Advertisement

ಹೊಸ ಕಾದಂಬರಿಯ ಪುಟಗಳಿಂದ

07:34 PM Jan 25, 2020 | mahesh |

“”ಮುನ್ನಾ ಕಣ್ಣುಬಿಡು. ಏಳು. ಎಷ್ಟು ಎಬ್ಬಿಸೋದು ನಿನ್ನನ್ನ?” ಚಂಪಾ ಮೌಶಿ ಭುಜ ಹಿಡಿದು ಅಲುಗಿಸಿದಾಗ ಅವನಿಗೆ ತುಸು ಎಚ್ಚರ ಮೂಡುತ್ತಿದೆ. ಸಾವಕಾಶವಾಗಿ ಅರೆಗಣ್ಣುಬಿಟ್ಟು ಸುತ್ತ ನೋಡಿದ. ಮಲಗುವಾಗ ಜೊತೆಗಿದ್ದ ವಿನೋದ್‌ ದಾದಾ, ಅನಿಲ್‌ ಮತ್ತಿತರರು ಕಾಣಿಸುತ್ತಿಲ್ಲ. ವೈಶಾಲಿಯೂ ಸೇರಿದಂತೆ ಯಾವ ಹುಡುಗಿಯರೂ ಇಲ್ಲ. ಅಂಗೈಅಗಲದ ಚಾಳಿನ ಈ ಮೇಲಿನ ಉಪ್ಪರಿಗೆಗೆ ಸೂರ್ಯನಿಗೆ ನೇರಪ್ರವೇಶವಿರದೆ ಮೆಟ್ಟಿಲುಗಳ ಕಡೆಯಿಂದ ತೂರಿಬರುತ್ತಿರುವ ಬೆಳಕು ಇಲ್ಲಿಯೂ ಅಷ್ಟಿಷ್ಟು ಹರಡಿದೆ. ಉಪ್ಪರಿಗೆಯನ್ನೆಲ್ಲ ಬೆಳಗಿಸಲು ಸಾಲದಾದರೂ ಬೆಳಗಾಯಿತೆಂದು ತೋರಿಸುವಷ್ಟು ಬೆಳಕು ಸೂರ್ಯ ಕಳಿಸುತ್ತಿ¨ªಾನೆ. ನಿತ್ಯವೂ ಸಮಯಕ್ಕೆ ಸರಿಯಾಗಿ ಬಂದು ತನ್ನ ನಿದ್ದೆಗೆ ಭಂಗ ತರುವ ಸೂರ್ಯನ ಬಗ್ಗೆ ಬೇಸರ ಮೂಡಿದರೂ, ತುಸುವೂ ಪಕ್ಷಪಾತ ಮಾಡದೆ ನಿರ್ವಂಚನೆಯಿಂದ ತಮಗೂ ಅಷ್ಟು ಬೆಳಕನ್ನು ಕಳಿಸುವ ಅವನ ಬಗ್ಗೆ ಅಭಿಮಾನ ಹುಟ್ಟಿತು. ತಾವು ಸೂಳೆಯರ ಮಕ್ಕಳೆಂಬುದು ಗೊತ್ತಿದ್ದೂ ನಿಕೃಷ್ಟವಾಗಿ ಕಾಣದೆ, ಇತರ ಮನುಷ್ಯರು ಮಾಡುವಂತೆ. ಬಲು ಪ್ರಯಾಸದಿಂದ ಕಣ್ಣುಗಳನ್ನು ಸಂಪೂರ್ಣವಾಗಿ ತೆರೆಯುತ್ತಾ ಮತ್ತೂಮ್ಮೆ ಸುತ್ತ ನೋಡಿದ. ತಾವು ಏಳೆಂಟು ಮಕ್ಕಳು ಉರುಳಿಕೊಂಡರೆ ತುಂಬಿಬಿಡುವ ಉಪ್ಪರಿಗೆ. ದೊಡ್ಡವರಿಗಂತೂ ಅತ್ತಿಂದಿತ್ತ ನಾಲ್ಕೇ ಹೆಜ್ಜೆ ಓಡಾಡುವಷ್ಟು ಜಾಗ. ಒಡನೆಯೇ ಅಮ್ಮನ ನೆನಪಾಯಿತು.

Advertisement

“”ಮೌಶಿ, ಆಯಿಯ ಹತ್ತಿರ ಹೋಗಬೇಕು” ಕಣ್ಣುಜ್ಜಿಕೊಳ್ಳುತ್ತ ನುಡಿದ.
“”ಥೂ ನಿನ್ನ! ಇಷ್ಟು ದೊಡ್ಡ ಹುಡುಗನಾಗಿದ್ದಿ. ಇನ್ನೂ ಆಯಿಯ ಹತ್ತಿರ ಹೋಗಬೇಕು ಅಂತಾರೇನು? ನಡಿ, ಮುಖ ತೊಳೆದು ಬಾ. ನಿನಗೆ ನಾಷ್ಟಾ ಕೊಟ್ಟು ನಾನು ಹೊರಗೆ ಹೋಗೋದಿದೆ. ಬಂದ ಮೇಲೆ ನಾನೇ ಅವಳ ಬಳಿ ಕರೆದೊಯ್ಯುತ್ತೀನಿ. ನಾನು ಬರುವವರೆಗೂ ಇಲ್ಲಿಂದ ಕದಲಕೂಡದು” ಎಂದು ಅವಸರದಲ್ಲಿ ನುಡಿದ, ತಲೆಯ ತುಂಬಾ ಹರಡಿದ್ದ ಬಿಳಿಗೂದಲಿನ, ತುಸು ಗೂನು ಬೆನ್ನಿನ, ಉದ್ದ ಮುಖದ ಚಂಪಾ ಮೌಶಿಯನ್ನೇ ಮುನ್ನಾ ಪಿಳಿಪಿಳಿ ನೋಡಿದ. ಎಲ್ಲರೂ ಅವಳನ್ನು ಮೌಶಿ ಎಂದೇ ಕರೆಯುವುದರಿಂದ ತಾನೂ ಹಾಗೇ ಕರೆದ.

“”ಅದೇನೋ, ಹಾಗೆ ಹೊಸದಾಗಿ ನೋಡ್ತಿದೀಯ ನನ್ನನ್ನ? ಈಗ ಒಳ್ಳೆಯ ಮಾತಿನ‌ಲ್ಲಿ ಏಳ್ತೀಯೋ ಅಥವಾ, ಆ ಸರ್ಕಾರಿ ಆಸ್ಪತ್ರೆಯ ಡಾಕ್ಟರಪ್ಪ ಕೊಡ್ತಾರಲ್ಲ, ಹಾಗೆ ಒಂದು ದೊಡ್ಡ ಸೂಜಿ ಚುಚ್ಚಲೋ?” ಎಂದು ಅವಳು ಕಂಕುಳಿಗೆ ಕೈಹಾಕಿದಾಗ ಅವನಿಗೆ ನಗೆ ಉಕ್ಕಿತು.

“”ಎದ್ದೆ ಮೌಶಿ ಎದ್ದೆ. ಬಿಡೂ…” ಕಿಲಕಿಲನೆ ನಗು ಹರಿಸುತ್ತ ಮೇಲೆದ್ದು, ಹೊದ್ದಿದ್ದ ಚಾದರನ್ನು ಮಡಿಸುವಾಗ ತೋರಿಸಿ ಹೇಳಿದ, “”ಎಷ್ಟೊಂದು ಹರಿದಿದೆ ನೋಡು. ಈ ತೂತುಗಳಲ್ಲೆಲ್ಲ ಕಾಲಬೆರಳು ಸಿಕ್ಕಿಕೊಳ್ಳುತ್ತೆ”
“”ನಿನ್ನ ಆಯಿಗೆ ಹೇಳು. ಅವಳು ರೋಕಡಾ ಕೊಟ್ಟರೆ ಹೊಸದು ತಂದುಕೊಡ್ತೀನಿ” ಮೌಶಿ ಹೇಳಿದಾಗ ಅವನ ಮುಖ ಸಪ್ಪಗಾಯಿತು. ಆಯಿಯ ಬಳಿ ಹಣವಿರುವುದಿಲ್ಲವೆಂಬುದು ಗೊತ್ತಿದ್ದೂ ಕೇಳುವುದು ಹೇಗೆ? ತಾನು ಕೇಳಿದೆ ಅಂತ ಅವಳು ಹೊಂದಿಸಿಕೊಡ್ತಾಳೆನ್ನುವುದು ಬೇರೆ ಮಾತು. ಆದರೆ, ತಾನು ಕೇಳಲಾರ. ಅವಳಿಗೆ ನೋವಾಗುವ, ಅವಳ ದೊಡ್ಡ ಕಣ್ಣುಗಳಲ್ಲಿ ಚಿಂತೆಯನ್ನು ಮೂಡಿಸುವ ಯಾವ ಕೆಲಸವನ್ನೂ ಮಾಡಲಾರ. ಆಲೋಚನೆಯಲ್ಲಿ ಕಳೆದುಹೋದ ಅವನನ್ನು ಗಮನಿಸುವ ವ್ಯವಧಾನವಿಲ್ಲದೆ ಮೌಶಿ ತಾನು ಆಗಷ್ಟೇ ತಂದು ಮೂಲೆಯಲ್ಲಿಟ್ಟಿದ್ದ ಅಲ್ಯೂಮಿನಿಯಂ ತಟ್ಟೆಯನ್ನು ತೋರಿಸಿ ಹೇಳಿದಳು:

“”ವಡಾಪಾವ್‌ ಇದೆ ಅದರಲ್ಲಿ. ಬೇಗ ತಿನ್ನು. ಆಮೇಲೆ ಇನ್ನ್ಯಾರಾದರೂ ಬಂದು ತಗೊಂಡು ಹೋದಾರು. ಮತ್ತೆ ನಾಷ್ಟಾ ಅಂತ ಬಂದರೆ ಕೊಡೋಕೆ ಏನೂ ಇಲ್ಲ”. ಎದ್ದು ಹೊರಟವಳೇ ಸೇರಿಸಿದಳು, “”ಬೇಕಾದರೆ ವಿನೋದ್‌ ದಾದಾನ ಜೊತೆ ಆಡ್ತಿರು ಅಥವಾ ಇಲ್ಲೇ ಕೂತಿರು. ನಾನು ಬರುವ ತನಕ ಆಯಿಯ ಕೋಠಿಯ ಬಳಿ ಹೋಗಬೇಡ. ಜಾಣ ನೀನು” ಹೇಳುವಾಗ ಅವನ ತಲೆಸವರಿದಳು. ಅವನು ವಿಧೇಯನಾಗಿ ತಲೆಯಾಡಿಸಿದ. ಅವಳು ಉಪ್ಪರಿಗೆಯ ಕೊನೆ ಮೆಟ್ಟಿಲಿಳಿದು ಹೋದದ್ದು ತಿಳಿದೊಡನೆ ತಾನೂ ಇಳಿಯತೊಡಗಿದ. ಅವಳು ನಾಲ್ಕು ಹೆಜ್ಜೆ ಇಡುವಷ್ಟರಲ್ಲಿ ಚಾಳು ಮುಗಿದು ಬೀದಿ ಆರಂಭವಾಗಿರುತ್ತೆಂದು ಗೊತ್ತು. ಸ¨ªಾಗದಂತೆ ತಾನೂ ಬೇಗಬೇಗ ಇಳಿದು ಬಂದ. ಕೆಳಗಡೆ ಯಾರೂ ಇಲ್ಲ. ಮುಂಬಾಗಿಲನ್ನು ದಾಟಿ ಒಂದು ಹೆಜ್ಜೆ ಮುಂದಕ್ಕಿಟ್ಟು ಬಲಕ್ಕೆ ತಿರುಗಿ ನೋಡಿದ. ಮೌಶಿ ತನ್ನಿಂದಾಗುವಷ್ಟು ಬೇಗ ನಡೆದು ಹೋಗುತ್ತಿದ್ದಾಳೆ. ಅವನ ಕಣ್ಣುಗಳೂ ಅವಳನ್ನು ಹಿಂಬಾಲಿಸತೊಡಗಿದವು. ಮುಂದಿನ ಅಡ್ಡರಸ್ತೆ ಇನ್ನೂ ತುಸು ದೂರವಿದೆ. ಆಗೇನು ಮಾಡ್ತಾಳ್ಳೋ ನೋಡಬೇಕು. ನಡೆದಷ್ಟೂ ಅವಳ ಆಕೃತಿ ಕಿರಿದಾಗುತ್ತಿದೆ. ಅವನು ರೆಪ್ಪೆಯನ್ನೂ ಮಿಟುಕಿಸದೆ ನೋಡತೊಡಗಿದ. ಇನ್ನೇನು ಅಡ್ಡರಸ್ತೆ ಸಿಕ್ಕಿತು. ಇಲ್ಲ ಬಲಕ್ಕೆ ತಿರುಗಿಲ್ಲ. ನೇರವಾಗಿ ಹೋಗ್ತಿದಾಳೆ. ಅಂದರೆ ಮೊದಲು ರೆಹಮತ್‌ ಚಾಚಾರ ಅಂಗಡಿಗೆ ಹೋಗ್ತಾಳೆ ಎಂದರ್ಥ. ಬಲಕ್ಕೆ ತಿರುಗಿದ್ದರೆ ಸೀದಾ ಆಯಿಯ ಬಳಿ ಹೋಗ್ತಿದ್ದಳು. ಅವನ ಮುಖದಲ್ಲಿ ನಗೆ ಅರಳಿತು. ತನಗಿರುವ ಸಮಯ ಅತ್ಯಲ್ಪವೆಂಬುದು ತಿಳಿದಿದ್ದರಿಂದ ಸರಸರನೆ ರಸ್ತೆ ದಾಟಿ ಎದುರಿನ ಕುರುಚಲು ಗಿಡಗಳ ಸಂದಿಯಲ್ಲಿ ನುಸುಳಿ ನಿಕ್ಕರನ್ನು ಕೆಳಗೆ ಮಾಡಿ ನಿಂತ. ಆ ಅವಸರದಲ್ಲೂ ಲಕ್ಷ್ಯವಿಟ್ಟು ತನಗೆ ಬೇಕಾದ ಎಲೆಗಳ ಮೇಲೆ ಹನಿಕಿಸಿ ಧೂಳಿನಲ್ಲೊಂದು ಚಿತ್ತಾರ ಮೂಡಿಸಿದಾಗ ಸಂತೃಪ್ತಿಯಿಂದ ಮುಖ ಮತ್ತೂಮ್ಮೆ ಅರಳಿತು.

Advertisement

ಮನಸ್ಸು ಅದರಲ್ಲೇ ಕಳೆದುಹೋಗಿ ತುಸುಹೊತ್ತಿನ ನಂತರ ಎಚ್ಚರಗೊಂಡು ಮತ್ತೆ ಓಡುತ್ತಲೇ ರಸ್ತೆ ದಾಟಿ ಬಂದು ತನ್ನ ಚಾಳಿನ ಎಡಕ್ಕೆ, ಹತ್ತುಹೆಜ್ಜೆ ದೂರವಿದ್ದ ನಲ್ಲಿಯಲ್ಲಿ ಮುಖತೊಳೆದು ಬಾಯಿ ಮುಕ್ಕಳಿಸಿ ಒದ್ದೆ ಕೈಯಲ್ಲಿಯೇ ತಲೆಗೂದಲನ್ನು ಸವರಿಕೊಂಡು ಮತ್ತೆ ತನ್ನ ಚಾಳಿಗೆ ಓಡಿಬಂದು ಉಪ್ಪರಿಗೆ ಹತ್ತಿದ. ತಟ್ಟೆಯಲ್ಲಿದ್ದ ವಡಾಪಾವ್‌ ಅನ್ನು ಬಲಗೈಲಿ ಹಿಡಿದು ತಿನ್ನುತ್ತಲೇ ಮೌಶಿ ನಡೆದ ದಾರಿಯಲ್ಲಿ ತಾನೂ ವೇಗವಾಗಿ ನಡೆಯತೊಡಗಿದ. ಈ ಸುಕಲಾಜಿ ಗಲ್ಲಿಯಲ್ಲಿ ಹೀಗೇ ಉದ್ದಕ್ಕೂ ನಡೆಯುತ್ತ ಸಾಗಿದರೆ ಜಹಾಂಗೀರ್‌ ಬೆಹರಾಮ್‌ ಮಾರ್ಗ್‌ ಸಿಗುತ್ತೆ. ಆದರೆ, ಆಯಿಯ ಕೋಠಿಯನ್ನು ತಲುಪಲು ಅಷ್ಟು ದೂರ ಹೋಗಬೇಕಿಲ್ಲ. ಏಳೆಂಟು ಚಾಳುಗಳನ್ನು, ನಂತರ ಸಿಗುವ ಒಂದೆರಡು ಅಂಗಡಿಗಳನ್ನು ದಾಟಿ ಬಲಕ್ಕೆ ತಿರುಗಿದರೆ ಹದಿನಾಲ್ಕನೆಯ ಗಲ್ಲಿ. ಅಲ್ಲೇ ಅವಳಿರುವ ಕೋಠಿ. ಈಗ ತಾನು ನಡೆಯುತ್ತಿರುವುದರ ವಿರುದ್ಧ ದಿಕ್ಕಿಗೆ ಸಾಗಿದರೆ ಸಿಗೋದು ನಿಮ್‌ಕರ್‌ ಮಾರ್ಗ್‌. ಅಲ್ಲಿಗೆ ಹೋಗೋದು ಆಟ ಆಡುವಾಗ ಮಾತ್ರ. ಸಾಮಾನ್ಯವಾಗಿ ವಿನೋದ್‌ ದಾದಾ ಜೊತೆಗಿದ್ದೇ ಇರ್ತಾನೆ ಎಂದುಕೊಳ್ಳುತ್ತ ನಡೆಯುತ್ತಿರುವಾಗ ವಡಾಪಾವ್‌ ಮುಗಿದದ್ದು ಗಮನಕ್ಕೆ ಬಂತು. ಹೊಟ್ಟೆ ತುಂಬಿಲ್ಲ. ಜೇಬು ತಡಕಿಕೊಂಡ. ಒಂದು ರೂಪಾಯಿ ಇದೆ. ಬರುವಾಗ ರೆಹಮತ್‌ ಚಾಚಾರ ಅಂಗಡಿಗೆ ಹೋಗಿ ಇನ್ನೊಂದು ವಡಾಪಾವ್‌ ಅನ್ನೋ, ಕ್ರೀಮ್‌ ಬನ್‌ ಅನ್ನೋ ತಗೊಂಡು ತಿನ್ನಬಹುದು ಎಂದುಕೊಂಡು ತನಗೆ ಚಿರಪರಿಚಿತವಾದ ಹದಿನಾಲ್ಕನೆಯ ಗಲ್ಲಿಯಲ್ಲಿ ಬಲಕ್ಕೆ ತಿರುಗಿದ.

ಸಾವಕಾಶವಾಗಿ ಒಂದೊಂದೇ ಕೋಠಿಯನ್ನು ಎಣಿಸುತ್ತ ದಾಟಿಕೊಂಡು ಸಾಗಿದಂತೆ, ಹುಟ್ಟಿದಾರಭ್ಯ ಇದೇ ಚಿತ್ರವನ್ನು ಕಣ್ಣುಗಳಲ್ಲಿ ತುಂಬಿಕೊಂಡಿರುವ ಮುನ್ನಾನಿಗೆ ವಿಶೇಷವಾದದ್ದೇನೂ ಅನಿಸುತ್ತಿಲ್ಲವಾದರೂ ಎದೆ ಜೋರಾಗಿ ಹೊಡೆದುಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ಇಲ್ಲಿಗೆ ಬರುವ ಅನುಮತಿಯಿಲ್ಲದಿದ್ದರೂ ಹೀಗೆ ಕಳ್ಳತನದಿಂದ ಬಂದು. ಸುಳ್ಳನ್ನು ಕಂಡರಾಗುವುದಿಲ್ಲ ಆಯಿಗೆ. ಸಿಕ್ಕಿಬಿದ್ದರೆ ಅವಳನ್ನು ಎದುರಿಸುವುದು ಹೇಗೆಂಬ ಅಳುಕನ್ನೂ ಮೀರಿಸುವ ಸೆಳೆತ. ಮಧ್ಯಾಹ್ನ ಹನ್ನೆರಡರ ನಂತರ ಬಂದು, ಎರಡು-ಮೂರು ಗಂಟೆಯವರೆಗೂ ಇದ್ದು ಮತ್ತೆ ಹೊರಟುಬಿಡಬೇಕು. ಬೇರೆ ಅಮ್ಮಂದಿರು ತಮ್ಮ ಮಕ್ಕಳಿಗೆ ಈ ಕಟ್ಟು ಹಾಕಿಲ್ಲ.

ಅವನ ಆಯಿ ಮಾತ್ರ ಖಡಕ್ಕಾಗಿ ಹೇಳಿಬಿಟ್ಟಿದಾಳೆ. ಈಗ ಒಂದೊಂದೇ ಕೋಠಿಯ ಕೆಳಗಿನ, ಮೇಲಿನ ಅಂತಸ್ತುಗಳನ್ನು ಗಮನಿಸುತ್ತ ನಡೆದ. ಇವೆಲ್ಲ ದೊಡ್ಡ ಕೋಠಿಗಳು. ಒಳಗೆ ಹಲವಾರು ಖೋಲಿ ಅಥವಾ ಕೋಣೆಗಳಿರುತ್ತವಂತೆ. ಅವನೆಂದೂ ಒಳಹೊಕ್ಕು ನೋಡಿಲ್ಲ. ಈಗ ಎಲ್ಲ ಖೋಲಿಗಳ ಕಿಟಕಿಗಳೂ ಮುಚ್ಚಿವೆ. ಸಂಜೆ ಧಂದಾ ಶುರುವಾದಾಗ ತೆರೆದುಕೊಂಡು. ಒಳಗಿರುವವರು ಹೊರಗೆ ಇಣುಕಿ. ವಿನೋದ್‌ ದಾದಾ ಹೇಳಿದ್ದು. ನಾಲ್ಕನೆಯ ಕೋಠಿಯನ್ನು ದಾಟುತ್ತಿದ್ದಂತೆ ಅವನ ಹೆಜ್ಜೆ ನಿಧಾನವಾಯಿತು. ಮುಂದಿನದರಲ್ಲೇ ಆಯಿ ಇರುವುದು. ಅದರ ಒಡತಿ, ಘರ್‌ವಾಲಿಯನ್ನ ಕಂಡರೆ ಎಲ್ಲರೂ ಹೆದರುತ್ತಾರೆ. ಮೌಶಿಯೂ. ಆಯಿಯ ಕಣ್ಣುಗಳಲ್ಲಿ ಅವನಿಗೆ ಎಂದೂ ಅಂಜಿಕೆ ಕಂಡಿಲ್ಲ. ಘರ್‌ವಾಲಿಯನ್ನು ಅವನೂ ನೋಡಿ¨ªಾನೆ. ಭಯವೆನಿಸಿಲ್ಲ. ಈಗ ಕೋಠಿಯ ಮುಂದೆ ಬಂದು ನಿಂತು ಅತ್ತಿತ್ತ ನೋಡಿದ. ಯಾರೂ ಹೊರಗಿಲ್ಲ. ಎದುರಿಗೆ ಕಗ್ಗತ್ತಲ ಓಣಿ. ಅದರ ಕಟ್ಟಕಡೆಯಲ್ಲಿ, ಬಲಕ್ಕೆ ಆಯಿಯ ಖೋಲಿ. ಮೆಲ್ಲಗೆ ಒಂದೊಂದೇ ಹೆಜ್ಜೆ ಇಟ್ಟು ನಡೆಯತೊಡಗಿದ.

ಸಹನಾ ವಿಜಯಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next