ನಾನು ಬಿ.ಎ. ಪದವಿ ಓದುತ್ತಿದ್ದಾಗ ಕಾಲೇಜಿನಲ್ಲಿ ನಡೆಯುತ್ತಿದ್ದ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ, ಸ್ನಾತಕೋತ್ತರ ಪದವಿ ಓದಲು “ಸಮಾಜಕಾರ್ಯ’ ವಿಷಯವನ್ನು ಆಯ್ಕೆ ಮಾಡಿಕೊಂಡಾಗ ಸ್ಪರ್ಧೆಗಳಿಗೆ ಸೇರಬೇಕು ಎನಿಸಿತು. ಯಾಕೆಂದರೆ, ಸಮಾಜ ಕಾರ್ಯ ವಿಷಯವು ನಮ್ಮೊಳಗೆ ಪ್ರತಿಭೆಯನ್ನು ಸಾಮರ್ಥ್ಯವನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತದೆ. ನಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ. ಅದರಲ್ಲಿಯೂ ಕ್ಷೇತ್ರಕಾರ್ಯ ಮಾಡುವಾಗ ಸಿಗುವ ಅನುಭವಗಳು ನಿಜಕ್ಕೂ ಕಣ್ತೆರೆಸುವಂತೆ ಇರುತ್ತವೆ.
ಕ್ಷೇತ್ರಕಾರ್ಯವು ನನಗೆ ಇಷ್ಟವಾದ ವಿಷಯ. ಇದು ಗುಂಪು ಚಟುವಟಿಕೆ, ಸಮುದಾಯ ಕಾರ್ಯಕ್ರಮ ಮುಂತಾದ ಅನೇಕ ವಿಷಯಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮಗಳು ಜಗತ್ತಿನ ಜ್ಞಾನವನ್ನು ನಮಗೆ ಕೊಡುವುದಲ್ಲದೆ, ನಮ್ಮಲ್ಲಿ ಸಂವಹನ ಕಲೆಯನ್ನು ಚುರುಕುಗೊಳಿಸುತ್ತದೆ. ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವಂತೆ ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ಕ್ಷೇತ್ರಕಾರ್ಯ ಮಾಡುವಾಗ ಸಮುದಾಯಕ್ಕೆ ಭೇಟಿ ನೀಡಿ ಅಲ್ಲಿನ ಜನರಿಗೆ ಯಾವೆಲ್ಲ ಸಮಸ್ಯೆ ಇದೆ ಎಂದು ಗುರುತಿಸಿ, ಇರುವ ಸಂಪನ್ಮೂಲಗಳಲ್ಲಿ ಅವರಿಗೆ ಸಹಾಯ ಮಾಡುವಂತಹ ಕೆಲಸವನ್ನು ಸಮಾಜ ಕಾರ್ಯದ ವಿಭಾಗದ ವಿದ್ಯಾರ್ಥಿಗಳು ಮಾಡಬಹುದು. ಜಾಗೃತಿ ಕಾರ್ಯಕ್ರಮಗಳೂ ಜನರಲ್ಲಿ ಅರಿವನ್ನು ಮೂಡಿಸುತ್ತವೆ.
ನನ್ನ ದ್ವಿತೀಯ ಸೆಮಿಸ್ಟರ್‌ನಲ್ಲಿ ಗ್ರಾಮೀಣ ಅಧ್ಯಯನ ಶಿಬಿರವು ಸುಳ್ಯ-ಪೆರಾಜೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ನಿಜವಾದ ಕಲಿಕೆಯು ಸಹ ಈ ಶಿಬಿರದಿಂದ ತಿಳಿಯಿತು. ಯಾವುದೇ ಒಂದು ಕಾರ್ಯಕ್ರಮವನ್ನು ಮಾಡಲು ಸಮುದಾಯದಲ್ಲಿ ಯಾವೆಲ್ಲ ಸಮಸ್ಯೆ ಇದೆ ಮತ್ತು ಎಷ್ಟು ಕಷ್ಟ ಇದೆ ಎಂಬುದು ಸಹ ಸಮಾಜಕಾರ್ಯದ ವಿದ್ಯಾರ್ಥಿಗಳಿಗೆ ಅರಿವಾಗುತ್ತದೆ.
ಇಂದು ಸಮಾಜಕಾರ್ಯವು ಒಂದು ಆಳವಾದ ವೈಜ್ಞಾನಿಕ ಅಧ್ಯಯನದ ವಿಷಯವಾಗಿ ಅದರ ವ್ಯಾಪ್ತಿ ಬೇರೆ ಬೇರೆ ವಿಭಾಗಗಳಾಗಿ ಬಹಳ ವಿಸ್ತರಿಸಿದೆ. ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ ಎಂಟು ದಶಕಗಳೇ ಸಂದವು. 1936 ಮುಂಬಯಿಯ ಟಿಐಎಸ್‌ಎಸ್ ಸಂಸ್ಥೆಯಲ್ಲಿ ಪ್ರಾರಂಭವಾದ ಸಮಾಜಕಾರ್ಯ ಶಿಕ್ಷಣವು ಇಂದು ದೇಶದ ಎಲ್ಲಾ ರಾಜ್ಯಗಳಿಗೂ ಹರಡಿದೆ. ಆಧುನಿಕ ಸಮಾಜದಲ್ಲಿ ಮಾನವ ಎದುರಿಸುತ್ತಿರುವ ಮಾನಸಿಕ ಒತ್ತಡಗಳು ಹಾಗೂ ಅದರಲ್ಲಿರುವ ಸಂಕೀರ್ಣತೆಯ ಸವಾಲುಗಳು ದಿನದಿಂದ ದಿನಕ್ಕೆ ಜಾಸ್ತಿಯಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಸಮಸ್ಯೆಗೆ ಒಳಗಾದ ವ್ಯಕ್ತಿಯ ನಡುವೆ ಸಮಾಜಕಾರ್ಯದ ವಿದ್ಯಾರ್ಥಿಯು ಸಮಾಲೋಚನೆ ಮಾಡಿ ಅವನೇ ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಅವನನ್ನು ಸಶಕ್ತನನ್ನಾಗಿ ಮಾಡುವುದು ಈ ವಿದ್ಯಾರ್ಥಿಯ ಕೆಲಸ.
ವಿಶ್ವವಿದ್ಯಾನಿಲಯದ ಮಾರ್ಗದರ್ಶನದಂತೆ ಯಾವುದೇ ವಿಷಯದಲ್ಲಿ ಅಂದರೆ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಪದವಿಯನ್ನು ಪಡೆದ ಅಭ್ಯರ್ಥಿಯು ಸ್ನಾತಕೋತ್ತರ ಸಮಾಜಕಾರ್ಯ ಪದವಿ ಅಧ್ಯಯನವನ್ನು ಮಾಡಬಹುದಾಗಿದೆ. ಇದು ಎರಡು ವರ್ಷಗಳ ಅಧ್ಯಯನ. ಸೈದ್ಧಾಂತಿಕ ಮತ್ತು ಆಂತರಿಕ ವಿಷಯಗಳೆಂದು ಇದನ್ನು ವಿಭಾಗಿಸಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿ ಸರಕಾರಿ, ಸರಕಾರೇತರ ಸಂಸ್ಥೆ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಒಳಗೊಂಡಿವೆ. ವೃತ್ತಿಪರ ಸಾಮಾಜಿಕ ಕಾರ್ಯಕರ್ತರು ಸರಕಾರದ ವಿವಿಧ ಇಲಾಖೆಗಳು ಮತ್ತು ಸರಕಾರೇತರ ಸಂಸ್ಥೆಗಳ ಆಡಳಿತಾತ್ಮಕ ನಿರ್ವಹಣೆ, ಮುಂತಾದ ಸಂಸ್ಥೆಗಳು ಸಮಾಜಕಾರ್ಯಕ್ಕೆ ವಿಪುಲ ಅವಕಾಶವನ್ನು ಒದಗಿಸುತ್ತದೆ.
ಅಧ್ಯಯನ ಅವಕಾಶಗಳು
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು, ಮಂಗಳೂರು ವಿಶ್ವವಿದ್ಯಾಲಯ, ಮೂಡಬಿದಿರೆಯ ಆಳ್ವಾಸ್ ಕಾಲೇಜು, ಉಜಿರೆಯ ಎಸ್‌ಡಿಎಂ ಕಾಲೇಜು, ಮಂಗಳೂರಿನ ಸ್ಕೂಲ್ ಆಫ್ ರೋಶನಿ ನಿಲಯ, ಬಳ್ಳಾಲ್‌ಬಾಗ್‌ನ ಶ್ರೀದೇವಿ ಕಾಲೇಜು, ವಿಟ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಪೆರುವಾಜೆಯ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯದ ನೆಹರು ಮೆಮೊರಿಯಲ್ ಕಾಲೇಜು ಮುಂತಾದೆಡೆಗಳಲ್ಲಿ ಎಂಎಸ್‌ಡಬ್ಲ್ಯೂ ವಿಷಯವನ್ನು ಅಧ್ಯಯನ ಮಾಡುವ ಅವಕಾಶವಿದೆ.
ಮನೋಜ್
ದ್ವಿತೀಯ ಎಂ.ಎಸ್.ಡಬ್ಲ್ಯು , ಸಂತ ಫಿಲೋಮಿನಾ ಕಾಲೇಜು ಪುತ್ತೂರು