Advertisement
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದ ಸಲುವಾಗಿಯೇ ಎಂಟು ದಿನಗಳ ಕಾಲ ಮೈಸೂರಿನ ತಮ್ಮ ಮನೆಯಲ್ಲಿ ಠಿಕಾಣಿ ಹೂಡಲಿರುವ ಸಿದ್ದರಾಮಯ್ಯ, ನಾಲ್ಕು ದಿನಗಳ ಕಾಲ ನಂಜನಗೂಡು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕಳಲೆ ಎನ್.ಕೇಶವಮೂರ್ತಿ ಪರ ಮತಯಾಚನೆ ಮಾಡಲಿದ್ದಾರೆ.
Related Articles
Advertisement
ಶ್ರೀನಿವಾಸಪ್ರಸಾದ್ ರಾಜೀನಾಮೆ ನೀಡಿದ ನಂತರ ಉಪ ಚುನಾವಣೆ ಹಿನ್ನೆಲೆ ಈಗಾಗಲೇ ನಂಜನಗೂಡಿಗೆ ಮೂರು ಬಾರಿ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎರಡು ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ ಉತ್ಸಾಹ ತುಂಬುವ ಕೆಲಸ ಮಾಡಿದ್ದರೆ, ತಾಲೂಕಿನ ಹುರ ಗ್ರಾಮದಲ್ಲಿ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಶಂಕುಸ್ಥಾಪನೆ ಹೆಸರಲ್ಲಿ ನಡೆದ ಸಭೆಯಲ್ಲೂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿದ್ದು, ಉಪ ಚುನಾವಣೆಯ ವಿಷಯ ವನ್ನೇ.
ಇದೀಗ ಪ್ರಚಾರದ ಸಲುವಾಗಿಯೇ ಎಂಟು ದಿನಗಳ ಕಾಲ ಮೈಸೂರಿನಲ್ಲಿ ಠಿಕಾಣಿ ಹೂಡುತ್ತಿರುವ ಸಿದ್ದರಾಮಯ್ಯ ತಲಾ ನಾಲ್ಕುದಿನಗಳ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಿ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಲಿದ್ದಾರೆ. ಜತೆಗೆ ಜಿಪಂ ಕ್ಷೇತ್ರ ವ್ಯಾಪ್ತಿಗೆ ಪಕ್ಷದ ವತಿಯಿಂದ ನಿಯೋಜಿಸಿರುವ ಮಂತ್ರಿಗಳು, ಸಂಸದರು, ಶಾಸಕರು ಹಾಗೂ ಪಕ್ಷದ ಮುಖಂಡರೂ ಸಹ ಪ್ರಚಾರ ಕಾರ್ಯಕ್ಕೆ ಶುಕ್ರವಾರ ದಿಂದ ಪೂರ್ಣ ಪ್ರಮಾಣದಲ್ಲಿ ಇಳಿಯಲಿದ್ದಾರೆ.
ಇತ್ತ ಬಿಜೆಪಿ ಕೂಡ ಶತಾಯ-ಗತಾಯ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿಸಲೇಬೇಕು ಎಂಬ ಛಲದೊಂದಿಗೆ ಮುನ್ನಗ್ಗುತ್ತಿದ್ದು, ಪಕ್ಷದ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಕಳೆದ ಒಂದು ವಾರದಿಂದಲೇ ಮೈಸೂರಿನಲ್ಲಿ ಠಿಕಾಣಿ ಹೂಡಿ ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಅವರೊಂದಿಗೆ ಹಳ್ಳಿ ಹಳ್ಳಿ ಸುತ್ತಿ ಮತಯಾಚನೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಸೇರಿದಂತೆ ಪಕ್ಷದ ಕೇಂದ್ರ ಸಚಿವರು, ರಾಜ್ಯದ ಮಾಜಿ ಮಂತ್ರಿಗಳು, ಶಾಸಕರು ಹಾಗೂ ಪಕ್ಷದ ಹಲವು ಮುಖಂಡರು ಕ್ಷೇತ್ರದಲ್ಲಿ ಮತಯಾಚನೆಯಲ್ಲಿ ತೊಡಗಿದ್ದಾರೆ.
ಶುಕ್ರವಾರ ಕ್ಷೇತ್ರದ ಉಸ್ತುವಾರಿ ವಿ.ಸೋಮಣ್ಣ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಎಸ್.ಮಹದೇವಯ್ಯ ಹಲ್ಲೆರೆ, ಮಲ್ಕುಂಡಿ, ಮಲ್ಲಹಳ್ಳಿ, ಕೆಲ್ಲೂಪುರ, ಹೊಸಕಡಜಟ್ಟಿ, ಹಾಡ್ಯ, ಮಡುವಿನಹಳ್ಳಿ, ಚಿಲ್ಕಹಳ್ಳಿ,ಹೆಡಿಯಾಲ, ನಾಗಣಾಪುರ, ಬಳ್ಳೂರು ಹುಂಡಿ, ಹೊಸವೀಡು, ಹಂಚೀಪುರ ಗ್ರಾಮಗಳಲ್ಲಿ, ಮಾಜಿ ಸಚಿವ ಎ.ನಾರಾಯಣ ಸ್ವಾಮಿ, ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ವಿಪ ಮಾಜಿ ಸದಸ್ಯ ಸಿ.ರಮೇಶ್ ಬಂಕಳ್ಳಿ, ಹೆಡಿಯಾಲ, ಚಿಲ್ಕಳ್ಳಿ, ಮಲ್ಲಹಳ್ಳಿ, ಹಾಡ್ಯ, ಹೊಸಕಡಜೆಟ್ಟಿ,ಕಡಜೆಟ್ಟಿ, ಜಾಲಹಳ್ಳಿ ಹಾಗೂ ಹುರ ಗ್ರಾಮಗಳಲ್ಲಿ ಮತಯಾಚನೆ ಮಾಡಿದರೆ, ಮಾಜಿ ಸಚಿವ ಎಸ್.ಸುರೇಶ್‌ಕುಮಾರ್ ನಂಜನಗೂಡು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ ಮಾಡಲಿದ್ದಾರೆ.
* ಗಿರೀಶ್ ಹುಣಸೂರು