ಅಭಿನಯ, ಬಣ್ಣದ ಲೋಕ ಅಂದ್ರೆ ಹಾಗೆ. ಅದು ಎಂಥವರನ್ನೂ ಕೂಡ ತನ್ನತ್ತ ಸೆಳೆಯುತ್ತಿದೆ. ಆದರೆ ಕೆಲವೇ ಕೆಲವರಿಗೆ ಮಾತ್ರ ಅದು ಒಲಿದು, ಕೈ ಹಿಡಿಯುತ್ತದೆ. ಪರಿಶ್ರಮ, ಅವಕಾಶ, ಅದೃಷ್ಟ ಎಲ್ಲವೂ ಕೂಡಿ ಬಂದಾಗ ಮಾತ್ರ ಇಲ್ಲಿ ಕನಸು ಕೈಗೂಡುತ್ತದೆ. ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ಅಂಥದ್ದೇ ಕನಸು ಇಟ್ಟುಕೊಂಡು ಬಂದ ಪ್ರತಿಭೆಯೊಬ್ಬರು ಈಗ ಚಿತ್ರರಂಗದಲ್ಲಿ ನಿಧಾನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರೇ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದ ಮಂಜುನಾಥ್ ಬೂದಿಹಾಳ್ ಮs….
2017ರಲ್ಲಿ ತೆರೆಕಂಡ “ಹಿಲ್ಟನ್ ಹೌಸ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಮಂಜುನಾಥ್ ಸದ್ಯ ತನ್ನ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ನಿಧಾನವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಚಿತ್ರಗಳಲ್ಲೂ ಬಣ್ಣ ಹಚ್ಚಿರುವ ಈ ಕನ್ನಡದ ಪ್ರತಿಭೆ ಅಲ್ಲೂ ಕೂಡ ಒಂದಷ್ಟು ಛಾಪು ಮೂಡಿಸಿದ್ದಾರೆ.
ಚಿತ್ರರಂಗಕ್ಕೆ ಬಂದ ಬಗ್ಗೆ ಮಾತನಾಡುವ ಮಂಜುನಾಥ್ ಬೂದಿಹಾಳ್ ಮs…, “ಚಿಕ್ಕಂದಿನಿಂದಲೂ ನಟನಾಗಬೇಕು, ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲವಿತ್ತು. ಶಿಕ್ಷಣ ಮುಗಿಯುತ್ತಿದ್ದಂತೆ, ಉದ್ಯೋಗ ಅರಸಿ ಬೆಂಗಳೂರಿಗೆ ಬಂದೆ. ಇದೇ ವೇಳೆ ಪಲ್ಲಕ್ಕಿ ಖ್ಯಾತಿಯ ನಿರ್ದೇಶಕ ಕೆ. ನರೇಂದ್ರ ಬಾಬು ಅವರ ಕಣ್ಣಿಗೆ ಬಿದ್ದೆ. ಅವರು ತಮ್ಮ “ಹಿಲ್ಟನ್ ಹೌಸ್’ ಚಿತ್ರದಲ್ಲಿ ಒಂದು ಇನ್ಸ್‌ಪೆಕ್ಟರ್ ಪಾತ್ರ ಕೊಟ್ಟರು. ಕೊಲೆ ಜಾಡು ಹಿಡಿದು ಹೊರಡುವ, ಚಿತ್ರಕ್ಕೆ ತಿರುವು ಕೊಡುವ ಪಾತ್ರವದು. ಆ ಪಾತ್ರ ನನ್ನನ್ನು ಒಬ್ಬ ನಟನಾಗಿ ಗುರುತಿಸುವಂತೆ ಮಾಡಿತು. ಅಲ್ಲದೆ ಸಾಕಷ್ಟು ಹೆಸರು ತಂದುಕೊಟ್ಟಿತು. ಅದಾದ ನಂತರ ತಮಿಳಿನಲ್ಲಿ “ಕೇಕಮಲೈ ಕೇಕಂ’, ತೆಲುಗಿನಲ್ಲಿ “ಮಳ್ಳಿವಚ್ಚಿಂದ’ ಚಿತ್ರದಲ್ಲೂ ಅವಕಾಶ ಸಿಕ್ಕಿತು. ಬಳಿಕ ಸಂಜಯ್ ನಿರ್ದೇಶನದ “ಆ ಒಂದು ದಿನ’ ಚಿತ್ರದಲ್ಲೂ ಒಂದು ಪಾತ್ರ ಮಾಡಿದೆ. ಇದೇ ವೇಳೆ “ತ್ರಿವೇಣಿ ಸಂಗಮ’ ಧಾರಾವಾಹಿಯಲ್ಲಿ ಖಳನಟನಾಗಿಯೂ ಕಾಣಿಸಿಕೊಂಡೆ. ಜೊತೆಗೆ ಕೆಲ ಜಾಹೀರಾತುಗಳಲ್ಲೂ ಕಾಣಿಸಿಕೊಂಡೆ’ ಎಂದು ತಮ್ಮ ಅಭಿನಯ ಯಾನ ತೆರೆದಿಡುತ್ತಾರೆ.
ಸದ್ಯ ವೆಂಕಟೇಶ್, ಹಿರಿಯ ಸಾಹಿತಿ ಹೆಚ್.ಎಸ್ ವೆಂಕಟೇಶ ಮೂರ್ತಿ ಅಭಿನಯಿಸುತ್ತಿರುವ “ಅಮೃತವಾಹಿನಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಲೀಸ್‌ಗೆ ರೆಡಿಯಾಗಿರುವ ಈ ಚಿತ್ರ ಮುಂದಿನ ವರ್ಷದಲ್ಲಿ ಆರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಇದರ ನಡುವೆ ಕೆ. ನರೇಂದ್ರ ಬಾಬು ಮತ್ತು “ರಾಜಸಿಂಹ’ ಚಿತ್ರದ ನಿರ್ದೇಶಕ ರವಿ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಗಳಲ್ಲೂ ಮಂಜುನಾಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.