ಹುಬ್ಬಳ್ಳಿ: ನಗರದಲ್ಲಿ ಮತ್ತೊಂದು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಡಾ| ಕೆ.ಎಸ್. ಶರ್ಮಾ ಸಮೂಹ ಸಂಸ್ಥೆಗಳ ಆವರಣದಲ್ಲಿ ಸಂಜೀವಿನಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಒಟ್ಟು 60 ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಕಾರ್ಯಕ್ಕೆ ಮಂಗಳವಾರದಿಂದ ಚಾಲನೆ ನೀಡಲಾಗುತ್ತಿದೆ.
ಸಂಜೀವಿನಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಶೈಕ್ಷಣಿಕ ಹಾಗೂ ಆಸ್ಪತ್ರೆ ಕುರಿತ ಸೌಲಭ್ಯಗಳು, ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ಹಾಗೂ ಆಯುಷ್ ಇಲಾಖೆ ಒಟ್ಟು 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿದೆ. 12 ವಿದ್ಯಾರ್ಥಿಗಳು ಸಿಇಟಿ ಹಾಗೂ 48 ವಿದ್ಯಾರ್ಥಿಗಳು ಮ್ಯಾನೇಜ್ ಮೆಂಟ್ ಕೋಟಾದಡಿ ಪ್ರವೇಶ ಪಡೆಯಬಹುದಾಗಿದ್ದು, ಬಹುತೇಕ ಪ್ರವೇಶಾತಿ ಪೂರ್ಣಗೊಂಡಿದೆ.
ಸದ್ಯಕ್ಕೆ ಮೂರು ವಿಭಾಗ: ಸಂಜೀವಿನಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬಿಎಎಂಎಸ್ ಮೊದಲ ವರ್ಷಕ್ಕೆ ಅವಶ್ಯವಿರುವ ಶರೀರ ರಚನಾ ವಿಭಾಗ, ಶರೀರ ಕ್ರಿಯಾ ವಿಭಾಗ ಹಾಗೂ ಮೌಲಿಕ ಸಿದ್ಧಾಂತ ಸೇರಿದಂತೆ ಮೂರು ವಿಭಾಗಕ್ಕೆ ಬೇಕಾದ ಕಟ್ಟಡದ ವ್ಯವಸ್ಥೆ ಪೂರ್ಣವಾಗಿದೆ.
ಸಂಪೂರ್ಣ ಸ್ಮಾರ್ಟ್ ತರಗತಿಗಳಾಗಿದ್ದು, ಪ್ರಯೋಗಾಲಯ, ಡಿಜಿಟಲ್ ಗ್ರಂಥಾಲಯ, ಉಚಿತ ವೈಫೈ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಆರಂಭವಾಗಿರುವ ಆಯುರ್ವೇದ ಆಸ್ಪತ್ರೆಯಲ್ಲಿ ಶಲ್ಯತಂತ್ರ ವಿಭಾಗ(ಶಸ್ತ್ರಚಿಕಿತ್ಸೆ), ಕಣ್ಣು, ಮೂಗು ಮತ್ತು ಕಿವಿ ವಿಭಾಗ, ಪ್ರಸೂತಿ ವಿಭಾಗ, ಚಿಕ್ಕಮಕ್ಕಳ ವಿಭಾಗ, ಕಾಯ ವಿಭಾಗವಿದೆ. 30 ಹಾಸಿಗೆ ವ್ಯವಸ್ಥೆ ಇದೆ.
ಸುಸಜ್ಜಿತ ಶಸ್ತ್ರಚಿಕಿತ್ಸೆ ವಿಭಾಗ ಇದ್ದು, ನಿತ್ಯ ಸರಾಸರಿ 100ಕ್ಕೂ ಹೆಚ್ಚು ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಲೀಚ್ (ಜಿಗಣಿ) ಬಳಸಿ ರಕ್ತ ಮೋಕ್ಷಣ ಚಿಕಿತ್ಸೆ ಹಾಗೂ ಎಲ್ಲಾ ನೋವುಗಳಿಗೆ ಅವಶ್ಯವಿರುವ ಅಗ್ನಿಕರ್ಮ ಚಿಕಿತ್ಸೆ ಸೇರಿದಂತೆ ವಿಶೇಷ ಚಿಕಿತ್ಸೆಗಳನ್ನು ಇಲ್ಲಿನ ಆಯುರ್ವೇದ ಆಸ್ಪತ್ರೆಯಲ್ಲಿ ನುರಿತ ವೈದ್ಯರಿಂದ ನೀಡಲಾಗುತ್ತಿದೆ.
ಸುಮಾರು 120 ವಿವಿಧ ತಳಿಯ 400ಕ್ಕೂ ಹೆಚ್ಚು ಔಷಧಿ ಸಸಿಗಳಿವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ಕಲಿಕೆ ದೃಷ್ಟಿಯಿಂದ ಅನುಕೂಲವಾಗಲಿದೆ ಎನ್ನುವುದು ಇಲ್ಲಿನ ಪ್ರಾಧ್ಯಾಪಕರ ಅಭಿಪ್ರಾಯ.