ರಾಯಚೂರು: ಬಡತನ ಶಿಕ್ಷಣಕ್ಕೆ ಅಡ್ಡಿಯಾಗಬಾರದು, ಬಡತನ ಮೆಟ್ಟಿ ನಿಂತು ಶಿಕ್ಷಣ ಕಡೆ ವಾಲಿದರೆ ಶಿಕ್ಷಣ ವ್ಯಕ್ತಿಯ ಸಮಗ್ರ ಅಭಿವೃದ್ಧಿ ಮಾಡುತ್ತದೆ ಎಂದು ಜ್ಞಾನದೀಪ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ| ಎ.ಆದೋನಿ ತಿಳಿಸಿದರು.
ನಗರದ ಗಾಜಗಾರ್‌ಪೇಟೆ ಪ್ರೌಢಶಾಲೆ ಯಲ್ಲಿ ಜ್ಞಾನದೀಪ ಎಜ್ಯುಕೇಶನ್ ಟ್ರಸ್ಟ್ ಹಾಗೂ ಜನಸೇವಾ ಟ್ರಸ್ಟ್ ರಾಯಚೂರು ಸಹಯೋಗದಲ್ಲಿ ನಡೆದ ಒಂದು ತಿಂಗಳು ಉಚಿತ ಬೇಸಿಗೆ ಶೈಕ್ಷಣಿಕ ತರಬೇತಿ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂಥ ಶೈಕ್ಷಣಿಕ ತರಬೇತಿ ಕಾರ್ಯಗಳನ್ನು ಬಳಸಿಕೊಳ್ಳಬೇಕು. ಚನ್ನಾಗಿ ಓದಿದರೆ ಮಾತ್ರ ಬದುಕು ಸುಧಾರಣೆಯಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿ ಡಾ| ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ. ವಿದ್ಯಾರ್ಥಿಗಳು ತಾವು ಇನ್ನೂ ಹೆಚ್ಚು ಹೆಚ್ಚು ಓದು-ಬರಹ ಕಡೆ ಗಮನ ಹರಿಸಬೇಕು ಎಂದರು.
ನಿವೃತ್ತ ಅಧಿಕಾರಿ ಆರ್.ಸುದರ್ಶನ್ ಮಾತನಾಡಿ, ಈ ಎರಡು ಟ್ರಸ್ಟ್ ಗಳು ಮಾಡುತ್ತಿರುವ ಈ ಸೇವೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ತರಬೇತಿ ಶಿಕ್ಷಕ ನಾರಾಯಣಪ್ಪ, ಸಿ.ಎಚ್. ಶ್ರೀನಿವಾಸ, ಪಿ.ಚಂದ್ರಶೇಖರ್ ಅವರನ್ನು ಅಭಿನಂದಿಸಲಾಯಿತು. ಗಾಜಗಾರಪೇಟೆ ಪ್ರೌಢಶಾಲೆ ಮುಖ್ಯಶಿಕ್ಷಕ ಆರ್.ಬಾಬು, ಜನಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಚಂದ್ರಶೇಖರ್, ಸಲಹೆಗಾರ ಎ.ರಾಮುಲು, ಜೆ.ರಾಮಪ್ಪ, ಉಪನ್ಯಾಸಕ ಡಾ| ಜೆ.ಎಲ್. ಈರಣ್ಣ, ಶಿಕ್ಷಕರಾದ ಮಲ್ಲಿಕಾರ್ಜುನ್, ಟಿ.ಮಲ್ಲಿಕಾರ್ಜುನ ಇತರರಿದ್ದರು. ವಿದ್ಯಾರ್ಥಿನಿ ಬಸ್ಸಮ್ಮ ಪ್ರಾರ್ಥಿಸಿದರು. ಕಾರ್ಯದರ್ಶಿ ಜೆ.ಎಲ್.ಗೋಪಿ ಸ್ವಾಗತಿಸಿದರು. ಶಿಕ್ಷಕ ಪಿ.ಚಂದ್ರಶೇಖರ್ ನಿರೂಪಿಸಿದರು.