Advertisement

ಕಡು ಕಷ್ಟದ ಬಾಣಲೆಯಲ್ಲಿ ಬೆಂದ ಬಾಲಕ ಇಂದು ವಿಶ್ವಶ್ರೇಷ್ಠ ಫೊಟೋಗ್ರಾಫರ್!

09:26 AM Jan 23, 2020 | Hari Prasad |

ಜೀವನದಲ್ಲಿ ಅಂದುಕೊಂಡದ್ದನು‌ ಸುಲಭವಾಗಿ ಕೈಗೆಟುಕುವ ಪ್ರಯತ್ನದಲ್ಲಿ ಪಡೆದುಕೊಳ್ಳುವುದು ಕಷ್ಟ. ಸಾಧಿಸಲು ಹೊರಟ ದಾರಿಯಲ್ಲಿ ಕಾಲಿಗೆ ಸಿಗುವ ಮುಳ್ಳುಗಳು, ಕುಗ್ಗಿಸಿ‌ ತಡೆ ಆಗುವ ಬಳ್ಳಿಗಳು, ಹಾರೈಸುವ ಹಿತೈಷಿಗಳು, ದೂಷಿಸುವ ದ್ರೋಹಿಗಳು, ಆಸರೆಯಾಗುವ ಅಪರಿಚಿತರು ಹೀಗೆ ಹೀಗೆ ಬಣ್ಣಬಣ್ಣದ ವಿಭಿನ್ನ ವ್ಯಕ್ತಿತ್ವಗಳೊಂದಿನ ಸಾಗುವ ದಾರಿಯೇ ಬದುಕು.

Advertisement

ಕಷ್ಟಗಳ ಕೂಪದ ಹಿನ್ನೆಲೆಯಲ್ಲಿ ‌ಹುಟ್ಟಿದ ಪಶ್ಚಿಮ ಬಂಗಾಳದ ವಿಕ್ಕಿ ರಾಯ್. ಬಾಲ್ಯದ ಸ್ವತಂತ್ರ, ‌ಆಡಿಕೊಂಡು ಬೆಳೆಯುವ ಹಂತ ಎಲ್ಲದರಿಂದ ವಂಚಿತರಾಗಿಸಿ, ವಿಕ್ಕಿಯನ್ನು ಸಾಕಿ ಸಲಹುವ ಜವಾಬ್ದಾರಿಯಿಂದ ದೂರವಾಗಿ ಅಜ್ಜ – ಅಜ್ಜಿಯ ಮನೆಗೆ ಕಳುಹಿಸಿ ಕೊಡುತ್ತಾರೆ.

ಎಲ್ಲರ ಹಾಗೆ ‌ಅಜ್ಜಿಯ ಮನೆ ಎಂದರೆ ನಲಿದು, ಖುಷಿಯ‌ ಕ್ಷಣಗಳಲ್ಲಿ ಕುಣಿದು, ಅಜ್ಜಿಯ ಕತೆಗಳಿಗೆ ಕಿವಿಯಾಗುವ ಬಯಕೆಯನ್ನು ಬಯಸುತ್ತಾರೆ. ಆದರೆ ವಿಕ್ಕಿಯ ಜೀವನದಲ್ಲಿ ‌ಅಜ್ಜಿಯ ಮನೆ ಎಂದಾಗ ಎದುರಿಗೆ ಬರುವುದು ಪ್ರತಿನಿತ್ಯ ಕೊಟ್ಟ ಆಜ್ಞೆಗಳಿಗೆ ತಲೆಬಾಗಿ ಕೆಲಸ ಮಾಡುವ ದಿನ, ತಪ್ಪಿದರೆ ‌ಬೆನ್ನುಬಾಗಿಸಿಕೊಂಡು ಪೆಟ್ಟು ತಿನ್ನುವ ಕ್ಷಣ.

ಅಜ್ಜಿ ಮನೆಯ ಈ ಹಿಂಸೆಯನ್ನು ಸಹಿಸಿಕೊಂಡು ಇದ್ದ ವಿಕ್ಕಿ ಅದೊಂದು ದಿನ  ಮನೆಯಲ್ಲಿ ತನ್ನ ಮಾಮನ ಕಿಸೆಯಿಂದ ಹಣವನ್ನು ಕದ್ದು ರಾತ್ರೋ ರಾತ್ರಿ ದಿಲ್ಲಿಗೆ ಹೋಗುವ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾನೆ. ವಿಕ್ಕಿ ಅಜ್ಜಿಯ ಮನೆಯ ಬಂಧನದಿಂದ ಓಡಿ ಹೋದಾಗ ಆಗ ಆತನಿಗೆ ಬರೀ 11 ವರ್ಷ ಪ್ರಾಯ.

ಹೊಟ್ಟೆ ಬಟ್ಟೆಗಾಗಿ ಗುಜರಿ ಆಯುವ ಕಾಯಕ
ವಿಕ್ಕಿ ರೈಲ್ವೆ ನಿಲ್ದಾಣದಲ್ಲಿ ಇಳಿದಾಗ ಅಪರಿಚಿತ ಜನ ಸಾಗರವನ್ನು ನೋಡಿ ಹೆದರಿಕೆಯಿಂದ ಆಳುತ್ತಾ ಫ್ಲ್ಯಾಟ್ ಫಾರ್ಮ್ ನಲ್ಲಿ ಕೂರುತ್ತಾನೆ. ಅದೇ ಸಮಯದಲ್ಲಿ ಅಲ್ಲೇ ಗುಜರಿ ಆಯ್ದು ಜೀವನ ಸಾಗಿಸುತ್ತದ್ದ ಕೆಲ ಹುಡುಗರು ವಿಕ್ಕಿಯನ್ನು ನೋಡಿ, ಆತನನ್ನು ತಮ್ಮ ಗುಂಪಿನಲ್ಲಿ ಸೇರಿಸಿಕೊಳ್ಳುತ್ತಾರೆ.

Advertisement

ವಿಕ್ಕಿ ಎಲ್ಲಾ ಹುಡುಗರ ಹಾಗೆ ರೈಲ್ವೆ ಪಟ್ಟಿಯಲ್ಲಿ ಖಾಲಿಯಾಗಿ ಬಿದ್ದಿರುವ ಬಾಟಲಿಗಳನ್ನು ಆಯ್ದು ಅದರಲ್ಲಿ ನೀರು ತುಂಬಿಸಿ ಪ್ರಯಾಣಿಕರ ಬಳಿ ಮಾರಲು ಹೊರಡುತ್ತಾನೆ. ದಿನವಿಡೀ ದುಡಿದು ದಣಿದ ದೇಹಕ್ಕೆ ರೈಲ್ವೇ ಫ್ಲ್ಯಾಟ್ ಫಾರ್ಮೇ ಮನೆಯಾಗುತ್ತದೆ. ಆದರೆ ಎಷ್ಟೋ ಸಲ ಪೊಲೀಸರ ಲಾಟಿಯ ರುಚಿಯನ್ನೂ ನೋಡಿ ವಿಕ್ಕಿಯ ಕಿರಿ ಜೀವ ಬೆಳೆಯುತ್ತಾ ಹೋಗುತ್ತದೆ. ಬದುಕು ನೀಡುವ ಹೊಡೆತದ ಎದುರು ಇದೆಲ್ಲಾ ನಗಣ್ಯವೇ ಅಲ್ಲವೇ?

ವಿಕ್ಕಿ ಎಂಬ ನತದೃಷ್ಟ ಬಾಲಕನ ಜೀವನ ಹೀಗೆ ನಡೆಯುತ್ತಿರುವ ಸಂದರ್ಭದಲ್ಲೇ ಅದೊಂದು ದಿನ ಒಂದು ಎನ್.ಜಿ.ಒ. ಕಣ್ಣಿಗೆ ಈತ ಬೀಳುತ್ತಾನೆ, ಅವರು ವಿಕ್ಕಿಯನ್ನು ಅನಾಥಾಲಯಕ್ಕೆ ಸೇರಿಸುತ್ತಾರೆ. ಅಲ್ಲಿ ಹೊಟ್ಟೆಗೆ, ಬಟ್ಟೆಗೆ ಈ ಹುಡುಗನಿಗೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಆದರೆ ಹೊರಗೆ ಹೋಗದೆ ಒಂದೇ ಕಟ್ಟಡದಲ್ಲಿ ಇರಬೇಕಾದ ಅನಿವಾರ್ಯತೆಯಲ್ಲಿ ವಿಕ್ಕಿ ಬಂಧಿಯಾದ ಕೈದಿಯಂತೆ ದಿನ ಕಳೆಯುತ್ತಾನೆ.

ಒಂದು ದಿನ ಸರಿಯಾದ ಸಮಯ ನೋಡಿ ವಿಕ್ಕಿ ಆ ಮನೆಯಿಂದ ಹೊರಗೆ ಓಡುತ್ತಾನೆ. ಹಾಗೆ ಓಡುತ್ತಾ ಬಂದದ್ದು ಮತ್ತೆ ಅದೇ ಖಾಲಿ ಬಾಟಲಿ ಆಯುವ ಜಾಗಕ್ಕೆ. ಅಲ್ಲಿಂದ ಬಳಿಕ ವಿಕ್ಕಿ ರೆಸ್ಟೋರೆಂಟ್ ವೊಂದರಲ್ಲಿ ಪಾತ್ರೆಗಳನ್ನು ತೊಳೆಯುವ ಕೆಲಸಕ್ಕೆ ಸೇರುತ್ತಾನೆ.

ಕಷ್ಟದ ನಡುವೆ ಬಾಳು ಬೆಳಗಿಸಿದ ಆ ‘ಅಪರಿಚಿತ’
ವಿಕ್ಕಿ ಬದುಕಿನ ಅತ್ಯಂತ ಕಠಿಣ ದಿನಗಳು ಕಳೆದದ್ದು ರೆಸ್ಟೋರೆಂಟ್ ನಲ್ಲಿ. ಮೈ ಕೊರೆಯುವ ಚಳಿಯಲ್ಲಿ ಬೆಳಗ್ಗೆ 5 ಗಂಟೆಗೆ ಏಳುವ ವಿಕ್ಕಿ ಎಡಬಿಡದೆ ರಾತ್ರಿ 12 ಗಂಟೆಯವರೆಗೆ ಬರೋಬ್ಬರಿ 18- 19 ಗಂಟೆಗಳ ಕೆಲಸವನ್ನು ಮಾಡುತ್ತಾನೆ. ಸುಸ್ತು, ದಣಿವು, ನೋವು, ಗಾಯ ಯಾವುದನ್ನೂ ಅಲಿಸಲು ಆತನ ಬಳಿ ಯಾರೂ ಇರಲಿಲ್ಲ.

ಹೀಗೆ ಅದೊಂದು ದಿನ ರೆಸ್ಟೋರೆಂಟ್ ನಲ್ಲಿ ಸಜ್ಜನ ವ್ಯಕ್ತಿಯೊಬ್ಬರು ವಿಕ್ಕಿಯನ್ನು ನೋಡಿ ‘ವಿದ್ಯೆ ಕಲಿಯುವ ವಯಸ್ಸಿನಲ್ಲಿ ನೀನು ಇಲ್ಲೇನು ಮಾಡುತ್ತಿದ್ದೀಯಾ…’ ಎಂದು ಅನಾಥರನ್ನು ಪಾಲಿಸುವ ‘ಸಲಾಂ ಬಾಂಬೆ ಟ್ರಸ್ಟ್’ಗೆ ಸೇರಿಸುತ್ತಾರೆ. ಅಲ್ಲಿ ವಿಕ್ಕಿ ನೇರವಾಗಿ ಆರನೇ ತರಗತಿಗೆ ಸೇರಿ, ಶಾಲೆಯ ಮೆಟ್ಟಲನ್ನೇರಿ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿ, ಬೇರೆ ಏನಾದರೂ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾನೆ.

ಫೋಟೋಗ್ರಾಫಿಯ ಹವ್ಯಾಸ; ಬೆಳೆಸಿಕೊಂಡು ಬಂದ ಅಭ್ಯಾಸ
ವಿಕ್ಕಿ‌ ತನ್ನ ಶಿಕ್ಷಕರೊಬ್ಬರ ಬಳಿ ಫೋಟೋಗ್ರಾಫಿಯಲ್ಲಿ ತನಗಿರುವ ಆಸಕ್ತಿಯನ್ನು ಹಂಚಿಕೊಳ್ಳುತ್ತಾನೆ. ಅದೇ ಸಮಯಕ್ಕೆ ಟ್ರಸ್ಟ್ ನಲ್ಲಿ ಒಂದು ಛಾಯಾಚಿತ್ರ ಕಾರ್ಯಾಗಾರ ನಡೆಯುತ್ತದೆ. ಅದಕ್ಕಾಗಿ ಬ್ರಿಟಿಷ್ ನ ಜನಪ್ರಿಯ ಛಾಯಾಗ್ರಾಹಕ  ಬಿಕ್ಸಿ ಬೆಂಜಮಿನ್ ಆಗಮಿಸಿದರು. ಅವರ ಪರಿಚಯವನ್ನು ವಿಕ್ಕಿಯ ಜೊತೆಗೆ ಮಾಡಿ ಒಂದಿಷ್ಟು ಛಾಯಾಚಿತ್ರ ಮಾಹಿತಿಯನ್ನು ವಿಕ್ಕಿ ಪಡೆದುಕೊಳ್ಳುತ್ತಾರೆ.

ನಿಧಾನವಾಗಿಯೇ ಛಾಯಾಗ್ರಾಹಕನಾಗಿ ತನ್ನ ಛಾಪನ್ನು ಮೂಡಿಸಿದ ವಿಕ್ಕಿ ದಿಲ್ಲಿಯ ಪ್ರಸಿದ್ದ ಛಾಯಾಗ್ರಾಹಕ ಎನ್ನಿಮಾನ್ ಅವರಲ್ಲಿ 3 ಸಾವಿರ ಸಂಬಳದೊಂದಿಗೆ ಫೋಟೋಗ್ರಾಫರ್ ಆಗಿ ಕೆಲಸ ಸಿಗುತ್ತದೆ. ಹದಿನೆಂಟು ತುಂಬಿದ ಬಳಿಕ ವಿಕ್ಕಿ ಸಲಾಂ ಟ್ರಸ್ಟ್ ಅನ್ನು ಬಿಟ್ಟು ಬಾಡಿಗೆಯ ಮನೆಯಲ್ಲಿ ಇರುತ್ತಾನೆ. ಟ್ರಸ್ಟ್ ನಿಂದ ಸಾಲ ಪಡೆದು ಒಂದು ಒಳ್ಳೆಯ ಕ್ಯಾಮರಾವನ್ನು ಪಡೆಯುತ್ತಾನೆ.

ಅವಕಾಶಗಳ ಶಿಖರವನ್ನು ಹತ್ತಲು ಶುರು ಮಾಡಿದಾಗ..:
ವಿಕ್ಕಿ ತನ್ನ ದಿ‌ನ ಖರ್ಚಿಗಾಗಿ ದೊಡ್ಡ ಹೊಟೇಲ್ ಗಳಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಾ ಸಾಗುತ್ತಾನೆ. 20 ಹರೆಯದಲ್ಲಿ ವಿಕ್ಕಿ ಇಷ್ಟು ವರ್ಷ ಉಳಿಸಿದ ಅಲ್ಪ ಸ್ವಲ್ಪ ಹಣದಲ್ಲಿ ‘ಸ್ಟ್ರೀಟ್ ಡ್ರೀಮ್ಸ್’ ಎನ್ನುವ   ತನ್ನದೇ ಫೋಟೋಗಳ ಪ್ರದರ್ಶನವನ್ನು ಮಾಡುತ್ತಾನೆ. ಈ ಪ್ರದರ್ಶನ ವಿಕ್ಕಿಗೆ ಅವಕಾಶಗಳು ಹುಡುಕಿಕೊಂಡು ಬರುವಂತೆ ಮಾಡುತ್ತವೆ.

ಇದರ ಬಳಿಕ ವಿಕ್ಕಿ  ಫೋಟೋಗ್ರಫಿಗಾಗಿ ಲಂಡನ್, ವಿಯೆಟ್ನಾಂ, ದಕ್ಷಿಣಾ ಆಫ್ರಿಕಾಗಳಿಗೆ ಪ್ರಯಾಣ ಬೆಳೆಸುತ್ತಾರೆ. 2008 ರಲ್ಲಿ ನ್ಯೂಯಾರ್ಕ್ ನಗರದಲ್ಲಿ ವಲ್ಡ್ ಟ್ರೇಡ್ ಸೆಂಟರ್   ಫೋಟೋಗಳನ್ನು ತೆಗೆಯುತ್ತಾರೆ.

ಭಾರತಕ್ಕೆ ಮರಳಿ ಬಂದಾಗ ವಿಕ್ಕಿಯನ್ನು ‘ಸಲಾಂ ಬಾಲಕ್ ಟ್ರಸ್ಟ್ ‘ಅಂತಾರಾಷ್ಟ್ರೀಯ ಯುವ ಜನತೆ’ ಪ್ರಶಸ್ತಿ ಕೊಟ್ಟು ಗೌರವಿಸುತ್ತದೆ. ಇದರ ಬಳಿಕ ವಿಕ್ಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಾರೆ. 2013 ಟಾಪ್ 8 ಛಾಯಾಗ್ರಾಹಕರಲ್ಲಿ  ಆಯ್ಕೆ ಮಾಡುತ್ತಾರೆ. ನ್ಯಾಷನಲ್ ಜೀಯೋಗ್ರಫಿಯ ಕವರ್ ಶೂಟ್ ಗಾಗಿ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸುತ್ತಾರೆ.

ಇದೆಲ್ಲಾ ಆಗಿ ಎಷ್ಟೋ ವರ್ಷಗಳ ಬಳಿಕ ವಿಕ್ಕಿ ಮತ್ತೆ ತನ್ನ ತಂದೆ ತಾಯಿಯನ್ನು ಭೇಟಿಯಾಗುತ್ತಾರೆ. ಇಂದು ವಿಕ್ಕಿ ತನ್ನ ತಂದೆ ತಾಯಿಯನ್ನು ನೋಡಿಕೊಂಡು… ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು.. ಕಷ್ಟಗಳ ದಿನಗಳನ್ನು ಗೆದ್ದುಕೊಂಡ ಸಾಧಕನಾಗಿ ಬೆಳೆಯುತ್ತಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next