ಸಹಸ್ರಮಾನದ ಆರಂಭದ (2000) ಕಾಲ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳ ನಾಲ್ಕನೆಯ ಪರ್ಯಾಯದ ಸಂಭ್ರಮ. ಅತ್ತ ಪ್ರಶಾಂತ ತಾಣವಾಗಿದ್ದ ಮಲೆನಾಡು ಪಶ್ಚಿಮ ಘಟ್ಟ ಪ್ರದೇಶದ ಕಾಡು ಜನರಲ್ಲಿ ಅಭದ್ರತೆ, ಸರಕಾರದ ದ್ವಂದ್ವ ನಿಲುವು, ಚಳವಳಿ, ಅನಪೇಕ್ಷಿತ ಘಟನೆ, ಹಿಂಸೆ- ಪ್ರತಿಹಿಂಸೆ ಮೂಡಿದವು. ಅವರಷ್ಟಕ್ಕೆ ಅವರು ಬದುಕಿಕೊಂಡಿದ್ದ ಕಾಡಿನ ಗಿರಿಜನರು ಸರಕಾರದ ವಿರುದ್ಧ ಬಹಿರಂಗವಾಗಿ ಚಳವಳಿ ನಡೆಸಿದರು.
ಇದೇ ವೇಳೆ ನಕ್ಸಲ್ ಚಳವಳಿಗಳೂ ಕಂಡುಬಂದವು. ಕಾಡಿನ ಜನರನ್ನು ಬೇರೆ ಬೇರೆ “ಇಸಂ’ಗಳ ಮೂಲಕ ಸರಕಾರ, ಪ್ರಜಾಪ್ರಭುತ್ವ, ಸ್ಥಳೀಯ ಸಂಸ್ಕೃತಿ, ಧಾರ್ಮಿಕ ಪರಂಪರೆ, ಒಂದು ಜನಾಂಗದ ವಿರುದ್ಧ ಇನ್ನೊಂದು ಜನಾಂಗವನ್ನು ಎತ್ತಿಕಟ್ಟುವ ಕೆಲಸ ವ್ಯವಸ್ಥಿತವಾಗಿ ನಡೆದವು. ಪೇಜಾವರ ಶ್ರೀಗಳವರು ವಿಶ್ವಾಸಾರ್ಹ ವ್ಯಕ್ತಿಗಳನ್ನು ನಿಯೋಜಿಸಿ ಜನರ ನಿಜವಾದ ಸಮಸ್ಯೆಗಳನ್ನು ಅಧ್ಯಯನ ನಡೆಸಲು ಸೂಚಿಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನ ವನ ಘೋಷಣೆಯಾದ ಬಳಿಕ ಸರಕಾರದ ತಪ್ಪು ನಿರ್ಧಾರದಿಂದ ಗಿರಿಜನರಲ್ಲಿ ಅಭದ್ರತೆ, ಅತಂತ್ರ ಭಾವನೆ ಮೂಡಿರುವ ಬಗ್ಗೆ ವರದಿಗಳು ಬೆಳಕು ಚೆಲ್ಲಿದವು. ಕಾಡಿನ ಜನರಿಗೆ ಮುಖ್ಯವಾಗಿ ಬೇಕಾದದ್ದು ಜೀವನದಲ್ಲಿ ಭದ್ರತೆ. ಅವರ ಜತೆ ಭಾವನಾತ್ಮಕವಾಗಿ ನಿಲ್ಲಬೇಕು. ಶಿಕ್ಷಣ, ರಸ್ತೆ, ಕುಡಿಯುವ ನೀರಿನಂತಹ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಒಟ್ಟಿನಲ್ಲಿ ಅವರು ಅತಂತ್ರರಲ್ಲ, ಅವರ ಜತೆ ನಾವಿದ್ದೇವೆ ಎಂಬ ಮನಃಸ್ಥೈರ್ಯ ಮೂಡಬೇಕು.
ಇದನ್ನೇ ಕಳೆದ ಹಲವು ವರ್ಷಗಳಿಂದ ಪೇಜಾವರ ಶ್ರೀಗಳು ನಡೆಸಿದರು. ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದ.ಕ. ಜಿಲ್ಲೆಗಳ 80 ಗ್ರಾ.ಪಂ.ಗಳು ಬರುತ್ತವೆ. ಶ್ರೀಗಳು ತಮ್ಮ ಕಾರ್ಯತಂಡದ ಮೂಲಕ ಅನೇಕ ಮನೆಗಳಿಗೆ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಪೂರೈಕೆ, 20ಕ್ಕೂ ಹೆಚ್ಚು ದೈವಸ್ಥಾನಗಳ ಅಭಿವೃದ್ಧಿ, ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ವ್ಯವಸ್ಥೆ ಮನೆ ನಿರ್ಮಾಣ, ಮನೆ ನಿರ್ಮಾಣಕ್ಕೆ ಪರಿಕರ ಪೂರೈಕೆ, ಕೃಷಿ ಮಾಡುವ ಆಸಕ್ತ ಗಿರಿಜನರಿಗೆ ಕೃಷಿಭೂಮಿ ಒದಗಣೆ, ಪರಂಪರಾಗತ ಕಲಾವಿದರಿಗೆ ಜನಪದ ಪರಿಕರಗಳ ಸರಬರಾಜು ಇತ್ಯಾದಿ ಕೆಲಸಗಳನ್ನು ಮಾಡಿದ್ದಾರೆ.
ಇವರ ನೆರವಿನಿಂದ ಕಲಿತವರಲ್ಲಿ ವೈದ್ಯರೂ, ಎಂಜಿನಿಯರ್, ಸ್ನಾತಕೋತ್ತರ ಪದವಿ ಆದವರೂ ಇದ್ದಾರೆ. 2015ರಲ್ಲಿ ಶೃಂಗೇರಿ ತಾಲೂಕಿನ ಮುಂಡಗಾರು ಶ್ರೀ ಮಹಾಕಾಳಿ ಮಾರಿಯಮ್ಮ ದೇವಸ್ಥಾನದ ಪುನಃಪ್ರತಿಷ್ಠಾ ಮಹೋತ್ಸವ, 180 ಕಂಬ ಅಳವಡಿಸುವ ಮೂಲಕ ಗ್ರಾಮದ ನಿವಾಸಿಗಳಿಗೆ ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಸಹಕಾರದಿಂದ ಅಳವಡಿಸಲಾದ ವಿದ್ಯುತ್ ಸಂಪರ್ಕ ಉದ್ಘಾಟನೆ, ನಿರ್ಮಾಣಗೊಂಡ ಮನೆಗಳ ಹಸ್ತಾಂತರ,
ಶಿಕ್ಷಣ-ಆರೋಗ್ಯ ನೆರವಿನ ಸಾಂಕೇತಿಕ ವಿತರಣೆಯನ್ನು ಶ್ರೀಪಾದರು ನಡೆಸಿಕೊಟ್ಟದ್ದಕ್ಕೆ ಚಿಕ್ಕಮಗಳೂರು, ಶೃಂಗೇರಿ ಭಾಗದ ಪ್ರಮುಖರು, ಹಿರಿಯ ಅಧಿಕಾರಿಗಳು, ಪರಿಸರ ತಜ್ಞರು, ರಾಜಕೀಯ ನೇತಾರರು ಸಾಕ್ಷಿಯಾದರು. ಆಗ ಮುಂಡಗಾರು ಗಿರಿಜನ ಗ್ರಾಮದಲ್ಲಿ ಸುಮಾರು 45 ಲ. ರೂ. (ಜನರ ಶ್ರಮ ಹೊರತು) ವೆಚ್ಚದಲ್ಲಿ ಅಳವಡಿಸಿದ ವಿವಿಧ ಯೋಜನೆಗಳನ್ನು ಉದ್ಘಾಟನೆಗೊಂಡರೆ ಏಳೆಂಟು ವರ್ಷಗಳಲ್ಲಿ ಸುಮಾರು 2.5 ಕೋ.ರೂ. (ಜನರ ಶ್ರಮ ಹೊರತು) ವೆಚ್ಚದಲ್ಲಿ ವಿವಿಧ ಯೋಜನೆಗಳು ಜಾರಿಗೊಂಡಿವೆ.