೆ ಮಾಡುವುದಕ್ಕೆ ಸಾಧ್ಯವಿದೆ ಎಂದು ಹೇಳಲಾಗುತ್ತಿದೆ. 200 ಯುನಿಟ್ ಹಾಗೂ ನಂತರದ ಬಳಕೆದಾರರಿಗೆ ಈಗಿರುವ 8.20 ಹಾಗೂ 7.70 ರೂ. ದರವನ್ನು ಏಕೀಕೃತಗೊಳಿಸಿ 7 ರೂ.ಗೆ ಇಳಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಸಮಯಾಧಾರಿತ ಶುಲ್ಕ: ಇದರ ಜತೆಗೆ ಎಚ್ಟಿ ಗ್ರಾಹಕರಿಗೆ ಸಮಯಾಧಾರಿತ ಶುಲ್ಕ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ದಿನದಲ್ಲಿ 11 ಗಂಟೆ ವಿದ್ಯುತ್ ಬಳಕೆದಾರರ ಶುಲ್ಕದಲ್ಲಿ ಕಡಿತ ಮಾಡಿ ಹೆಚ್ಚಿನ ರಿಯಾಯಿತಿ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಪ್ರತಿ ಯುನಿಟ್ಗೆ ಈ ಮೊದಲು ವಿಧಿಸುತ್ತಿದ್ದ 6.60 ರೂ. ಬಳಕೆದಾರರ ಶುಲ್ಕ ಹೊಸ ಪ್ರಸ್ತಾಪದಿಂದ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದ್ದು 75 ಪೈಸೆವರೆಗೆ ರಿಯಾಯಿತಿ ಸಿಗಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next