ಬೆಂಗಳೂರು: ಲೋಕಸಭೆಯ ಚುನಾವಣೆ ಕಾವು ಗೂ ಬಿಸಿಲಿನ ಝಳದೊಂದಿಗೆ ಯುಗಾದಿ ಸಡಗರ ನಗರ ಪ್ರವೇಶಸಿದೆ.
ಒಂದು ತಿಂಗಳ ನಿರಂತರ ಬಿಸಿಲಿನಿಂದಾಗಿ ಹೂವಿನ ಪೂರೈಕೆ ಕಡಿಮೆಯಾಗಿದೆ. ಸೇವಂತಿಗೆ, ಗುಲಾಬಿ ಹೂವುಗಳ ದರ ಹೆಚ್ಚಾಗಿದೆ. ಇದರೊಂದಿಗೆ ಈ ಮಯದಲ್ಲಿ ಮದುವೆ, ಗೃಹ ಪ್ರವೇಶದಂತಹ ಶುಭಾ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿದ್ದು, ಬೆಲೆ ಏರಿಕೆ ಬರೆ ಬಿದ್ದಿದೆ. ಹಣ್ಣು ಮತ್ತು ತರಕಾರಿಗಳ ಬೆಲೆ ಎರಡು ತಿಂಗಳಿನಿಂದ ಸ್ಥಿರವಾಗಿದ್ದು, ಹಬ್ಬದ ಹಿನ್ನೆಲೆಯಲ್ಲಿ ತುಸು ಏರಿಕೆ ಕಂಡು ಬಂದಿದೆ.
ಮಲ್ಲಿಗೆ, ಮಲ್ಲೆ, ಕಾಕಡ ಹೂವುಗಳ ಬೆಲೆ ಒಂದು ಕೆ.ಜಿ.ಗೆ 400 ರಿಂದ 500 ರೂ.ಗಳಾಗಿವೆ. ಒಂದು ಕೆ.ಜಿ. ಸೇವಂತಿಗೆ ಬೆಲೆ 300 ರಿಂದ 500 ರೂ. ಹಾಗೂ ಮಾರಿಗೋಲ್ಡ್ ಸೇವಂತಿಗೆ ಬೆಲೆ 300 ರಿಂದ 400 ರೂ.ಗಳಿಗೆ ಏರಿಕೆಯಾಗಿದೆ. ಅದೇ ರೀತಿ ಬಟನ್ಸ್ ರೋಸ್ ಕಾಲು ಕೆ.ಜಿ.ಗೆ 80 ರೂ.ಗಳಾಗಿದೆ.
ಕಿತ್ತಳೆ ಹಣ್ಣಿನ ಕಾಲ ಮುಗಿಯುತ್ತಿರುವುದರಿಂದ ಬೆಲೆ ಹೆಚ್ಚಾಗಿದ್ದು, ಕೆ.ಆರ್.ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಕಿತ್ತಳೆ 220 ರೂ.ಗೆ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್‌ನಲ್ಲಿ ಸ್ಥಳೀಯ ಕಿತ್ತಳೆಗೆ 60 ರೂ., ಆಸ್ಟ್ರೇಲಿಯಾ ಕಿತ್ತಳೆಗೆ 160 ರೂ. ನಿಗದಿಪಡಿಸಲಾಗಿದೆ. ಮಲ್ಲಿಕಾ, ಬಾದಮಿ, ಸೆಂದಿ, ಸಕ್ಕರೆಗುತ್ತಿ, ನೀಲಂ, ರಸಪುರಿ, ತೊತಪುರಿ, ಕೇಸರ್, ಬೈಗಂಪಲ್ಲಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಯುಗಾದಿ ಹಬ್ಬ ಎಂದರೆ ನೆನಪಿಗೆ ಬರುವುದೇ ಹೋಳಿಗೆ. ಹೀಗಾಗಿ ತೊಗರಿಬೇಳೆ, ಬೆಲ್ಲ, ಮೈದಾ, ಚಿರೋಟಿ ರವೆ ಇತ್ಯಾದಿಗಳ ಖರೀದಿದಾರರು ಹೆಚ್ಚಾಗಿದ್ದಾರೆ.