Advertisement
ಕಳೆದ 24 ಗಂಟೆಗಳಿಂದ ನಗರ ಸೇರಿದಂತೆ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಿಟಿ-ಜಿಟಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಹುಬ್ಬಳ್ಳಿಯಲ್ಲಿ 41.9 ಮಿಮೀ, ಛಬ್ಬಿ 25.4 ಮಿಮೀ ಹಾಗೂ ಶಿರಗುಪ್ಪಿ 27.6 ಮಿಮೀ ಹಾಗೂ ಬ್ಯಾಹಟ್ಟಿ ಹೋಬಳಿಯಲ್ಲಿ 34.0 ಮಿಮೀ ಮಳೆಯಾಗಿದೆ. ಕೃಷಿ ಚಟುವಟಿಕೆಗೆ ಅಗತ್ಯವಾಗಿರುವ ಮಳೆ ನಿರೀಕ್ಷಿಸಲಾಗಿದ್ದು, ಭೂಮಿ ತಂಪಾಗಿದೆ.
Related Articles
Advertisement
ಎಚ್ಚೆತ್ತುಕೊಳ್ಳದ ಪಾಲಿಕೆ: ಕಳೆದ ನಾಲ್ಕೈದು ದಿನಗಳ ಹಿಂದೆ ಮಂಟೂರು ರಸ್ತೆ ಅರಳಕಟ್ಟಿ ಓಣಿ, ಎಸ್.ಎಂ. ಕೃಷ್ಣ ನಗರದಲ್ಲಿ ಸುಮಾರು 250ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಸಮಸ್ಯೆಯಾಗಿತ್ತು. ಸಂಕಷ್ಟ ಅನುಭವಿಸಿದ ಜನರು ಪಾಲಿಕೆ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕಿದ್ದರು. ನಂತರ ಜನಪ್ರತಿನಿಧಿಗಳು ಸ್ಥಳಗಳಿಗೆ ಭೇಟಿ ನೀಡಿ, ಪಾಲಿಕೆ ಅಧಿಕಾರಿಗಳ ಸಭೆ ಕರೆದು ಚರಂಡಿ, ನಾಲಾ, ಗಟಾರುಗಳ ಸ್ವಚ್ಛತೆಗೊಳಿಸುವಂತೆ ಸೂಚಿಸಿದ್ದರು. ಆದರೆ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನ ದೂರುತ್ತಿದ್ದಾರೆ.
ರಸ್ತೆಗಳಲ್ಲಿ ನೀರು: ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳ ಮೇಲೆ ನೀರು ನಿಂತಿದ್ದು, ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ. ಇತ್ತೀಚೆಗೆ ನಿರ್ಮಾಣವಾದ ಸಿಆರ್‌ಎಫ್ ರಸ್ತೆಗಳ ಮೇಲಿನ ನೀರು ಸರಾಗವಾಗಿ ಚರಂಡಿ ಹರಿಯುವ ವ್ಯವಸ್ಥೆ ಇಲ್ಲದ ಪರಿಣಾಮ ಸಮಸ್ಯೆಯುಂಟಾಗಿದೆ. ಇನ್ನೂ ಕೆಲವಡೆ ಗಟಾರು ಕಾಮಗಾರಿ ಪೂರ್ಣಗೊಳಿಸದಿರುವುದು ರಸ್ತೆ ಮೇಲೆ ನೀರು ಹರಿಯಲು ಕಾರಣವಾಗಿದೆ.
ಸತತವಾಗಿ ಮಳೆಯಾಗುತ್ತಿರುವುದರಿಂದ ನಗರದಲ್ಲಿ ವಿವಿಧೆಡೆ ನಾಲ್ಕು ಮನೆಗಳ ಗೋಡೆಗಳು ಭಾಗಶಃ ಬಿದ್ದಿವೆ. ಉಳಿದಂತೆ ಯಾವುದೇ ಸಮಸ್ಯೆಯಾಗಿಲ್ಲ. • ಶಶಿಧರ ಮಾಡ್ಯಾಳ, ತಹಶೀಲ್ದಾರ್
ಮಳೆ ನೀರು ಹರಿಯಲು ಮಾಡಿದ್ದ ನಾಲಾ ಮುಚ್ಚಿ ರಸ್ತೆ ಮಾಡಿರುವುದರಿಂದ ನೀರು ಹರಿಯದೆ ಅಪಾರ್ಟ್‌ಮೆಂಟ್‌ಗೆ ನುಗ್ಗುತ್ತಿದೆ. ಸತತ ಮಳೆ ಸುರಿಯುತ್ತಿರುವುದರಿಂದ ಸುತ್ತಲೂ ನೀರು ಸಂಗ್ರಹವಾಗಿದ್ದು, ಮಳೆ ಹೀಗೆ ಮುಂದುವರೆದರೆ ಅಪಾರ್ಟ್‌ಮೆಂಟ್ ಪಾರ್ಕಿಂಗ್ ಸ್ಥಳ ಭರ್ತಿಯಾಗಲಿದೆ. ಅಧಿಕಾರಿಗಳ ಅವೈಜ್ಞಾನಿಕವಾಗಿ ಟೆಂಡರ್ ಶ್ಯೂರ್ ರಸ್ತೆ ನಿರ್ಮಿಸುತ್ತಿರುವುದು ಇದಕ್ಕೆ ಕಾರಣವಾಗಿದೆ. • ಅಶೋಕ ಅಣ್ವೇಕರ, ಅಕ್ಷಯ ಕ್ಲಾಸಿಕ್ ಅಪಾರ್ಟೆಮೆಂಟ್ ನಿವಾಸಿ
ಆತಂಕದಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳು:
ಇಲ್ಲಿನ ವಿದ್ಯಾನಗರದ ಕಾಡಸಿದ್ದೇಶ್ವರ ಕಾಲೇಜಿನಿಂದ ತೋಳನಕರೆ ವರೆಗೆ ನಿರ್ಮಿಸುತ್ತಿರುವ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣದ ಪರಿಣಾಮವಾಗಿ ಇಲ್ಲಿನ ಅಕ್ಷಯ ಕ್ಲಾಸಿಕ್ ಎನ್ನುವ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ನೀರು ನುಗ್ಗಿ ಪಾರ್ಕಿಂಗ್ ಸ್ಥಳ ಜಲಾವೃತಗೊಂಡಿದೆ. ಕಳೆದ ಆರೇಳು ವರ್ಷದ ಹಿಂದೆ ತೋಳನಕೆರೆ ತುಂಬಿದಾಗ ನೀರು ಸರಾಗವಾಗಿ ಹರಿಯಲು ನಿರ್ಮಿಸಿದ್ದ ನಾಲಾ ಮುಚ್ಚಿ ರಸ್ತೆ ನಿರ್ಮಾಣ ಮಾಡಿರುವುದು ಸಮಸ್ಯೆಗೆ ಮೂಲಕ ಕಾರಣ ಎನ್ನಲಾಗಿದ್ದು, ಅಪಾರ್ಟೆಮೆಂಟ್ ಸುತ್ತಲೂ ನೀರು ಸಂಗ್ರಹವಾಗಿದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಅಪಾರ್ಟ್‌ಮೆಂಟ್ ವಾಸಿಗಳು ಆತಂಕದಲ್ಲಿದ್ದಾರೆ.