Advertisement

ಜ್ಞಾನದಿಂದ ಶಕ್ತಿ, ನಡತೆಯಿಂದ ಗೌರವ ಪ್ರಾಪ್ತಿ

05:23 PM Dec 06, 2021 | Team Udayavani |

ಕಲಘಟಗಿ: ಜೀವನದಲ್ಲಿ ಯಶಸ್ಸಿಗಿಂತಲೂ ಸಂತೃಪ್ತಿ ಮುಖ್ಯ. ಉನ್ನತಿಯಲ್ಲಿ ಶ್ರಮದ ಪಾಲು ದೊಡ್ಡದು. ಶ್ರಮ- ಶ್ರದ್ಧೆಯಿದ್ದರೆ ಅದೃಷ್ಟ ತಾನಾಗಿಯೇ ಬಂದು ಸೇರುತ್ತದೆ. ಜ್ಞಾನದಿಂದ ಶಕ್ತಿ, ನಡತೆಯಿಂದ ಗೌರವ ದೊರಕುವುದೆಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ| ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

Advertisement

ನಗರದ ಶ್ರೀ ಹನ್ನೆರಡುಮಠದಲ್ಲಿ ಜರುಗಿದ ಲಿಂ| ಮಡಿವಾಳ ಶ್ರೀಗಳವರ 31ನೇ ಪುಣ್ಯಸ್ಮರಣೋತ್ಸವ ಹಾಗೂ ರೇವಣಸಿದ್ಧ ಶ್ರೀಗಳವರ ಪಟ್ಟಾ ಧಿಕಾರದ ಸುವರ್ಣ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಲಿಂ| ಮಡಿವಾಳ ಶಿವಾಚಾರ್ಯ ಸ್ವಾಮಿಗಳ ಸಹನೆ, ತಪಸ್ಸು, ಪರಿಶುದ್ಧ ಮನಸ್ಸು ಭಕ್ತ ಸಂಕುಲದ ಮೇಲೆ ಪ್ರಭಾವ ಬೀರಿದ್ದನ್ನು ಕಾಣುತ್ತೇವೆ. ಅವರು ನುಡಿದು ನಡೆದು ತೋರಿದ ದಾರಿ ಭಕ್ತ ಸಮುದಾಯಕ್ಕೆ ದಾರಿದೀಪವಾಗಿದೆ.

ಇಂದಿನ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಇಂದು ಪಟ್ಟಾಧಿಕಾರ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಸರಳ ಸಾತ್ವಿಕತೆಗೆ ಹೆಸರಾದ ಶ್ರೀಗಳು ಲಿಂ. ಮಡಿವಾಳ ಶಿವಾಚಾರ್ಯರ ಸತ್ಯ ಸಂಕಲ್ಪದಂತೆ ಮುನ್ನಡೆದು ಮಲೆನಾಡ ಪ್ರಾಂತ್ಯದಲ್ಲಿ ವೀರಶೈವ ಸಂಸ್ಕೃತಿ ಮತ್ತು ಗುರು ಪರಂಪರೆಯ ಆದರ್ಶಗಳನ್ನು ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸೂಡಿ ಜುಕ್ತಿ ಹಿರೇಮಠದ ಡಾ| ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ಹಣ-ಹೆಸರು ಹೇಗಾದರೂ ಗಳಿಸಬಹುದು. ಪ್ರಾಮಾಣಿಕತೆ, ದಕ್ಷತೆ, ಶ್ರದ್ಧೆ ಮತ್ತು ಕ್ರಿಯಾಶೀಲತೆ ಸಂಪಾದಿಸುವುದು ಅಷ್ಟು ಸುಲಭವಲ್ಲ ಎಂದರು.

ರೇವಣಸಿದ್ಧ ಶ್ರೀಗಳವರಿಗೆ ಜಗದ್ಗುರುಗಳು ರೇಶ್ಮೆ ಮಡಿ ಹೊದಿಸಿ ಸ್ಮರಣಿಕೆ ನೀಡಿ ಫಲ ಪುಷ್ಪವಿತ್ತು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಜಂಗಮ ಯೋಗಿ ರೇವಣಸಿದ್ಧ ನಾಮಾಂಕಿತವುಳ್ಳ ಸ್ಮರಣ ಸಂಪುಟವನ್ನು ಶಾಸಕ ಜಗದೀಶ ಶೆಟ್ಟರ ಬಿಡುಗಡೆಗೊಳಿಸಿದರು. ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣನವರು ಪ್ರಾಸ್ತಾವಿಕ ಮಾತನಾಡಿದರು.

Advertisement

ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಶಿರಕೋಳ ಗುರುಸಿದ್ಧೇಶ್ವರ ಶ್ರೀಗಳು, ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀಗಳು, ಬ್ಯಾಹಟ್ಟಿ ಮರುಳಸಿದ್ಧ ಶ್ರೀಗಳು, ಮಣಕಟ್ಟಿ ವಿಶ್ವಾರಾಧ್ಯ ಶ್ರೀಗಳು, ಹುಬ್ಬಳ್ಳಿ ರಾಜಶೇಖರ ಶ್ರೀಗಳು, ಹಣ್ಣಿಕೇರಿ ರೇವಣಸಿದ್ಧ ಶ್ರೀಗಳು, ಬೆಲವಂತರ ರೇವಣಸಿದ್ಧ ಶ್ರೀಗಳು, ಹನ್ನೆರಡುಮಠದ ಉತ್ತರಾಧಿಕಾರಿ ನಾಗರಾಜ ದೇವರು, ಅಂತೂರ-ಬೆಂತೂರ ಕುಮಾರದೇವರು ಬೂದಿಸ್ವಾಮಿ ಹಿರೇಮಠ, ನವನಗರ ಕಾಶೀಮಠದ ಡಾ|ಎಸ್‌.ಎಫ್‌.ಹಿರೇಮಠ ಸ್ವಾಮಿಗಳು ಪಾಲ್ಗೊಂಡು ನುಡಿ ಸೇವೆ ಸಲ್ಲಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ ತೆಂಗಿನಕಾಯಿ, ಜಿ.ಎಂ. ಚಿಕ್ಕಮಠ, ಎಸ್‌.ಎಸ್‌.ಪಾಟೀಲ ಅದರಗುಂಚಿ, ಪ್ರಕಾಶ ಬೆಂಡಿಗೇರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಜಂಗಮ ಯೋಗಿ ರೇವಣಸಿದ್ಧ ಸ್ಮರಣ ಸಂಪುಟದ ಸಂಪಾದಕ ಸವಣೂರಿನ ಡಾ|ಗುರುಪಾದಯ್ಯ ಸಾಲಿಮಠ ಅವರಿಗೆ ರಂಭಾಪುರಿ ಜಗದ್ಗುರುಗಳು ಗೌರವ ಗುರುರಕ್ಷೆಯಿತ್ತು ಶುಭ ಹಾರೈಸಿದರು. ಮುಕ್ಕಲ್ಲ ಗ್ರಾಮದ ಭಕ್ತರು ನೂತನ ಪೀಠ ಹಸ್ತಾಂತರಿಸಿದರು.ರಂಭಾಪುರಿ ಜಗದ್ಗುರುಗಳು ಪೀಠಾರೋಹಣಗೈದು ಭಕ್ತರನ್ನು ಹರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next