Advertisement

ದೂರದಿಂದ ಬಂದವರೇ, ಬಾಗಿಲಲಿ ನಿಂದವರೇ…

09:18 AM Feb 13, 2020 | mahesh |

ಗಡಿಬಿಡಿಯಿಂದ ಒಳಗೆ ಹೋಗಿ ಲಗುಬಗೆಯಿಂದ ನೀಲಿಸೀರೆ ಉಟ್ಟು, ಅಳ್ಳಕವಾಗಿ ಜಡೆ ಹೆಣೆದು, ಹೂ ಮುಡಿದು ಮುಖಕ್ಕೆ ರೆಮಿ ಸ್ನೋ, ಲ್ಯಾಕ್ಟೋ ಕ್ಯಾಲಮೈನ್‌ ಲೇಪಿಸಿಕೊಂಡು ಸಿದ್ಧಳಾದೆ. ಎದೆ “ಢವಢವ ಎಂದಿದೆ ಕೇಳು’ ಎನ್ನುತ್ತಿತ್ತು.

Advertisement

ಡಿಗ್ರಿ ಮುಗಿಸಿ ವರ್ಷ ಕಳೆದಿತ್ತು. ಬಾರಕೂರಿನ ಅಜ್ಜಿಮನೆಗೆ ಹೋಗಿದ್ದೆ. ಅಲ್ಲಿ ಅಜ್ಜಿ ಒಬ್ಬರೇ ವಾಸಿಸುತ್ತಿದ್ದರು. ಅವತ್ತೂಂದಿನ ಬೆಳಗ್ಗೆ 10 ಗಂಟೆ ಇರಬಹುದು. ಅದೇ ತಾನೇ ಸ್ನಾನ ಮುಗಿಸಿ, ಲಂಗ-ದಾವಣಿ ಧರಿಸಿ, ಹಸಿ ಕೂದಲು ಒಣಗಿಸಿಕೊಳ್ಳುತ್ತಾ, ಮಾವಿನ ಹಣ್ಣು ತಿನ್ನುತ್ತಾ, “ಲಾಯರ್‌ ಮಗಳು’ ಚಿತ್ರದ ಹಾಡು ಗುನುಗುತ್ತಾ ವರಾಂಡದಲ್ಲಿ ಕುಳಿತಿದ್ದೆ.

“ದೂರದಿಂದ ಬಂದವರೇ,
ಬಾಗಿಲಲಿ ನಿಂದವರೇ,
ಮಂದಿರವು ಚೆನ್ನಿದೆಯೇ
ಆರಾಮವಾಗಿದೆಯೇ?’
ಅಷ್ಟರಲ್ಲಿ ಬಾಗಿಲು ಬಡಿದ ಶಬ್ದ ಕೇಳಿಸಿತು. ಓಡಿ ಹೋಗಿ ಬಾಗಿಲು ತೆರೆದೆ. ಓರ್ವ 45ರ ಆಸುಪಾಸಿನ ಮಧ್ಯವಯಸ್ಕರು, ಜೊತೆಗೊಬ್ಬ ಕಿರುಮೀಸೆಯ ಕೆಂಪು ಟೊಮೇಟೋ ಹುಡುಗ. ಒಳ ಕರೆದು ಆಸನ ತೋರಿಸಿದೆ. ಸುಖಾಸೀನರಾದ ನಂತರ- “ಅಜ್ಜಿ ಎಲ್ಲಮ್ಮ? ಕರೀತೀಯ?’ ಅಂದರು.
“ಸ್ನಾನಕ್ಕೆ ಹೋಗಿದ್ದಾರೆ, ಈಗ ಬರ್ತಾರೆ’ ಅಂದೆ. “ಹೌದಾ, ಬರಲಿ ಬಿಡು, ನೀನು ಯಾವಾಗ ಊರಿಗೆ ಬಂದೆಯಮ್ಮ? ಹೇಗಿದ್ದೀಯ? ನಿಮ್ಮ ತಂದೆ ನರಹರಿರಾಯರು ಹೇಗಿದ್ದಾರೆ?’- ಅರೆ, ಈ ಯಜಮಾನರು ತೀರಾ ಪರಿಚಿತರಂತೆ ಪ್ರಶ್ನೆ ಕೇಳುತ್ತಿದ್ದಾರಲ್ಲ, ಅಂತ ಗಲಿಬಿಲಿ ಆಯ್ತು!

“ಅಡುಗೆ ಮಾಡಲು ಬರುತ್ತಾ? ಹೊಲಿಗೆ ಏನಾದರೂ ಬರುತ್ತಾ? ಟೈಪ್‌ರೈಟಿಂಗ್‌ ಪರೀಕ್ಷೆ ಏನಾದರೂ ಪಾಸ್‌ ಮಾಡಿದ್ದೀಯಾಮ್ಮಾ?’- ಅವರ ಪ್ರಶ್ನೆಗಳಿಗೆ, ಸಂಕ್ಷಿಪ್ತವಾಗಿ ನಾಲ್ಕು ಸಾಲಿನಲ್ಲಿ ಉತ್ತರಿಸಿದೆ. ಹುಡುಗ ಬಾಯಿಯಲ್ಲಿ ಅವಲಕ್ಕಿ ತುಂಬಿಕೊಂಡವನಂತೆ ಮಗುಮ್ಮಾಗಿ ಕುಳಿತಿದ್ದ.

ಅಜ್ಜಿ, ಸ್ನಾನ ಮುಗಿಸಿ ಬಂದವರೇ, ಕುಳಿತಿದ್ದ ಇವರನ್ನು ನೋಡಿ ಹೌಹಾರಿ- “ಜೋಯಿಸರೇ, ಮುನ್ಸೂಚನೆ ಕೊಡದೇ ಬಂದುಬಿಟ್ಟಿದ್ದೀರಾ? ಒಂದ್ನಿಮಿಷ’ ಎನ್ನುತ್ತಾ, ನನ್ನನ್ನು ಹೆಚ್ಚಾ ಕಡಿಮೆ ಎಳೆದುಕೊಂಡೇ ಒಳಗೆ ಹೋದರು.

Advertisement

“ಪುಟ್ಟಿ, ಬೇಗ ಸೀರೆ ಉಟ್ಟು ಜಡೆ ಹೆಣೆದುಕೊಂಡು ಅಲಂಕಾರ ಮಾಡಿಕೊಂಡು ಬಾ. ಅವರು ನಿನ್ನನ್ನು ನೋಡೋಕೆ ಬಂದಿದಾರೆ’ ಅಂದುಬಿಟ್ಟರು ಅಜ್ಜಿ.

ಅಂದರೆ, ಅವರು ನನ್ನ ವಧು ಪರೀಕ್ಷೆಗೆ ಬಂದಿದ್ದಾರೆ! ಈ ವಿಚಾರ ತಿಳಿದು, ಎದೆ ಧಸಕ್ಕೆಂದಿತು. ಪಕ್ಕದಲ್ಲಿಯೇ ಡಜನ್‌ ಲಕ್ಷ್ಮಿ ಬಾಂಬ್‌ ಸ್ಫೋಟಿಸಿದಂತಾಯಿತು. ಒಮ್ಮೆ ನನ್ನನ್ನು ಕನ್ನಡಿಯಲ್ಲಿ ನೋಡಿಕೊಂಡೆ. ಆಹಾ, ಆ ಹಳೆಯ ಲಂಗದಾವಣಿ, ಮುಖಕ್ಕೆ ಏನನ್ನೂ ಹಚ್ಚಿಲ್ಲ, ಬಿಚ್ಚಿದ ಕೂದಲು, ಮಾವಿನ ಹಣ್ಣು ತಿಂದುದಕ್ಕೆ ಸಾಕ್ಷಿಯಾದ ವದನ, ಇನ್ನವರು ನನ್ನನ್ನು ಒಪ್ಪಿಕೊಂಡಂತೆಯೇ!

ಗಡಿಬಿಡಿಯಿಂದ ಒಳಗೆ ಹೋಗಿ ಲಗುಬಗೆಯಿಂದ ನೀಲಿಸೀರೆ ಉಟ್ಟು, ಅಳ್ಳಕವಾಗಿ ಜಡೆ ಹೆಣೆದು, ಹೂ ಮುಡಿದು ಮುಖಕ್ಕೆ ರೆಮಿ ಸ್ನೋ, ಲ್ಯಾಕ್ಟೋ ಕ್ಯಾಲಮೈನ್‌ ಲೇಪಿಸಿಕೊಂಡು ಸಿದ್ಧಳಾದೆ. ಎದೆ “ಢವಢವ ಎಂದಿದೆ ಕೇಳು’ ಎನ್ನುತ್ತಿತ್ತು. ಅಜ್ಜಿ, ಉಂಡೆ, ಚಕ್ಕುಲಿ ಕೊಟ್ಟು ಅವರೊಂದಿಗೆ ಹರಟುತ್ತಿದ್ದರು. ಕಾಫಿ ಲೋಟ ಹಿಡಿದು ಅವರೆದುರು ಬಂದೆ. ಕಾಫಿ ಕೊಡುವಾಗ ಕೈಗಳಲ್ಲಿ ನಡುಕ. ಎದುರಿನ ಕುರ್ಚಿಯಲ್ಲಿ ಕುಳ್ಳಿರಲು ಹೇಳಿದರು. ಕುಳಿತೆ. ವಾರೆನೋಟದಿಂದ ಹುಡುಗನೆಡೆಗೆ ನೋಡಿದೆ. ಪರವಾಗಿಲ್ಲ, ಕೊಂಚ ದೊಡ್ಡ ಮೂಗು ಎನಿಸಿದರೂ, ಮುಖದಲ್ಲಿ ಒಂಥರಾ ಆಕರ್ಷಣೆಯಿದೆ ಅಂದಿತು ಮನಸ್ಸು!

ಕೆಲವು ಪ್ರಶ್ನೆ, ಅದಕ್ಕೆ ಸಂಭಾವ್ಯ ಉತ್ತರಗಳು ಸುಸಂಪನ್ನವಾಗಿ, ಇಬ್ಬರೂ ಎದ್ದು ಹೊರಟರು. “ಪತ್ರ ಬರೆದು ತಿಳಿಸುತ್ತೇವೆ’ ಎಂಬ ಮಾಮೂಲಿ ಸಮಜಾಯಿಷಿ. ಒಂದು ವಾರದಲ್ಲಿಯೇ ಉತ್ತರ ಬಂದಿತ್ತು. ಒಪ್ಪಿಗೆ, ನಿಶ್ಚಿತಾರ್ಥ, ಮದುವೆ, ಹನಿಮೂನ್‌ ಎಲ್ಲವೂ ಕನಸಿನಂತೆ ನಡೆದು ಹೋಯಿತು. ಈಗಲೂ ನಮ್ಮವರು ಆಗಾಗ ಛೇಡಿಸುತ್ತಾರೆ- “ದೂರದಿಂದ ಬಂದಿಹೆನು, ಬಾಗಿಲಲಿ ನಿಂದಿಹೆನು’ ಅಂತ!

(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ uv.avalu@gmail. ಗೆ ಬರೆದು ಕಳಿಸಿ.)

 -ಕೆ. ಲೀಲಾ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next