ನವದೆಹಲಿ: ಮುಕೇಶ್ ಜಗತಿಯಾನಿ ಕುವೈಟ್ ನಲ್ಲಿ ಜನಿಸಿದ್ದರು ಕೂಡಾ ಅವರು ಲಂಡನ್, ಬ್ರಿಟನ್ ನಲ್ಲಿ ಶಿಕ್ಷಣ ಪಡೆಯುವ ಮುನ್ನ ಚೆನ್ನೈ ಮತ್ತು ಮುಂಬೈನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಆದರೆ ಲಂಡನ್ ನಲ್ಲಿ ಶಿಕ್ಷಣ ಮುಂದುವರಿಸದೇ ಟ್ಯಾಕ್ಸಿ ಓಡಿಸಲು ಆರಂಭಿಸಿದ್ದರು. ನಂತರ ಹೋಟೆಲ್ ಕ್ಲೀನರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಜಗತಿಯಾನಿ ಜೀವನದ ಮೊದಲ ಆಘಾತ ಎಂಬಂತೆ ಅತ್ಯಲ್ಪ ಅವಧಿಯಲ್ಲೇ ತಂದೆ, ತಾಯಿ ಹಾಗೂ ಸಹೋದರ ಅಪಘಾತದಲ್ಲಿ ವಿಧಿವಶರಾಗಿದ್ದರು.
ಇದನ್ನೂ ಓದಿ:50 ಕ್ವಿಂಟಾಲ್‌ಗೂ ಹೆಚ್ಚಿನ ಒಣ ಮೆಣಸಿನಕಾಯಿ ರಾಶಿಗೆ ಬೆಂಕಿ: ವಿಡಿಯೋ ವೈರಲ್
ಟ್ಯಾಕ್ಸಿ ಡ್ರೈವರ್ ಇಂದು ಕೋಟ್ಯಧಿಪತಿ:
ಜಗತಿಯಾನಿ ಮಿಕ್ಕಿ ಪೋಷಕರನ್ನು, ಸಹೋದರನನ್ನು ಕಳೆದುಕೊಂಡು ಅನಾಥರಾಗಿದ್ದರು. ಕೊನೆಗೆ ಮಿಕ್ಕಿ ಲಂಡನ್ ನಿಂದ ಬಹ್ರೇನ್ ಗೆ ತೆರಳಿದ್ದರು. ಅಲ್ಲಿ ತಮಗೆ ಪಿತ್ರಾರ್ಜಿತವಾಗಿ ದೊರೆತ 6,000 ಡಾಲರ್ ಹಣದಲ್ಲಿ 1973ರಲ್ಲಿ ಬೇಬಿ ಪ್ರಾಡಕ್ಟ್ಸ್ ಶಾಪ್ ಅನ್ನು ತೆರೆಯುವ ಮೂಲಕ ವ್ಯಾಪಾರ ಜಗತ್ತನ್ನು ಪ್ರವೇಶಿಸಿದ್ದರು. ಪ್ರೌಢಶಿಕ್ಷಣವನ್ನು ಪಡೆಯದ ಜಗತಿಯಾನಿ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರಲು ಆರಂಭಿಸಿದ್ದರು.
ವ್ಯಾಪಾರ, ವಹಿವಾಟು ಆರಂಭಿಸಿದ ಒಂದು ದಶಕದ ನಂತರ ಮಿಕ್ಕಿ ಅವರು ಒಟ್ಟು ಆರು ಶಾಪ್ ಗಳನ್ನು ತೆರೆದಿದ್ದರು. ಇಂದು ಭಾರತ, ಮಧ್ಯ ಏಷ್ಯಾ, ಆಫ್ರಿಕಾ, ಏಷ್ಯಾ ಮತ್ತು ಯುರೋಪ್ ಸೇರಿದಂತೆ 20ಕ್ಕೂ ಅಧಿಕ ದೇಶಗಳಲ್ಲಿ 6,000 ಶಾಪ್ ಗಳನ್ನು ಹೊಂದಿದ್ದಾರೆ.
ಏತನ್ಮಧ್ಯೆ ಗಲ್ಫ್ ಯುದ್ಧ ಆರಂಭವಾದ ನಂತರ ಮುಕೇಶ್ ಅವರು ದುಬೈಗೆ ಬಂದು ಲ್ಯಾಂಡ್ ಮಾರ್ಕ್ ಗ್ರೂಪ್ ಅನ್ನು ಸ್ಥಾಪಿಸಿದ್ದರು. ಕೆಲವು ವರ್ಷಗಳಲ್ಲಿ ಲ್ಯಾಂಡ್ ಮಾರ್ಕ್ ಗ್ರೂಪ್ ಮಧ್ಯ ಏಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಪ್ಯಾಶನ್, ಎಲೆಕ್ಟ್ರಾನಿಕ್ಸ್, ಫರ್ನಿಚರ್ ಮತ್ತು ಬಜೆಟ್ ಹೋಟೆಲ್ ಗಳನ್ನು ಆರಂಭಿಸಿದ್ದರು. ಇವರ ಕಂಪನಿಯಲ್ಲಿ ಇಂದು 45,000ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ.
ಜಗತಿಯಾನಿ ಮಿಕ್ಕಿ ಅವರು ತಮ್ಮ ನಾಲ್ಕು ದಶಕಗಳ ಉದ್ಯಮದ ಮೂಲಕ ಇಂದು 5.3 ಬಿಲಿಯನ್ ಡಾಲರ್ (42,800 ಕೋಟಿ ರೂಪಾಯಿ) ಆಸ್ತಿಯ ಒಡೆಯರಾಗಿದ್ದಾರೆ. ಮಿಕ್ಕಿ ಅವರು ರೇಣುಕಾ ಜಗತಿಯಾನಿ ಅವರನ್ನು ವಿವಾಹವಾಗಿದ್ದು, ಆಕೆ ಇಂದು ಬಿಲಿಯನ್ ಡಾಲರ್ ಮೌಲ್ಯದ ಕಾಂಗ್ಲೋಮೆರೇಟ್ ನ ಸಿಇಒ ಮತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಂಪತಿಗೆ ಆರತಿ, ನಿಶಾ ಮತ್ತು ರಾಹುಲ್ ಸೇರಿ ಮೂವರು ಮಕ್ಕಳು. ಈ ಮೂವರು ಕಂಪನಿಯ ಗ್ರೂಪ್ ನಿರ್ದೇಶಕರಾಗಿದ್ದಾರೆ.