Advertisement

ಟಿವಿ ಹಾವಳಿಯಿಂದ ರಂಗಭೂಮಿ ನೇಪಥ್ಯಕ್ಕೆ

12:33 PM Apr 02, 2018 | Team Udayavani |

ಬೆಂಗಳೂರು: ನಮ್ಮ ನಾಗರಿಕತೆಯೊಂದಿಗೆ ಬೆಳೆದುಬಂದಿರುವ ರಂಗಭೂಮಿ ಇಂದು ಟಿವಿ ಹಾವಳಿಯಿಂದ ನೇಪಥ್ಯಕ್ಕೆ ಸರಿಯುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಬೇಸರ ವ್ಯಕ್ತಪಡಿಸಿದರು. 

Advertisement

ನಗರದ ನಯನ ಸಭಾಂಗಣದಲ್ಲಿ ಪರಂಪರಾ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾ ಕ್ಷೇತ್ರ ಸುಮಾರು ನೂರು ವರ್ಷಗಳ ಹಿಂದಷ್ಟೇ ಹುಟ್ಟಿಕೊಂಡಿದೆ. ಆದರೆ, ರಂಗಭೂಮಿಯು ನಾಗರಿಕತೆಯೊಂದಿಗೇ ಬೆಳೆದುಬಂದಿದೆ. ಡಾ.ರಾಜ್‌ಕುಮಾರ್‌, ಗುಬ್ಬಿ ವೀರಣ್ಣ, ಏಣಗಿ ಬಾಳಪ್ಪ, ಚಿಂದೋಡಿ ಲೀಲಾ, ಗಿರೀಶ್‌ ಕಾರ್ನಾಡ್‌ ಸೇರಿದಂತೆ ಅನೇಕ ಮಹನೀಯರನ್ನು ಕೊಟ್ಟಂತಹ ಕ್ಷೇತ್ರವು ಈಗ ಜನಾಕರ್ಷಣೆಯಿಂದ ದೂರ ಉಳಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ನಾಟಕ ಪ್ರದರ್ಶನಗಳಿಗೆ ಪ್ರವೇಶ ಶುಲ್ಕ ಇತ್ತು. ಈಗ ಉಚಿತ ಪ್ರವೇಶ ಇದ್ದರೂ ಪ್ರೇಕ್ಷಕರು ಬರುತ್ತಿಲ್ಲ. ಇದಕ್ಕೆ ಕಾರಣ ಟಿವಿ ಭರಾಟೆ, ದಿನದ 24 ಗಂಟೆ ಸುದ್ದಿ, ಮನರಂಜನಾ ಕಾರ್ಯಕ್ರಮಗಳನ್ನು ಬಿತ್ತರಿಸುವ ವಾಹಿನಿಗಳು. ಜನ ಟಿವಿಗಳಿಂದ ಹೊರಬರಬಂದು ರಂಗಭೂಮಿಯತ್ತ ಮುಖಮಾಡಬೇಕು. ಈ ಮೂಲಕ ನಾಗರಿಕತೆಯೊಂದಿಗೇ ಬೆಳೆದುಬಂದಿರುವ ಕಲೆಯನ್ನು ರಕ್ಷಿಸಬೇಕು ಎಂದು ಹೇಳಿದರು.

ರಂಗ ವಿಮರ್ಶಕ ರುದ್ರೇಶ್‌ ಬಿ. ಅದರಂಗಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ನಾಗಾಲೋಟದಲ್ಲಿ ರಂಗಭೂಮಿ ನೇಪಥ್ಯಕ್ಕೆ ಸರಿಯುತ್ತಿರಬಹುದು. ಆದರೆ, ಬೆಂಗಳೂರಿನಂತಹ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಕೆ.ಎಚ್‌. ಕಲಾಸೌಧ, ಕಲಾಗ್ರಾಮ, ರಂಗಶಂಕರ, ರಾಷ್ಟ್ರೀಯ ನಾಟಕೋತ್ಸವಗಳು ನಗರದಲ್ಲಿ ರಂಗಭೂಮಿ ಗರಿಗೆದರುತ್ತಿರುವುದಕ್ಕೆ ಕನ್ನಡಿ ಹಿಡಿಯುತ್ತವೆ ಎಂದ ಅವರು, ನಾಟಕ ಕ್ಷೇತ್ರ ಬೆಳೆಯುವಲ್ಲಿ ಕಾರ್ಮಿಕ ಮತ್ತು ಕಾಲೇಜು ರಂಗಭೂಮಿ ಕೊಡುಗೆ ಸಾಕಷ್ಟಿದೆ. ಆದರೆ, ಇಂದು ಈ ಎರಡೂ ಕಡೆಗಳಲ್ಲಿ ನಶಿಸುತ್ತಿರುವುದು ಬೇಸರದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

Advertisement

“ಪರಂಪರಾ ಪುರಸ್ಕಾರ’ ಸ್ವೀಕರಿಸಿ ಮಾತನಾಡಿದ ಯಮುನಾ ಮೂರ್ತಿ, ಕಲಾವಿದೆರಲ್ಲರೂ ಒಂದೇ ಜಾತಿಗೆ ಸೇರಿದವರು. ಇದರಲ್ಲಿ ಬೇಧ-ಭಾವಗಳಿಲ್ಲ ಎಂದರು. ಇದೇ ವೇಳೆ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ ಅವರನ್ನು ಪುರಸ್ಕರಿಸಲಾಯಿತು. ರಂಗಪರಿಚಾರಕ ಜಿ.ಪಿ. ರಾಮಣ್ಣ, ಇಂಡಿಯನ್‌ ಸೊಸೈಟಿ ಫಾರ್‌ ಟ್ರೆಡಿಷನಲ್‌ ಆರ್ಟ್ಸ್ ಆಂಡ್‌ ಲಿಟರೇಚರ್‌ ಅಧ್ಯಕ್ಷ ಜಿ. ಸೆಲ್ವಕುಮಾರ್‌, ರೇಣುಕಾ ಎಲ್ಲಮ್ಮ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಎಂ. ಮುನಿರಾಜು ಉಪಸ್ಥಿತರಿದ್ದರು. ನಂತರ “ಬರ’ ನಾಟಕ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next