Advertisement

ಇದ್ದೂ ಇಲ್ಲದಂತಿವೆ ಗಡಿನಾಡ ಶಾಲೆಗಳು

12:30 AM Dec 18, 2018 | |

ಗಡಿನಾಡ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಕೆಲವೆಡೆ ಏಕೋಪಾಧ್ಯಾಯ ಶಾಲೆಗಳಿದ್ದರೆ, ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಇರುವ ಶಿಕ್ಷಕರೂ ಬಿಸಿಯೂಟ, ಸಭೆ ಸಮಾರಂಭಗಳು, ಕಚೇರಿ ಕೆಲಸಗಳಲ್ಲೇ ತಲ್ಲೀನರಾಗುವುದರಿಂದ, ಮಕ್ಕಳಿಗೆ ಕಲಿಕೆಯೇ ಇಲ್ಲವಾಗುತ್ತಿದೆ. ಇದು ಸಾಲದೆಂಬಂತೆ, ಮೂಲಭೂತ ಸೌಕರ್ಯಗಳ ತೀವ್ರ ಕೊರತೆ ಈ ಶಾಲೆಗಳನ್ನು ತೀವ್ರವಾಗಿ ಕಾಡುತ್ತಿದ್ದು, ಇವುಗಳ ಅಸ್ತಿತ್ವ ಡೋಲಾಯಮಾನವಾಗಿದೆ…

Advertisement

5000 ಮಕ್ಕಳಿಗೆ ಕನ್ನಡ ಓದಲು ಬರುವುದಿಲ್ಲ!    
ತೆಲುಗಿನಲ್ಲಿ ತರ್ಜುಮೆ ಮಾಡಿ ಹೇಳಬೇಕಾದ ಪರಿಸ್ಥಿತಿ

ಗಡಿ ಜಿಲ್ಲೆ ಯಾದಗಿರಿ-ತೆಲಂಗಾಣಕ್ಕೆ ಹೊಂದಿಕೊಂಡಿರುವ ಬಹುತೇಕ ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಿಗೆ ಕನ್ನಡ ಭಾಷೆಯೇ ಕಷ್ಟವಾಗಿದೆ. ಗಡಿ ಭಾಗದಲ್ಲಿ ಜನರು ನೆರೆಯ ತೆಲಂಗಾಣದೊಂದಿಗೆ ಹೆಚ್ಚಿನ ಸಂಬಂಧ ಬೆಳೆಸಿಕೊಂಡಿರುವುದು ಮತ್ತು ಮನೆಯಲ್ಲಿ ಪಾಲಕರು ನಿತ್ಯ ತೆಲುಗು ಭಾಷೆಯಲ್ಲಿ ಸಂವಹನ ನಡೆಸುವುದರಿಂದ ಮಕ್ಕಳು ಶಾಲೆಯಲ್ಲಿ ಕನ್ನಡ ಅರ್ಥೈಸಿಕೊಳ್ಳಲು ಪರದಾಡುವಂತಾಗಿದೆ.

ಯಾದಗಿರಿ ತಾಲೂಕಿನಲ್ಲಿ 333, ಶಹಾಪುರ ತಾಲೂಕಿನಲ್ಲಿ 324 ಹಾಗೂ ಸುರಪುರ ತಾಲೂಕಿನಲ್ಲಿ 389 ಸರ್ಕಾರಿ ಶಾಲೆಗಳಿದ್ದು, ಪ್ರಾಥಮಿಕ ಮತ್ತು ಪ್ರೌಢ ಸೇರಿ 1,046 ಶಾಲೆಗಳಿದ್ದು, 54 ಅನುದಾನಿತ ಶಾಲೆಗಳನ್ನೊಳಗೊಂಡು ಬರೋಬ್ಬರಿ 1,100 ವಿದ್ಯಾ ದೇಗುಲಗಳಿವೆ. ಗುರುಮಠಕಲ್‌ ತಾಲೂಕಿಗೆ ತೆಲಂಗಾಣದ ಗಡಿ ಕೇವಲ 5 ಕಿ.ಮೀಟರ್‌ ಅಂತರದಲ್ಲಿದ್ದು, ತಾಲೂಕಿ ನಾದ್ಯಂತ ಕನ್ನಡಕ್ಕಿಂತ ತೆಲುಗು ಪ್ರಭಾವವೇ ಹೆಚ್ಚಾಗಿದೆ. ಈ ಭಾಗದ ಕೆಲವು ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಗಳಲ್ಲಿ ಇಂದಿಗೂ ಮಕ್ಕಳಿಗೆ ಕನ್ನಡದಲ್ಲಿ ಹೇಳಿದ ಪಾಠವನ್ನು ತೆಲುಗು ಭಾಷೆಗೆ ತರ್ಜುಮೆ ಮಾಡಿ ಹೇಳಬೇಕಾದ ಸ್ಥಿತಿಯಿದೆ. ಈ ಸಮಸ್ಯೆಯನ್ನು ಆಡಳಿತ ಅರ್ಥ ಮಾಡಿಕೊಳ್ಳುತ್ತಿಲ್ಲ.

ಪ್ರೌಢಶಾಲೆಗಳೂ ಇದಕ್ಕೆ ಮಿಗಿಲಾಗಿಲ್ಲ. ಪ್ರೌಢಶಾಲೆಯಲ್ಲಿ ಅಂದಾಜು 15 ಸಾವಿರ ಮಕ್ಕಳಿದ್ದು, ಇದರಲ್ಲಿ 5 ಸಾವಿರದಷ್ಟು ಮಕ್ಕಳಿಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲ ಎಂದು ಸ್ವತಃ ಶಿಕ್ಷಣ ಇಲಾಖೆ ಅ ಧಿಕಾರಿಗಳು ಗಣಿ ಮತ್ತು ಭೂವಿಜ್ಞಾನ, ಮುಜರಾಯಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ. ಪಾಟೀಲ ಅವರು 2018ರ ಸೆ. 22ರಂದು ಜಿಲ್ಲೆಯ ಅಭಿವೃದ್ಧಿ ಕಾರ್ಯ ಕ್ರಮಗಳ ತ್ತೈಮಾಸಿಕ ಸಭೆ ನಡೆಸಿದ ವೇಳೆ ಮಾಹಿತಿ ತಿಳಿಸಿರುವುದು ಗಮನಾರ್ಹ. ಗಡಿಭಾಗದ ಶಾಲೆಗಳ ಮಕ್ಕಳಿಗೆ ಕನ್ನಡವೇ ಕಗ್ಗಂಟಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಗಡಿ ಭಾಗದ ಶಾಲೆಗಳಲ್ಲಿ ಕನ್ನಡ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯ ಯೋಜನೆ ರೂಪಿಸಲು ಮುಂದಾಗಬೇಕಿದೆ.

ಕನ್ನಡ ಜಾಗೃತಿ ಸಮಿತಿ ಕಾರ್ಯವೇನು?
ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಬಗ್ಗೆ ಕಾಳಜಿ ವಹಿಸಬೇಕಿರುವ ಜಿಲ್ಲಾಡಳಿತ ನಾಮೆRàವಾಸ್ತೆ ಎಂಬಂತಾಗಿರುವುದು ಬೇಸರದ ಸಂಗತಿ.  ಮೂರು ತಿಂಗಳ ಹಿಂದೆಯಷ್ಟೇ ಜಿಲ್ಲಾ ಮಟ್ಟದ ಸಮಿತಿ ಸಭೆಯನ್ನು ಆಯೋಜಿಸಿ ನೆಪಕ್ಕೆಂಬಂತೆ ಕನ್ನಡವನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಚರ್ಚಿಸಿದೆ.  ಕನ್ನಡದ ಬಗ್ಗೆ ಜಾಗೃತಿ ಕಾರ್ಯ ಕ್ರಮ ಹಮ್ಮಿಕೊಳ್ಳಲು ಹೆಚ್ಚುವರಿ ಅನುದಾನ ಮತ್ತು ವಿಶೇಷ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಚರ್ಚಿಸಿ ಕೈ ತೊಳೆದುಕೊಂಡಿದೆ. 

Advertisement

ಸ್ಥಿತಿಗತಿಯ ಮಾಹಿತಿಯೇ ಇಲ್ಲವಂತೆ
ವಿಜಯಪುರ ಜಿಲ್ಲೆಯ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಶಾಲೆಗಳು ಮೂಲಭೂತ ಕೊರತೆಗಳಿಂದ ನರಳುತ್ತಿದ್ದು ಸೌಲಭ್ಯಕ್ಕಾಗಿ ದೈನೇಸಿಯಾಗಿ ಗೋಗರೆಯುತ್ತಿವೆ. ವಿಜಯಪುರ ಜಿಲ್ಲೆಯ ಇಂಡಿ, ಚಡಚಣ ಹಾಗೂ ವಿಜಯಪುರ ಗ್ರಾಮೀಣ ವಲಯದ ಮೂರು ಭಾಗಗಳ 132 ಶಾಲೆಗಳು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿವೆ. ಈ ಭಾಗದ ಬಹುತೇಕ ಶಾಲೆಗಳು ವಸತಿ ಶಾಲೆಗಳೆಂದು ಕರೆಸಿಕೊಳ್ಳುತ್ತಿದ್ದು, ಜನವಸತಿ ಇರುವ ಪ್ರದೇಶಗಳಿಗಿಂತ ಬಹು ದೂರದಲ್ಲೇ ಇರುತ್ತವೆ. ಇಂಥ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಕಾಂಪೌಂಡ್‌ ಮಾತ್ರವಲ್ಲ ಇತರೆ ಹಲವು ಮೂಲಭೂತ ಸೌಲಭ್ಯಗಳೇ ಇಲ್ಲ. ಇರುವ ಶಾಲೆಗಳಿಗೆ ಕಟ್ಟಡಗಳೇ ಇಲ್ಲ, ಶಿಕ್ಷಕರೂ ಇಲ್ಲ.

ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿ ಕಾರಿಗಳ ಬಳಿ ಗಡಿ ಭಾಗದ ಶಾಲೆಗಳ ಸ್ಥಿತಿಗತಿಯ ಬಗ್ಗೆ  ನಿಖರ ಮಾಹಿತಿಯೇ ಇಲ್ಲ. ಹೀಗೇಕೆ ಎಂದು ಕೇಳಿದರೆ ಈ ಕುರಿತು ವರದಿ ನೀಡುವಂತೆ ಬಿಇಒಗಳನ್ನು ಕೋರಿದ್ದು, ಇಷ್ಟರಲ್ಲೇ ಮಾಹಿತಿ ಬರುವ ನಿರೀಕ್ಷೆ ಇದೆ. ಈ ವರದಿ ಬಂದ ನಂತರ ಸರ್ಕಾರಕ್ಕೆ ಮೂಲಭೂತ ಸೌಲಭ್ಯಕ್ಕೆ ಅಗತ್ಯವಾದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಉತ್ತರ ನೀಡಿ ಜಾರಿಕೊಳ್ಳುತ್ತಾರೆ.

ವರದಿಗಳ ನಿರ್ಲಕ್ಷ್ಯ ಇನ್ನೆಷ್ಟು ದಿನ?
ರಾಜ್ಯ ಸರ್ಕಾರದ ನಿರ್ಲಕ್ಷÂ, ಮೂಲಭೂತ ಸೌಕರ್ಯಗಳ ಕೊರತೆ, ಪೋಷಕರ ಇಂಗ್ಲೀಷ್‌ ವ್ಯಾಮೋಹ, ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿಯಿಂದಾಗಿ ಒಂದೆಡೆ ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳು ಅಪಾಯ ಎದುರಿಸುತ್ತಿದ್ದರೆ ಗಡಿನಾಡಿನ ಸಾವಿರಾರು ಕನ್ನಡ ಶಾಲೆಗಳ ಸ್ಥಿತಿ ಇವಕ್ಕಿಂತ ಶೋಚನೀಯವಾಗಿದೆ. ಇಲ್ಲಿ ಕೇವಲ ಸರ್ಕಾರದ ನಿರ್ಲಕ್ಷ ಮಾತ್ರವಲ್ಲದೆ, ಪರಭಾಷೆಯ ಪ್ರಾಬಲ್ಯವೂ ಕೆಲಸ ಮಾಡುತ್ತಿದೆ. ಗಡಿಭಾಗದಲ್ಲಿ ನಾಡು, ನುಡಿ, ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಮಾಧ್ಯಮಗಳಲ್ಲಿ ಪದೇ ಪದೆ ಚರ್ಚೆಯಾಗುತ್ತಲೇ ಇರುತ್ತದೆ. ಅಲ್ಲದೇ ಪ್ರತಿಬಾರಿಯೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಭಾಗದ ಶಾಲೆಗಳ ದುಸ್ಥಿತಿಯ ಬಗ್ಗೆ ಧ್ವನಿಯೆತ್ತಲಾಗುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷರುಗಳು ಹಲವು ವರದಿಗಳನ್ನು ಸಲ್ಲಿಸಿ¨ªಾರೆ. ಆದರೆ, ಯಾವುದನ್ನೂ  ಸರ್ಕಾರಗಳು ಗಂಭೀರವಾಗಿಪರಿಗಣಿಸದೇ ಇರುವುದು ವಿಪರ್ಯಾಸ.

ಕೊಠಡಿ,ಶಿಕ್ಷಕರ ಕೊರತೆ
ತೆಲಂಗಾಣ, ಸೀಮಾಂಧ್ರವನ್ನು ಇಬ್ಭಾಗ ಮಾಡಿರುವ ರಾಯಚೂರು ಜಿಲ್ಲೆ ಅಕ್ಷರಶಃ ಗಡಿನಾಡು. ಇಂಥ ಜಿಲ್ಲೆಯ ಗಡಿ ಭಾಗ ಮತ್ತು ಹೊರನಾಡಿನಲ್ಲಿ ಕನ್ನಡ ಶಾಲೆಗಳ ಸ್ಥಿತಿ ಮಾತ್ರ ಶೋಚನೀಯ ಸ್ಥಿತಿಯಲ್ಲಿದೆ. ಆದರೆ, ಸರ್ಕಾರ ಯಾವುದೇ ಶಾಲೆಯನ್ನು ಮುಚ್ಚಲು ಗುರುತಿಸಿಲ್ಲ ಎನ್ನುವುದೇ ಸಮಾಧಾನದ ವಿಷಯ. ಮುಖ್ಯವಾಗಿ ರಾಯಚೂರು, ಮಾನ್ವಿ ತಾಲೂಕಿನಲ್ಲಿ ಸುಮಾರು 30 ಶಾಲೆಗಳು ಗಡಿ ಭಾಗದಲ್ಲಿದ್ದರೆ, 24 ಶಾಲೆಗಳು ಹೊರನಾಡಲ್ಲಿವೆ. ಹೊರನಾಡ ಶಾಲೆಗಳಲ್ಲಿ ಭಾಷಾ ಕಲಿಕೆ ಜತೆಗೆ ಕೆಲ ಆಡಳಿತಾತ್ಮಕ ಸಮಸ್ಯೆಗಳು ಪಾಲಕರನ್ನು ಬಾಧಿ ಸುತ್ತಿದ್ದರೆ, ಗಡಿನಾಡ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕೊಠಡಿ ಸಮಸ್ಯೆ, ಮೂಲಸೌಲಭ್ಯ ಹಾಗೂ ಪೀಠೊಪಕರಣಗಳ ಸಮಸ್ಯೆ ಕಾಡುತ್ತಿದೆ.

ಹೊರನಾಡ ಶಾಲೆಗಳಲ್ಲಿ ಕನ್ನಡ ಕಲಿಕೆ ಆಗುತ್ತಿದ್ದರೂ ಅವರ ಮನೆಯಲ್ಲಿ ತೆಲುಗು ಭಾಷೆ ಬಳಕೆಯಾಗುತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ಸಮಸ್ಯೆಯಾಗುತ್ತಿದೆ. ಅಲ್ಲದೇ, ಅಲ್ಲಿ ಶಿಕ್ಷಣ ಕಲಿತ ಮಕ್ಕಳಿಗೆ ರಾಜ್ಯದಲ್ಲಿ ಉನ್ನತ ವ್ಯಾಸಂಗಕ್ಕೆ ಅನುವು ನೀಡುತ್ತಿಲ್ಲ ಎನ್ನುವುದು ಗಂಭೀರ ಆರೋಪ. ಈ ಕಾರಣಕ್ಕೆ ಆ ಶಾಲೆಗಳಲ್ಲಿ ಕನ್ನಡ ಭಾಷೆ ಉಳಿವಿಗೆ ಮತ್ತಷ್ಟು ಶ್ರಮ ವಹಿಸಬೇಕಿದೆ. ಇಲ್ಲದಿದ್ದರೆ ಮಕ್ಕಳು ಕನ್ನಡ ಶಾಲೆಗಳಿಂದ ದೂರವಾಗುವ ಸಾಧ್ಯತೆ ಅಲ್ಲಗಳೆ ಯುವಂತಿಲ್ಲ. ಇನ್ನು ಗಡಿನಾಡ ಶಾಲೆಗಳಲ್ಲಿ ಸ್ಥಿತಿ ಶೋಚನೀಯವಾಗಿದೆ. ಕೆಲವೆಡೆ ಏಕೋಪಾಧ್ಯಾಯ ಶಾಲೆಗಳಿದ್ದರೆ, ಏಳು ಶಾಲೆಗಳಲ್ಲಿ ಇಬ್ಬರೇ ಶಿಕ್ಷಕರಿದ್ದಾರೆ. ಆರು ಶಾಲೆಗಳಲ್ಲಿ ಮೂವರು ಶಿಕ್ಷರಿದ್ದಾರೆ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಅದರ ಜತೆಗೆ ಬಿಸಿಯೂಟ, ಸಭೆ ಸಮಾರಂಭಗಳು, ಕಚೇರಿ ಕೆಲಸಗಳಲ್ಲೇ ಶಿಕ್ಷಕರು ತಲ್ಲೀನರಾಗಿದ್ದು, ಕಲಿಕೆಯೇ ಇಲ್ಲದಾಗುತ್ತಿದೆ.

ಇನ್ನು 19 ಶಾಲೆಗಳಲ್ಲಿ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ದುರಸ್ತಿ ಮಾಡಬೇಕಿದೆ. ಕೆಲವೆಡೆ ಛಾವಣಿ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ, ಕಟ್ಟಡಗಳನ್ನು ನಿರ್ಮಿಸಿ ಹಲವು ದಶಕಗಳೇ ಆಗಿದ್ದು, ಸಂಪೂರ್ಣ ನೆಲಸಮ ಮಾಡಿ ಮರು ನಿರ್ಮಿಸುವ ಪ್ರಸ್ತಾವನೆ ಸಲ್ಲಿಕೆಯಾಗಿವೆ. ಶಿಥಿಲ ಕೊಠಡಿಗಳಲ್ಲೇ ಮಕ್ಕಳು ಜೀವ ಕೈಯಲ್ಲಿ ಹಿಡಿದು ಕೂಡಬೇಕಿದೆ. ಬಹುತೇಕ ಶಾಲೆಗಳಲ್ಲಿ ಅಗತ್ಯದಷ್ಟು ಪೀಠೊಪಕರಣಗಳಿಲ್ಲ. ಒಂದೆರಡು ತರಗತಿ ಬಿಟ್ಟರೆ ಉಳಿದೆಲ್ಲ ಮಕ್ಕಳು ನೆಲದಲ್ಲಿ ಕುಳಿತು ಕಲಿಯಬೇಕಿದೆ. ಶೌಚಾಲಯಗಳಿದ್ದರೂ ಮಕ್ಕಳ ಸಂಖ್ಯೆಗನುಗುಣವಾಗಿ ಇಲ್ಲ. ಈಗಾಗಲೇ ಗಡಿಭಾಗದಲ್ಲಿ ತೆಲುಗು ಹಾಗೂ ಆಂಗ್ಲ ಭಾಷೆಯ ಖಾಸಗಿ ಶಾಲೆಗಳು ಹಾವಳಿ ಹೆಚ್ಚುತ್ತಿದೆ. ಇದೇ ರೀತಿ ಮುಂದುವರಿದರೆ ನಮ್ಮ ರಾಜ್ಯದ ಮಕ್ಕಳು ಕೂಡ ಕನ್ನಡ ತೊರೆದು ಅನ್ಯ ಭಾಷೆಗಳನ್ನು ಅಧ್ಯಯನ ಮಾಡುವಂಥ ಸನ್ನಿವೇಶ ನಿರ್ಮಾಣವಾಗಲಿದೆ.
 

Advertisement

Udayavani is now on Telegram. Click here to join our channel and stay updated with the latest news.

Next