Advertisement

“ಗಡಿನಾಡ ಕನ್ನಡಿಗರಿಗೆ ಕನ್ನಡದ ಮೇಲೆ ಹೆಚ್ಚಿನ ಒಲವಿದೆ’

10:49 PM Nov 01, 2019 | mahesh |

ಸುಬ್ರಹ್ಮಣ್ಯ: ನಮ್ಮ ಮಾತೃ ಭಾಷೆ ಜತೆಗೆ ಇತರೆ ಭಾಷೆಗಳನ್ನು ಪ್ರೀತಿಸಬೇಕು. ಭಾಷೆ ಹಾಗೂ ದೇಶಾಭಿಮಾನ ಎಲ್ಲರೂ ಬೆಳೆಸಿಕೊಳ್ಳಬೇಕು. ಭಾಷೆಗಳ ಉಳಿವಿಗಾಗಿ ಗಡಿನಾಡ ಜಿಲ್ಲೆಗಳ ಜನತೆಯಲ್ಲಿ ಹೆಚ್ಚು ಆಸಕ್ತಿ ಕಂಡುಬರುತ್ತಿದೆ. ಅಲ್ಲಿನ ಕನ್ನಡಪರ ಸಂಘಟನೆಗಳು ಕನ್ನಡ ಉಳಿಸಲು ಸಕ್ರಿಯವಾಗಿ ಹೋರಾಡುತ್ತಿವೆ. ನಮ್ಮಲ್ಲಿನ ಆಂಗ್ಲಭಾಷಾ ವ್ಯಾಮೋಹ ಮತ್ತು ಭಾಷಾ ಮೇಲಿನ ಪ್ರೇಮ ಕ್ಷೀಣಿಸುತ್ತಿರುವುದು ಕನ್ನಡ ಅಳಿವಿನಂಚಿಗೆ ಬರಲು ಕಾರಣ ಎಂದು ವಿದ್ಯಾರ್ಥಿ ಸಾಹಿತಿಗಳು ಹೇಳಿದರು.

Advertisement

ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಕನ್ನಡ ಸಾಹಿತ್ಯ ಪರಿಷತ್‌, ಸುವಿಚಾರ ಸಾಹಿತ್ಯ ವೇದಿಕೆ ಇದರ ವತಿಯಿಂದ ನಡೆದ ಸುಳ್ಯ ತಾಲೂಕು 5ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕದಲ್ಲಿ ಕನ್ನಡದ ಇಂದಿನ ಸ್ಥಿತಿಗತಿ ಕುರಿತು ವಿದ್ಯಾರ್ಥಿಗಳ ವಿಚಾರಗೋಷ್ಠಿಯಲ್ಲಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹೊರಹಾಕಿದರು. ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಗಾನಶ್ರೀ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಸುಳ್ಯ ಸರಕಾರಿ ಪ.ಪೂ. ಕಾಲೇಜು ವಿದ್ಯಾರ್ಥಿ ಪ್ರೀತಿ ಯು. ವಿಚಾರ ಮಂಡಿಸಿದರು.

ಇತ್ತೀಚಿನ ದಿನಗಳಲ್ಲಿ ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡಿಗನ ಸ್ಥಿತಿ ಉತ್ತಮವಾಗಿಲ್ಲ. ಕನ್ನಡ ಭಾಷೆಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಕನ್ನಡ ಶಾಲೆಗಳ ಸ್ಥಿತಿಗತಿ ಸುಧಾರಿಸಿಲ್ಲ. ಕನ್ನಡ ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕೊರತೆ, ಸರಕಾರಿ ಶಿಕ್ಷಕರಿಗೆ ಹೆಚ್ಚುತ್ತಿರುವ ಕೆಲಸದ ಭಾರ, ಸಮರ್ಥ ಶಿಕ್ಷಕರ ಕೊರತೆ ಆಂಗ್ಲ ವ್ಯಾಮೋಹದ ಪ್ರವಾಹದಲ್ಲಿ ಸಿಲುಕಿಸಿದೆ. ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಯುವಕ-ಯುವತಿಯರು ಪರಭಾಷೆ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಉದ್ಯೋಗ, ಸಿನೆಮಾಗಳಲ್ಲಿ ಕನ್ನಡಿಗರಿಗೆ ಹೆಚ್ಚು ಸ್ಥಾನಮಾನ ಸಿಗುವಂತಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಕ್ಕೆ ಹೆಚ್ಚು ಪ್ರೇರಣೆ ಸಿಗಬೇಕು ಎಂದರು.

ಎಡಬಿಡಂಗಿಗಳಾಗಿದ್ದೇವೆ
ಸುಳ್ಯ ರೋಟರಿ ಪ್ರೌಢಶಾಲೆ ವಿದ್ಯಾರ್ಥಿನಿ ಮಹಿಮಾ ಯು.ಎಸ್‌. ನಗರಗಳಲ್ಲಿ ಅಚ್ಚ ಕನ್ನಡ ಮಾತನಾಡುವವರು ಕಡಿಮೆ. ಆಂಗ್ಲಭಾಷೆಯಲ್ಲಿ ಕನ್ನಡ ಬರೆಯುವ ಹಾವಳಿ ಹೆಚ್ಚಿ ಭಾಷೆ ಸಂಕುಚಿತಗೊಂಡಿದೆ. ಎರಡು ಭಾಷೆಗಳನ್ನು ಕಲಿತು ಎಡಬಿಡಂಗಿಗಳಾಗುತ್ತಿದ್ದೇವೆ. ಪ್ರಸ್ತುತ ಕನ್ನಡ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳ ಸ್ಥಿತಿ ಸರ್ಕಸ್‌ ತಂಡದ ಪ್ರಾಣಿಗಳಂತಾಗಿದೆ ಎಂದರು.

ಸೆಲೂನ್‌ಗಳಲ್ಲಿ ಹಿಂದಿ ಭಾಷಿಗರು
ವಿನೋಬನಗರ ವಿವೇಕಾನಂದ ಪ್ರೌಢಶಾಲೆಯ ಜ್ಞಾನೇಶ್‌ ಎ.ಎಸ್‌. ವಿಚಾರ ಮಂಡಿಸಿ, ಕನ್ನಡ ಮಾತನಾಡುವವರ ಪ್ರಮಾಣ ಇಳಿಮುಖವಾಗಿಲ್ಲ. ಇಂಗ್ಲಿಷ್‌ ಮಾತನಾಡುವವರ ಪ್ರಮಾಣ ಹೆಚ್ಚಿದೆ. ಹೆತ್ತವರು ಮಕ್ಕಳ ಪ್ರತಿಷ್ಠೆಗಾಗಿ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸುತ್ತಿದ್ದಾರೆ. ನಮ್ಮಲ್ಲಿಯ ಸೆಲೂನ್‌ಗಳಲ್ಲಿ ಹಿಂದಿ ಭಾಷಿಕರು ತುಂಬಿಕೊಂಡಿದ್ದಾರೆ. ಸುಬ್ರಹ್ಮಣ್ಯ ಕೆಎಸ್‌ಎಸ್‌ ಕಾಲೇಜಿನ ಕನ್ನಡ ಉಪನ್ಯಾಸಕ ಉದಯಕುಮಾರ್‌ ಸಮಾಪನ ನಡೆಸಿಕೊಟ್ಟರು. ಚಂದ್ರಮತಿ ನಿರೂಪಿಸಿದರು.

Advertisement

ಅನ್ಯ ಭಾಷೆ ದ್ವೇಷ ಬೇಡ
ಬೆಳ್ಳಾರೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ವಿದ್ಯಾರ್ಥಿನಿ ಅವನಿ ಕೆ. ವಿಚಾರ ಮಂಡಿಸಿ ಕಲೆ, ಸಾಹಿತ್ಯ ಪುರಾತನವಾದುದು. ಬಹುಭಾಷಾ ಕಲಿಕೆಯಿಂದ ಜ್ಞಾನ ಹೆಚ್ಚಳವಾಗುತ್ತದೆ. ಕನ್ನಡ ಗುಣಮಟ್ಟದಲ್ಲಿ ಸುಧಾರಣೆಯಾಗಬೇಕು. ಕನ್ನಡ ಭಾಷೆಯಾಗಿ ಉಳಿಯಬೇಕು. ಅನ್ಯ ಭಾಷೆ ದ್ವೇಷ ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next