Advertisement

ಒಲಿಂಪಿಕ್ಸ್ ಸಾಧನೆ: ಅಂದು ಕಟ್ಟಿಗೆ ಹೊತ್ತ…ಮೀರಾಬಾಯಿ ಚಾನು ಇಂದು ಬೆಳ್ಳಿಪದಕ ವಿಜೇತೆ

06:11 PM Jul 24, 2021 | Team Udayavani |

ನವದೆಹಲಿ: ಮಣಿಪುರದ ಇಂಫಾಲ್ ನ ಹಳ್ಳಿಯಲ್ಲಿ ತನ್ನ ಅಣ್ಣಂದಿರ ಜೊತೆಗೆ ಕಾಡಿಗೆ ಕಟ್ಟಿಗೆ ಸಂಗ್ರಹಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ಚಾನು ತನ್ನ ಅಣ್ಣಂದಿರಿಗೆ ಎತ್ತಲು ಸಾಧ್ಯವಾಗದಷ್ಟು ಭಾರದ ಕಟ್ಟಿಗೆ ಹೊತ್ತು ತರುತ್ತಿದ್ದಳಂತೆ. ಅಬ್ಬಾ…ನಮ್ಮ ತಂಗಿ ಅದೆಷ್ಟು ಬಲಶಾಲಿ ಎಂಬುದು ಅಂದೇ ಅವರಿಗೆ ಮನದಟ್ಟಾಗಿತ್ತು. ಇಂದು ಆ ಖುಷಿಯನ್ನು ಇಮ್ಮಡಿಗೊಳಿಸಿದ ಹೆಮ್ಮೆ ಮೀರಾಬಾಯಿ ಚಾನು ಅವರದ್ದಾಗಿದೆ.

Advertisement

ಇದನ್ನೂ ಓದಿ:ತುಂಗಭದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ: ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ಅದಕ್ಕೆ ಸಾಕ್ಷಿಯಾಗಿದ್ದು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ. ನಿರೀಕ್ಷೆಯಂತೆ ಭಾರತದ ಮೀರಾಬಾಯಿ ಚಾನು ಶನಿವಾರ (ಜುಲೈ24) ಬೆಳ್ಳಿಪದಕ ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ 26ರ ಹರೆಯದ ಮೀರಾಬಾಯಿ ಚಾನು ವೆಯ್ಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 21 ವರ್ಷಗಳ ನಂತರ ಭಾರತ ವೇಯ್ಟ್ ಲಿಫ್ಟಿಂಗ್  ವಿಭಾಗದಲ್ಲಿ ಪದಕ ಜಯಿಸಿದಂತಾಗಿದೆ.

ಕರಣಂ ಮಲ್ಲೇಶ್ವರಿ ಅವರ ಬಳಿಕ ಒಲಿಂಪಿಕ್ ನ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಪದಕ ವಿಜೇತೆ ಎಂಬ ಹೆಮ್ಮೆ ಮೀರಾಬಾಯಿ ಚಾನು ಅವರದ್ದಾಗಿದೆ. ಅಲ್ಲದೇ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಚಾನು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐದು ವರ್ಷಗಳ ಹಿಂದೆಯೇ ರಿಯೋ ಒಲಿಂಪಿಕ್ಸ್ ನಲ್ಲಿಯೇ ಪದಕ ಗೆಲ್ಲುವ ನಿರೀಕ್ಷೆ ಇದ್ದಿತ್ತಾದರೂ ಅದು ಸಾಕಾರಗೊಂಡಿರಲಿಲ್ಲವಾಗಿತ್ತು. ಆದರೆ ಛಲ ಬಿಡದ ಸಾಧನೆ ಇಂದು ಚಾನು ಅವರ ಮುಖದಲ್ಲಿ ಗೆಲುವಿನ ನಗು ಬೀರುವಂತೆ ಮಾಡಿದೆ.

Advertisement

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೀರಾಬಾಯಿ ಚಾನು ವೇಯ್ಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ಕೆಲ ಹೊತ್ತಿನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್, ಅಭಿನವ್ ಬಿಂದ್ರಾ ಸೇರಿದಂತೆ ಸಾವಿರಾರು ಮಂದಿ ಟ್ವೀಟ್ ನಲ್ಲಿ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಹಳ್ಳಿ ಹುಡುಗಿ ಸಾಧನೆ:

ಮಣಿಪುರದ ಪುಟ್ಟ ಗ್ರಾಮವಾದ ನಾಂಗ್ ಪಾಕ್ ಕಾಕ್ಚಿಂಗ್ ನಲ್ಲಿ ಜನಿಸಿದ್ದ ಮೀರಾಬಾಯಿ ಚಾನು ಕಷ್ಟದಲ್ಲಿಯೇ ಬದುಕು ಸಾಗಿಸಿದ್ದಳು. ಆರು ಮಂದಿ ಮಕ್ಕಳಲ್ಲಿ ಚಾನು ಕಿರಿಯವಳಾಗಿದ್ದಳು. ಆದರೆ ಅಣ್ಣಂದಿರ ಜತೆ ಕಾಡಿಗೆ ಹೋಗಿ ಕಟ್ಟಿಗೆಯನ್ನು ತರುತ್ತಿದ್ದ ಸಂದರ್ಭದಲ್ಲಿ ಈಕೆ ಎಲ್ಲರಿಗಿಂತ ಹೆಚ್ಚು ಭಾರವಾದ ಕಟ್ಟಿಗೆಯನ್ನು ಹೊತ್ತು ತರುತ್ತಿದ್ದಳು.

ಕಾಡಿಗೆ ಹೋಗಿ ತನಗೆ ಬೇಕಾದ ಹಣ್ಣುಗಳನ್ನು ಕಿತ್ತು ತಿನ್ನುವುದು, ಅಡುಗೆ ಮಾಡಲು ಬೇಕಾದ ಉರುವಲು ತರುವುದೆಂದರೆ ಚಾನುಗೆ ಖುಷಿಯ ಕೆಲಸವಾಗಿತ್ತಂತೆ. ಅಷ್ಟೇ ಅಲ್ಲ ಬೆಳೆದು ದೊಡ್ಡವಳಾದ ಮೇಲೆ ಕಾಡಿನಲ್ಲಿ ಒಂದು ವೇಳೆ ಯಾರಿಗಾದರೂ ಕಟ್ಟಿಗೆ ಹೊರೆಯನ್ನು ಎತ್ತಲು ಸಾಧ್ಯವಾಗದಿದ್ದಾಗ, ಮೀರಾಬಾಯಿ ಅದನ್ನು ಸಲೀಸಾಗಿ ಎತ್ತುತ್ತಿದ್ದಳಂತೆ…ಆಗ ಉಳಿದವರು ಓಕೆ..ಓಕೆ…ನೀನು ವೇಯ್ಟ್ ಲಿಫ್ಟರ್ ಎಂದು ತಮಾಷೆ ಮಾಡುತ್ತಿರುವುದಾಗಿ ಸಹೋದರ ಬಿಯೊಂಟ್ ನೆನಪನ್ನು ಮೆಲುಕು ಹಾಕಿರುವುದಾಗಿ ಇಂಡಿಯಾ ಟುಡೇ ವರದಿ ತಿಳಿಸಿದೆ.

ಈ ವಿಷಯ ತಿಳಿದ ತಾಯಿ ಲೈಮಾ ಮಗಳನ್ನು ಕ್ರೀಡಾಪಟುವನ್ನಾಗಿಸುವ ಬಗ್ಗೆ ಕನಸು ಕಂಡಿದ್ದರು. ಹೀಗೆ ಮೀರಾ ವಿದ್ಯಾಭ್ಯಾಸ, ಕ್ರೀಡಾಪಟುವಾಗುವ ಕನಸು ಜತೆ, ಜತೆಯಾಗಿ ಸಾಗುತ್ತಿತ್ತು. ಅದಕ್ಕೆ ನೀರೆರೆದು ಪೋಷಿಸಿದವರು ತಾಯಿ. ಕೊನೆಗೂ ಚಾನು ಸುಮಾರು ಐದು ವರ್ಷಗಳ ಕಠಿಣ ಅಭ್ಯಾಸದ ತರಬೇತಿ ಪಡೆದಿದ್ದರು. 2011ರಲ್ಲಿ ಅಂತಾರಾಷ್ಟ್ರೀಯ ಯೂತ್ ಚಾಂಪಿಯನ್ ಶಿಪ್ ಮತ್ತು ದಕ್ಷಿಣ ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಚಾನು ಚಿನ್ನದ ಪದಕ ಜಯಿಸಿದ್ದರು. 2014ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ವೇಯ್ಟ್ ಲಿಫ್ಟಿಂಗ್ ನಲ್ಲಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ತದನಂತರ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಕೈತಪ್ಪಿದ್ದರೂ ಕೂಡಾ ಇದೀಗ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಾನು ಪದಕ ಗೆಲ್ಲುವ ಮೂಲಕ ಭಾರತದ ಪದಕ ಬೇಟೆಗೆ ಚಾಲನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next