Advertisement
ಗುರುವಾರ, ಫಲ-ಪುಷ್ಪ ಪ್ರದರ್ಶನ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಟಿ.ಆರ್.ವೇದಮೂರ್ತಿ, ಜನರಲ್ಲಿ ತೋಟಗಾರಿಕೆ ಅಭಿರುಚಿ ಹೆಚ್ಚಿಸಲು, ಅಲಂಕಾರಿಕ ಹಾಗೂ ಹೂ ಗಿಡಗಳ ಬೆಳೆಸಲು ಪ್ರೋತ್ಸಾಹ ಮತ್ತು ಮಕ್ಕಳಲ್ಲಿ ತೋಟಗಾರಿಕೆ ಬಗ್ಗೆ ಜ್ಞಾನ ಮೂಡಿಸುವ ಜತೆಗೆ ಜನರ ದಿನನಿತ್ಯದ ಒತ್ತಡ ನಿವಾರಣೆಗೆ ಈ ಪ್ರರ್ದಶನ ಒಂದಿಷ್ಟು ಸಹಕಾರಿಯಾಗಲಿದೆ ಎಂದರು.
Related Articles
Advertisement
ಗಿಡಗಳಿಗೆ ದೀಪಾಲಂಕಾರ: ಗಾಜಿನ ಮನೆಯ ಒಳ ಆವರಣದಲ್ಲಿರುವ ಎಲ್ಲಾ ಗಿಡ-ಮರಗಳಿಗೂ ಬಗೆ ಬಗೆಯಾದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು. ಈ ಬಾರಿ ವಿಶೇಷವಾಗಿ ಮಕ್ಕಳಿಗೆ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸಲಾಗಿದೆ.
ಪ್ರದರ್ಶನದಲ್ಲಿ ವಿವಿಧ ಇಲಾಖೆಗಳಿಗೆ 15 ಹಾಗೂ ತಿಂಡಿ ತಿನಿಸುಗಳ ಮಾರಾಟಕ್ಕೆ 30 ಮಳಿಗೆ ತೆರೆಯಲು ಅವಕಾಶ ನೀಡಲಾಗುವುದು. ನಡೆದಾಡುವ ದೇವರೆಂದೇ ಪ್ರಸಿದ್ಧಿಯಾಗಿದ್ದ ಸಿದ್ಧಗಂಗಾ ಶ್ರೀಗಳು, ಪುಟ್ಟರಾಜ ಗವಾಯಿಗಳು, ಕುವೆಂಪು, ತೋಟಗಾರಿಕೆ ಪಿತಾಮಹ ಡಾ| ಎಂ.ಎಚ್. ಮರೀಗೌಡ ಇವರ ಭಾವಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಫಲ-ಪುಷ್ಪ ಪ್ರದರ್ಶನ ನಡೆಯುವ 10 ದಿನಗಳಲ್ಲೂ ಪ್ರತಿ ಎರಡು ಗಂಟೆಗಳಿಗೊಮ್ಮೆ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲು ಮನವಿ ಮಾಡಲಾಗುವುದು. ಮಹಾನಗರ ಪಾಲಿಕೆಯವರು ಗಾಜಿನ ಮನೆ ಮಾರ್ಗದ ರಸ್ತೆಗಳಲ್ಲಿ ದೀಪಗಳ ವ್ಯವಸ್ಥೆ ಮಾಡಲಿದ್ದಾರೆ. ರಸ್ತೆಗಳ ದುರಸ್ತಿಯೂ ನಡೆಯಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪೊಲೀಸರನ್ನು ನಿಯೋಜಿಸುವಂತೆ ಎಸ್ಪಿಯವರನ್ನು ಕೋರಲಾಗಿದೆ ಎಂದು ಅವರು ತಿಳಿಸಿದರು.
ದೇಶದಲ್ಲೇ ನಂ.1 : ಪ್ರಸ್ತುತ ನಮ್ಮ ದೇಶದಲ್ಲಿಯೇ ಮೊದಲನೇ ಮತ್ತು ಏಷ್ಯಾದಲ್ಲಿಯೇ 2ನೇ ಅತಿ ದೊಡ್ಡದು ಎಂಬ ಹೆಗ್ಗಳಿಕೆ ದಾವಣಗೆರೆಯಲ್ಲಿ ನಿರ್ಮಿಸಲಾಗಿರುವ ನಮ್ಮ ಗಾಜಿನ ಮನೆಯದ್ದಾಗಿದೆ. ನಮ್ಮ ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ತುಮಕೂರು ಹಾಗೂ ಮೈಸೂರಲ್ಲಿ ಗಾಜಿನ ಮನೆ ಇವೆ. ದಾವಣಗೆರೆ ಗಾಜಿನ ಮನೆ 73 ಸಾವಿರ ಚದುರ ಅಡಿಯಲ್ಲಿದೆ. ದಾವಣಗೆರೆ ಗಾಜಿನ ಮನೆ ಆಕರ್ಷಕ ವಿನ್ಯಾಸಕ್ಕೆ ಝಾಕ್ ಗ್ರೂಪ್ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ. ಆಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸಕ್ಕೆ ದೊರೆತಿರುವ ಈ ಪ್ರಶಸ್ತಿಯಿಂದ ಈ ಗಾಜಿನ ಮನೆಗೆ ಅಂತಾರಾಷ್ಟೀಯ ಮನ್ನಣೆ ಸಿಕ್ಕಂತಾಗಿದೆ ಎಂದು ಅವರು ಹೇಳಿದರು.
5 ಕೋಟಿ ರೂ. ಅಂದಾಜಲ್ಲಿ ಆರಂಭಿಸಿದ ಗಾಜಿನ ಮನೆ ನಿರ್ಮಾಣ, ಉಪ ನಿರ್ದೇಶಕರ ಕಚೇರಿ, ಮತ್ತಿತರ ಕಾರ್ಯಕ್ಕಾಗಿ ಈ ವರೆಗೆ 25 ಕೋಟಿ ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಸಲುವಾಗಿ ಮತ್ತೆ 5 ಕೋಟಿ ರೂ. ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಣ್ಣ ಬಣ್ಣದ ಲೈಟಿಂಗ್, ಶೌಚಾಲಯ, ಕ್ಯಾಂಟೀನ್, ಸಂಗೀತ ಕಾರಂಜಿ, ಸೇರಿದಂತೆ ಸಾರ್ವಜನಿಕರ ಆಕರ್ಷಿಸುವ ಜತೆಗೆ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಗಾಜಿನ ಮನೆ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರತಿನಿತ್ಯ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿದೆ. 5-10 ವರ್ಷದೊಳಗಿನ ಮಕ್ಕಳಿಗೆ 10 ರೂ., 10 ವರ್ಷ ಮೇಲ್ಪಟ್ಟ ಎಲ್ಲರಿಗೂ 20 ರೂ.ಲ ಪ್ರವೇಶ ಶುಲ್ಕ ವಿಧಿಸಲಾಗಿದೆ ಎಂದು ಹೇಳಿದರು.
ವಿವಿಧ ಸ್ಪರ್ಧೆ: ಫಲ-ಪುಷ್ಪ ಪ್ರದರ್ಶನದ ಜತೆಗೆ ಈ ಬಾರಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಹಿಳೆಯರಿಗೆ ರಂಗೋಲಿ, ಉದ್ಯಾನ ವನ ನಿರ್ವಹಣೆ ಕುರಿತು ಸ್ಪರ್ಧೆ ಜತೆಗೆ ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ಉತ್ತಮ ಪ್ರದರ್ಶನಕ್ಕೆ ಈ ಬಾರಿ ತಾಲೂಕು ಮಟ್ಟದಲ್ಲೂ ಬಹುಮಾನ ನೀಡಲಾಗುವುದು. ತೋಟಗಾರಿಕಾ ಬೆಳೆಗಾರರು ಬೆಳೆದ ವಿವಿಧ ಹಣ್ಣು, ತರಕಾರಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಬಹುದು.
ಶನಿವಾರ ಬೆಳಿಗ್ಗೆ 11 ಗಂಟೆಗೆ ಫಲ-ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಜ. 26ರಿಂದ ಫೆ. 4ರವರೆಗೆ ಪ್ರತಿದಿನ ಸಂಜೆ 6ರಿಂದ 9 ಗಂಟೆತನಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಮುಂದೆ ವಾರಾಂತ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ. ಒಟ್ಟಾರೆ ಈ ಗಾಜಿನ ಮನೆಯನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿಸಲಾಗುವುದು ಎಂದು ತಿಳಿಸಿದರು.