ಲಂಡನ್: ಜ.10ಕ್ಕೆ ಬಿಡುಗಡೆಯಾಗಬೇಕಿದ್ದ ಬ್ರಿಟನ್ ರಾಜಕುಮಾರ ಪ್ರಿನ್ಸ್ ಹ್ಯಾರಿ ಅವರ ಆತ್ಮಚರಿತ್ರೆ “ಸ್ಪೇರ್’ನ ಸ್ಪ್ಯಾನಿಶ್ ಆವೃತ್ತಿ ಪುಸ್ತಕ ಸೋರಿಕೆಯಾಗಿದ್ದು, ಜಗತ್ತಿಗೆ ತಿಳಿಯದ ರಾಜಮನೆತನದ ಕೆಲ ಅಚ್ಚರಿಸಂಗತಿಗಳು, ರಾಜಕುಮಾರರ ಒಡನಾಟ, ಭಾವನೆಗಳು ಈಗ ಜಗತ್ತಿನ ಮುಂದೆ ತೆರೆದುಕೊಂಡಿವೆ. ತಾಯಿ ಡಯಾನಾ ಸಾವಿನಿಂದ ಹಿಡಿದು, ಪ್ರಿನ್ಸ್ ಹ್ಯಾರಿಯ ಗಾಂಜಾ ಸೇವನೆಯ ಚಟ, ಆಫ್ಘನ್ನರನ್ನು ಕೊಂದ ವಿಚಾರ, ರಾಜಮನೆತನದ ವೈಮನಸ್ಸು, ಒಡಕುಗಳನ್ನು ಹ್ಯಾರಿಯ ಆತ್ಮಕಥೆ ಬಿಚ್ಚಿಟ್ಟಿದೆ. ಪುಸ್ತಕದಲ್ಲಿ ಹ್ಯಾರಿ ಹಂಚಿಕೊಂಡ ಕೆಲ ಪ್ರಮುಖವಿಚಾರಗಳು ಇಂತಿವೆ..
* ನನ್ನ ತಾಯಿ ಡಯಾನಾಳ ಸಾವನ್ನು ಸಾಮಾನ್ಯವೆನ್ನುವಂತೆ ನನ್ನ ತಂದೆ ಹೇಳಿದ್ದರು. ಅಂದು ಕನಿಷ್ಠ ನನ್ನನ್ನು ಅಪ್ಪಿಕೊಳ್ಳಲೂ ಇಲ್ಲ. ಅಮ್ಮನ ಅಂತಿಮ ಯಾತ್ರೆಗೆ ಬಂದವರನ್ನು ನನ್ನ ತಂದೆ ಮಾತನಾಡಿಸುತ್ತಿದ್ದ ಪರಿ ನೋಡಿ ನನಗೆ ಆತ ಓರ್ವ ರಾಜಕಾರಣಿಯಷ್ಟೇ ಎಂದೆನಿಸಿದ್ದ.
* ತಾಯಿಯ ಸಾವಿನ ಬಳಿಕ ಮತ್ತೂಬ್ಬಳನ್ನು ಮದುವೆಯಾಗದಂತೆ ನಾನು, ವಿಲಿಯಂ ಬೇಡಿಕೊಂಡರೂ ನಮ್ಮ ಮಾತನ್ನು ನನ್ನ ತಂದೆ ಚಾರ್ಲ್ಸ್ ನಿರ್ಲಕ್ಷಿಸಿ, ಕ್ಯಾಮಿಲಾರನ್ನು ವರಿಸಿದರು.
* ಮೆಘನ್ ವಿಚಾರದ ಹೊಡೆದಾಟದ ಬಳಿಕವೂ ನಾನು ನನ್ನ ಸಹೋದರ ನಮ್ಮ ಬಾಲ್ಯದ ಹೆಸರುಗಳಾದ ವಿಲ್ಲಿ, ಹೆರಾಲ್ಡ್ ಎಂದೇ ಪರಸ್ಪರ ಕರೆದುಕೊಳ್ಳುತ್ತಿದ್ದವು. ವಿಲ್ಲಿ ನನ್ನೆಡೆಗೆ ನೋಡುತ್ತಿದ್ದ ನೋಟದಲ್ಲಿ ಪಶ್ಚಾತ್ತಾಪವಿರುತ್ತಿತ್ತು.
* ನಾನು ಹುಟ್ಟಿದಾಗಲೇ ನಿರ್ಲಕ್ಷ್ಯಕ್ಕೆ ಒಳಗಾದವನು ! ನಾನು ಹುಟ್ಟಿದಾಗ ತನ್ನ ತಂದೆ ಚಾರ್ಲ್ಸ್, ನನ್ನ ಅಣ್ಣನನ್ನು “ಉತ್ತರಾಧಿಕಾರಿ'(ಹೇರ್)ಯೆಂದು, ನನ್ನನ್ನು “ಹೆಚ್ಚುವರಿ'(ಸ್ಪೇರ್) ಆಯ್ಕೆ ಎಂದೂ ನನ್ನ ತಾಯಿ ಡಯಾನಾಳ ಮುಂದೆ ಹೇಳಿದ್ದರು.
* ನನಗೆ 17 ವರ್ಷವಿದ್ದಾಗಲೇ ಗಾಂಜಾ ಸೇವನೆ ಮಾಡಿದ್ದೆ! ನನ್ನ ತಂದೆ ಪುನರ್ವಸತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಆ ಅಭ್ಯಾಸ ತಪ್ಪಿಸಿದ್ದರು.
*ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ವಿರುದ್ಧ ನಡೆಯುತ್ತಿದ್ದ ಯುದ್ಧದಲ್ಲಿ ನಾನು 2 ಬಾರಿ ಭಾಗವಹಿಸಿದ್ದೆ. ಈ ವೇಳೆ 25 ಆಫ್ಘನ್ನರನ್ನು ಕೊಂದಿದ್ದೇನೆ. ಅದು ಚದುರಂಗದ ಆಟದಿಂದ ಕಾಯಿ ಜರುಗಿಸಿದಂತೆ ಭಾಸವಾಗಿತ್ತು. ಆ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ.