ತುಳು ಸಿನೆಮಾರಂಗದ ಎವರ್ ಗ್ರೀನ್ ‘ಕುಸೇಲ್ದರಸೆ’ ನವೀನ್ ಡಿ. ಪಡೀಲ್ ಸದ್ಯ ತುಳು ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಒಂದರ ಬೆನ್ನಿಗೆ ಇನ್ನೊಂದರಂತೆ ಅವರ ಅಭಿನಯದ ತುಳು ಸಿನೆಮಾಗಳು ತೆರೆ ಕಾಣುವ ತವಕದಲ್ಲಿವೆ. ಇದರ ಜತೆಗೆ ಸ್ಯಾಂಡಲ್ ವುಡ್‌ನಿಂದಲೂ ನವೀನ್ ಡಿ. ಪಡೀಲ್ ಗೆ ಫರ್‌ಗಳ ಸುರಿಮಳೆಯೇ ಬರುತ್ತಿದೆ.
ಈಗಾಗಲೇ ಹೆಚ್ಚಾ ಕಡಿಮೆ 10ರಿಂದ 12ರಷ್ಟು ಕನ್ನಡ ಸಿನೆಮಾದಲ್ಲಿ ಕಾಣಿಸಿಕೊಂಡಿರುವ ಪಡೀಲ್ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿಯೇ ಬ್ಯುಸಿ ಇದ್ದಾರೆ. ಇದರ ಮಧ್ಯೆಯೇ ಕೋಸ್ಟಲ್‌ವುಡ್‌ನ ಹಲವು ಸಿನೆಮಾದಲ್ಲಿ ಪಡೀಲ್ ಬಣ್ಣ ಹಚ್ಚುತ್ತಿದ್ದಾರೆ. ಜತೆಗೆ ಕಾಮಿಡಿ ಶೋ ಕಾರ್ಯಕ್ರಮದಲ್ಲಿ ಕೂಡ ಫೇಮಸ್ ಆಗಿದ್ದಾರೆ. ಅಂದಹಾಗೇ ಪಡೀಲ್ ಅಭಿನಯದ ‘ದಗಲ್ಬಾಜಿಲು’, ಮೈ ನೇಮ್ ಈಸ್ ಅಣ್ಣಪ್ಪ ಸಹಿತ ಹಲವು ಸಿನೆಮಾಗಳು ತೆರೆಕಾಣುವ ತವಕದಲ್ಲಿವೆ.
ಇನ್ನು ಕನ್ನಡ ಸಿನೆಮಾ ಬಗ್ಗೆ ಮಾತನಾಡುವುದಾದರೆ, ‘ಜಾಗ್ವಾರ್’ ಖ್ಯಾತಿಯ ನಟ ನಿಖೀಲ್ ಗೌಡ ಅಭಿನಯದ ‘ಸೀತಾರಾಮ ಕಲ್ಯಾಣ’ ಸಿನೆಮಾದಲ್ಲೂ ನವೀನ್ ಡಿ. ಪಡೀಲ್ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಈಗಾಗಲೇ ಅದ್ದೂರಿ ವೆಚ್ಚದಲ್ಲಿ ಸಿದ್ಧಗೊಳ್ಳುತ್ತಿರುವ ಈ ಸಿನೆಮಾದಲ್ಲಿ ಪಡೀಲ್ ಅವರು ನಿಖೀಲ್ ಗೌಡ ಅವರ ಜತೆಗೆ ಈಗಾಗಲೇ ಶೂಟಿಂಗ್ ಕೂಡ ನಡೆಸಿದ್ದಾರೆ. ಹರ್ಷ ಅವರ ನಿರ್ದೇಶನದಲ್ಲಿ ಸಿದ್ಧಗೊಳ್ಳುತ್ತಿರುವ ಈ ಸಿನೆಮಾ ಸ್ಯಾಂಡಲ್‌ವುಡ್‌ನಲ್ಲಿ ಬಹಳಷ್ಟು ನಿರೀಕ್ಷೆ ಕೂಡ ಮೂಡಿಸಿದೆ.
ವಿನಯ್ ರಾಜ್‌ಕುಮಾರ್ ಮುಖ್ಯ ಭೂಮಿಕೆಯ ‘ಅನಂತು ವರ್ಸಸ್ ನುಸ್ರತ್’ ಸಿನೆಮಾದಲ್ಲಿ ನವೀನ್ ಡಿ. ಪಡೀಲ್ ಮುಖ್ಯಭೂಮಿಕೆಯಲ್ಲಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಪ್ರಸಿದ್ಧವಾಗಿರುವ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಖಳನಾಯಕ ರವಿಶಂಕರ್ ಈ ಸಿನೆಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಕೀಲರ ಪಾತ್ರದಲ್ಲಿ ನವೀನ್ ಡಿ. ಪಡೀಲ್ ಮಿಂಚಿದ್ದಾರೆ.
ಇನ್ನು ಹೊಸಬರನ್ನೇ ಇಟ್ಟುಕೊಂಡು ರೆಡಿ ಮಾಡಿರುವ ರಿಷಬ್ ಶೆಟ್ಟಿ ಮುಖ್ಯ ಭೂಮಿಕೆಯ ‘ಬೆಲ್ ಬಾಟಮ್’ ಸಿನೆಮಾದಲ್ಲೂ ನವೀನ್ ಡಿ. ಪಡೀಲ್ ಮಿಂಚಿದ್ದಾರೆ. ನಿರ್ದೇಶಕ ಜಯತೀರ್ಥ ಆ್ಯಕ್ಷನ್ ಕಟ್ ಹೇಳಿದ ಈ ಸಿನೆಮಾದಲ್ಲಿ ಪಡೀಲ್ ಅಟ್ರ್ಯಾಕ್ಟಿವ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ತುಳುನಾಡಿನ ಹಲವು ಕಲಾವಿದರು ಕೂಡ ಇದ್ದಾರೆ ಎಂಬುದು ವಿಶೇಷ.
ಪಡೀಲ್ ಸದ್ಯ ಇಷ್ಟು ಸಿನೆಮಾದಲ್ಲಿ ಬ್ಯುಸಿಯಾಗಿದ್ದರೆ, ಚಿಕ್ಕಣ್ಣ, ಸಾಧುಕೋಕಿಲ ಕಾಂಬಿನೇಷನ್‌ನ ಇನ್ನೊಂದು ಸಿನೆಮಾದಲ್ಲಿ ಅಭಿನಯಿಸುವ ಬಗ್ಗೆ ಮಾತುಕತೆ ಕೂಡ ನಡೆಸುತ್ತಿದ್ದಾರೆ. ತುಳು ಚಿತ್ರರಂಗ ಕಂಡ ‘ಕುಸೇಲ್ದರಸೆ’ ನವೀನ್ ಡಿ. ಪಡೀಲ್, 2016ನೇ ಸಾಲಿನ ರಾಜ್ಯ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ತುಳು ರಂಗಭೂಮಿಯ ಮೂಲಕವಾಗಿ ಕರಾವಳಿಯಲ್ಲಿ ಮನೆ ಮಾತಾದ ಪಡೀಲ್, ಪ್ರಸಕ್ತ ತುಳು/ ಕನ್ನಡ ಚಲನಚಿತ್ರ ಹಾಗೂ ಕಿರುತೆರೆಯ ಕಾರ್ಯಕ್ರಮದ ಮೂಲಕ ಪ್ರಸಿದ್ದಿ ಪಡೆದಿದ್ದಾರೆ.
ನಗು ಉಕ್ಕಿಸುವ ಕಲಾವಿದನಾಗಿ ಸಾವಿರಾರು ಅಭಿಮಾನಿಗಳ ಕಣ್ಮನಗಳಲ್ಲಿ ಕಂಗೊಳಿಸಿದ ಪಡೀಲ್ ಕರಾವಳಿಯ ಅತ್ಯದ್ಭುತ ಪೂಷಕ ನಟ ಕೂಡ ಹೌದು. ತುಳು ರಂಗಭೂಮಿಯಲ್ಲಿ ಸಾಧನೆಯ ಮೈಲಿಗಲ್ಲು ಬರೆದ ಹಲವು ತುಳು ನಾಟಕಗಳಲ್ಲಿ ಯಶಸ್ವಿ ಪೋಷಕ ನಟನ ಪಾತ್ರದ ಮೂಲಕ ಪಡೀಲ್ ಸಾಧನೆ ತೋರಿದ್ದಾರೆ.