ಸಕಲೇಶಪುರ: ನೆರೆ ಪೀಡಿತ ಪ್ರದೇಶದ ಮಂದಿಗೆ ಯಾವುದೇ ತೊಂದರೆಯಾಗದಂತೆ ರಾಜ್ಯ ಸರ್ಕಾರ ಕ್ರಮ ವಹಿಸಿದ್ದು, ಈಗಾಗಲೇ ಸಾವಿರ ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ತಾಲೂಕಿನ ನೆರೆಯಿಂದ ಹಾನಿಯುಂಟಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದರು.
ಚಿಕ್ಕಮಗಳೂರಿನಲ್ಲಿ ವ್ಯಾಪಕ ಹಾನಿ: ಈಗಾಗಲೆ ನಾನು ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಸ ಮಾಡಿದ್ದು, ಚಿಕ್ಕಮಗಳೂರಿನಲ್ಲಿ ನೆನ್ನೆ ಹಾಗೂ ಇಂದು ಹಾಸನದಲ್ಲಿ ಪ್ರವಾಸ ಮಾಡಿದ್ದೇನೆ. ಚಿಕ್ಕಮಗಳೂರಿನಲ್ಲಿ ಆಗಿರುವಷ್ಟು ಹಾನಿ ಹಾಸನದಲ್ಲಿ ಆಗಿಲ್ಲ. ಆದರೂ ಕೂಡ ಪ್ರವಾಹದಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಉಂಟಾಗಿದೆ. ಈಗಾಗಲೇ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 7.5 ಕೋಟಿ ರೂ. ಹಣವಿದ್ದು ತಾತ್ಕಾಲಿಕ ಪರಿಹಾರವಾಗಿ 10 ಸಾವಿರ ರೂ. ವಿತರಿಸಲಾಗಿದೆ.
ಅತಿ ಹೆಚ್ಚು ಹಾನಿಗೊಳಗಾದ ಮನೆಗಳಿಗೆ ಲಕ್ಷ ರೂ ಪರಿಹಾರ ನೀಡಲು ಯೋಜಿಸಲಾಗಿದೆ. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ 5 ತಿಂಗಳ ಕಾಲ ಬಾಡಿಗೆ ಮನೆಯಲ್ಲಿರಲು ಪ್ರತಿ ಕುಟುಂಬಕ್ಕೆ 25 ಸಾವಿರ ರೂ. ನೀಡಲು ಆದೇಶಿಸುತ್ತೇನೆ ಎಂದರು.
ಎನ್‌ಡಿಆರ್‌ಎಫ್ ಗೈಡ್ ಲೈನ್ ಹಣ ಶೀಘ್ರದಲ್ಲಿ ಬರಲಿದೆ. ನೆರೆ ಸಂತ್ರಸ್ತರಿಗೆ ಚೆಕ್ ಮೂಲಕ ಪರಿಹಾರ ಕೊಡದೆ ಅಕೌಂಟ್ ಗೆಹಾಕಲು ಆದೇಶ ಮಾಡಿದ್ದೇನೆ. ಅಧಿಕಾರಿಗಳು ರಜೆ ಪಡೆಯದೇ ಜನರೊಂದಿಗೆ ಇದ್ದು ಅವರ ಸಂಕಷ್ಟ ಆಲಿಸಬೇಕು ಎಂದರು.ತಾಲೂಕಿನ, ಹುರುಡಿ, ಹಾನು ಬಾಳು, ವೆಂಕಟಹಳ್ಳಿ ಮತ್ತು ಮಾರನಹಳ್ಳಿ ಹಾಗೂ ರಾಷ್ಟ್ರೀಯ ಹೆದ್ದಾರಿ 75ರ ಅಕ್ಕಪಕ್ಕದಲ್ಲಿ ಕುಸಿತವಾಗಿರುವ ಗುಡ್ಡ ಪ್ರದೇಶವನ್ನು ಸಚಿವರು ವೀಕ್ಷಿಸಿದರು. ಶಾಸಕ ಎಚ್.ಕೆ. ಕುಮಾರ ಸ್ವಾಮಿ, ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಗೌಡ, ಕಡೂರು ಶಾಸಕ ಬೆಳ್ಳಿಪ್ರಕಾಶ್, ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಡೀಸಿ ಗಿರೀಶ್, ಬಿಜೆಪಿ ತಾಲೂಕು ಪ್ರಭಾರಿ ಅಮಿತ್ ಶೆಟ್ಟಿ ಹಾಜರಿದ್ದರು.