ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಶುಕ್ರವಾರ ಮಾತನಾಡಿದ ಅವರು, “ಚಾಮುಂಡೇಶ್ವರಿ ಕ್ಷೇತ್ರದ ಜನತೆ ನನ್ನನ್ನು ಐದು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ.
2006ರ ಉಪ ಚುನಾವಣೆಯಲ್ಲಿ ನನಗೆ ಮರು ಜನ್ಮ ನೀಡಿದ ಕ್ಷೇತ್ರವಿದು. ಈ ಕ್ಷೇತ್ರದ ಜನರನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.ಈಗಲೂ ಚಾಮುಂಡೇಶ್ವರಿ ನನ್ನದೇ ಕ್ಷೇತ್ರ, ಮುಂಬರುವ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ’ ಎಂದರು. “ವರುಣಾ ಕ್ಷೇತ್ರಕ್ಕೆ ನನಗೆ ಹೆಚ್ಚಾಗಿ ಬರಲು ಸಾಧ್ಯವಾಗುತ್ತಿಲ್ಲ. ಹಿಂದೆ ನನ್ನ ಮಗ ರಾಕೇಶ್ ಬರುತ್ತಿದ್ದ. ಈಗ ಯತೀಂದ್ರ ಬರುತ್ತಿದ್ದಾನೆ. ಕಳೆದ ಬಾರಿ ಆಶೀರ್ವದಿಸಿದಂತೆ ಈ ಬಾರಿಯೂ ಆಶೀರ್ವದಿಸಿ’ ಎನ್ನುವ ಮೂಲಕ ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ಯತೀಂದ್ರ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದರು.
ಮೇಕೆದಾಟು ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವರದಿ ಸಂಬಂಧ ಕೇಂದ್ರ ಸರ್ಕಾರ ಸ್ಪಷ್ಟನೆ ಕೇಳಿದರೆ ಮಾತ್ರ ಪ್ರತಿಕ್ರಿಯೆ ನೀಡುತ್ತೇವೆ. ತಮಿಳುನಾಡಿನಂತೆ ನಾವು ಪದೇ ಪದೆ ಕ್ಯಾತೆ ತೆಗೆಯುವುದಿಲ್ಲ. ಸುಪ್ರೀಂಕೋರ್ಟ್ ಆದೇಶದ
ಹಿನ್ನೆಲೆಯಲ್ಲಿ ಈಗಾಗಲೇ ಕಾವೇರಿ ಕಣಿವೆಯ ಜಲಾಶಯಗಳಿಂದ ತಮಿಳುನಾಡಿಗೆ 4 ರಿಂದ 5 ಟಿಎಂಸಿ ನೀರು ಬಿಟ್ಟಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಚಡ್ಡಿ ಹಾಕ್ಕೊಂಡು ಹೊಲ ಊಳುತ್ತಿದ್ದೆ: ಬಳಿಕ, ಚಾಮರಾಜನಗರದಲ್ಲಿ ಮಾತನಾಡಿದ ಸಿದ್ದರಾಮಯ್ಯ, “ನಾನು ರೈತನ ಮಗ. ನನಗೂ ಹೊಲ ಉತ್ತು ಗೊತ್ತು. ನಾನು ಬಿಎಸ್‌ಸಿ ಓದುವಾಗಲೂ ಹೊಲ ಊಳುತ್ತಿದ್ದೆ. ಚಡ್ಡಿ ಹಾಕ್ಕೊಂಡು, ಪಂಚೆ ಉಟ್ಕೊಂಡು ಹೊಲ ಉಳಕಾಯ್ತದಾ? ಅದಕ್ಕೆ ಚಡ್ಡೀಲೆ ಹೊಲ ಊಳುತ್ತಿದ್ದೆ. ಎಸ್‌ಎಸ್‌ಎಲ್ ಸಿವರೆಗೂ ಚಪ್ಪಲಿ ಇರಲಿಲ್ಲ. ಬರಿಗಾಲಲ್ಲಿರುತ್ತಿದ್ದೆ’ ಎಂದು ತಮ್ಮ ಹಿಂದಿನ ದಿನಗಳ ಮೆಲುಕು ಹಾಕಿದರು.