ನವದೆಹಲಿ: ಈ ಹಿಂದೆ ವರದಿಯಾಗಿರುವಂತೆ
ಮೇ 1ರಿಂದ ಪೆಟ್ರೋಲ್ ಮತ್ತು ಡಿಸೇಲ್ ದರ ಪ್ರತಿದಿನವೂ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಬೆಲೆ ಪರಿಷ್ಕರಣೆ ಮಾಡಲಿದ್ದು, ಇದರಂತೆ ಗ್ರಾಹಕರು ಹೊಸ ದರದಂತೆ ಖರೀದಿಸಬೇಕಾಗುತ್ತದೆ. ಇದು ದೇಶದ ಪ್ರಮುಖ ಐದು ನಗರಗಳಲ್ಲಿ ಮೊದಲಿಗೆ ಪ್ರಾಯೋಗಿಕವಾಗಿ ಜಾರಿಯಾಗಲಿದೆ ಎಂದು ವರದಿ ತಿಳಿಸಿದೆ.
ರಾಜ್ಯ ಸ್ವಾಮಿತ್ವದ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಗಳು ದೇಶಾದ್ಯಂತ ಸುಮಾರು 58 ಸಾವಿರ ಪೆಟ್ರೋಲ್ ಬಂಕ್ ಗಳನ್ನು ಹೊಂದಿವೆ.
ಈ ಕಂಪನಿಗಳು ಮೇ 1ರಿಂದಲೇ ದೇಶದ ಐದು ನಗರಗಳಲ್ಲಿ ಪ್ರತಿ ದಿನ ತೈಲ ಬೆಲೆ ಪರಿಷ್ಕರಿಸುವ ಕ್ರಮ ಜಾರಿ ಮಾಡಲಿದ್ದು, ಮುಂದಿನ ಹಂತದಲ್ಲಿ ದೇಶಾದ್ಯಂತ ಜಾರಿ ಮಾಡಲು ತೀರ್ಮಾನಿಸಿರುವುದಾಗಿ ವರದಿ ವಿವರಿಸಿದೆ.
ಪ್ರಮುಖ 5 ಮಹಾನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದ ಬಳಿಕ, ದೇಶದ ಉಳಿದ ಭಾಗದಲ್ಲಿ ಜಾರಿಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿವೆ ಎಂದು ಬುಧವಾರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ದಿನವೂ ಪೈಸೆ ಲೆಕ್ಕಾಚಾರದಲ್ಲಿ ಏರುಪೇರು ಆಗಲಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಹಾಗೂ ಕರೆನ್ಸಿ ದರದಲ್ಲಿ ಬದಲಾವಣೆ ಆದಂತೆ ಅದರ ನೇರ ಪರಿಣಾಮ ದೇಶದ ತೈಲ ಮಾರುಕಟ್ಟೆಯ ಮೇಲಾಗಲಿದೆ. ಅಲ್ಲಾಗುವ ನಷ್ಟವನ್ನು ತಪ್ಪಿಸಿಕೊಳ್ಳಲಿಕ್ಕಾಗಿ ತೈಲ ಕಂಪನಿಗಳು ಅದರ ಹೊರೆಯನ್ನು ಗ್ರಾಹಕನ ಮೇಲೆ ಹೊರಿಸಲು ಮುಂದಾಗಿವೆ.
2016, ಸೆಪ್ಟೆಂಬರ್‌ನಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬದಲಾವಣೆ ಆಗುತ್ತಲೇ ಇದ್ದು, 2017, ಮಾರ್ಚ್ 31ರಂದು ಪ್ರತಿ ಲೀಟರ್ ಪೆಟ್ರೋಲ್ ದರ 3.77 ರೂ. ಮತ್ತು ಡೀಸೆಲ್ ದರ 2.91 ರೂ. ಕಡಿಮೆ ಮಾಡಲಾಗಿತ್ತು.
5 ನಗರಗಳು ಯಾವುದು?
ಪಾಂಡಿಚೇರಿ
ಆಂಧ್ರಪ್ರದೇಶದ ವೈಝಾಗ್
ರಾಜಸ್ಥಾನದ ಉದಯ್ ಪುರ್
ಜಾರ್ಖಂಡ್ ನ ಜೇಮ್ಶೆಡ್ ಪುರ್
ಚಂಡೀಗಢ್