Advertisement

ಬಿಗ್‌ ಮನೆಯಿಂದ ಕರಾಳ ರಾತ್ರಿಯವರೆಗೆ

11:34 AM Feb 23, 2018 | |

“ಬಿಗ್‌ಬಾಸ್‌’ ಗೆದ್ದೇ ಬರುತ್ತೇನೆ ಎಂಬ ವಿಶ್ವಾಸದೊಂದಿಗೆ ದಯಾಳ್‌ ಪದ್ಮನಾಭನ್‌ “ಬಿಗ್‌ ಬಾಸ್‌’ ಮನೆಯೊಳಗೆ ಹೋಗಿದ್ದರಂತೆ. ಆದರೆ, ಅವರು ಬೇಗನೇ ಮನೆಯಿಂದ ಹೊರಬರಬೇಕಾಯಿತು. ಬಂದ ಮೇಲೆ ಏನು ಮಾಡೋದು ಎಂದು ಯೋಚಿಸಿದಾಗ ತೋಚಿದ್ದು “ಕರಾಳ ರಾತ್ರಿ’. ಅದರಂತೆ ಸ್ಕ್ರಿಪ್ಟ್ ರೆಡಿಮಾಡಿಕೊಂಡ ದಯಾಳ್‌ ಈಗ ಸಿನಿಮಾದ ಮುಹೂರ್ತ ಕೂಡಾ ಮಾಡಿಬಿಟ್ಟಿದ್ದಾರೆ. ಒಂದಲ್ಲ ಎರಡು ಸಿನಿಮಾಗಳಿಗೆ.

Advertisement

“ಕರಾಳ ರಾತ್ರಿ’ ಜೊತೆಗೆ “ಪುಟ 109′ ಎಂಬ ಮತ್ತೂಂದು ಸಿನಿಮಾವನ್ನು ದಯಾಳ್‌ ಆರಂಭಿಸಿದ್ದಾರೆ. ವಿಶೇಷವೆಂದರೆ, ಈ ಸಿನಿಮಾಕ್ಕೆ ದಯಾಳ್‌ ಬಿಗ್‌ಬಾಸ್‌ ಮನೆಯಲ್ಲೇ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೆಕೆ ಹಾಗೂ ಅನುಪಮಾ ಗೌಡ ಅವರು ದಯಾಳ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. “ಕರಾಳ ರಾತ್ರಿ’ ಹಾಗೂ “ಪುಟ 109′ ಎರಡೂ ಸಿನಿಮಾಗಳಲ್ಲೂ ಜೆಕೆ ನಟಿಸಿದರೆ, ಅನುಪಮಾ ಗೌಡ ಅವರು “ಕರಾಳ ರಾತ್ರಿ’ಯಲ್ಲಿ ನಟಿಸುತ್ತಿದ್ದಾರೆ.

“ಬಿಗ್‌ಬಾಸ್‌’ ಮನೆಯೊಳಗೆ ಸಿನಿಮಾ ವಿಷಯ ಮಾತನಾಡುತ್ತಾ ದಯಾಳ್‌ ಮುಂದೊಂದು ಸಿನಿಮಾ ಮಾಡುವ ಆಲೋಚನೆ ಇದೆ, ನೀವು ನಟಿಸುತ್ತೀರಾ ಎಂದು ಕೇಳಿದ್ದರಂತೆ. ಅದಕ್ಕೆ ಇಬ್ಬರು ಒಪ್ಪಿದ್ದರು. “ಬಿಗ್‌ಬಾಸ್‌’ನಿಂದ ಹೊರಬಂದ ನಂತರವೂ ಮನೆಯೊಳಗೆ ಕೊಟ್ಟ ಮಾತಿನಂತೆ ಇಬ್ಬರು ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರೆ. ಮೋಹನ್‌ ಹಬ್ಬು ಅವರ ನಾಟಕವನ್ನಾಧರಿಸಿ ದಯಾಳ್‌ “ಕರಾಳ ರಾತ್ರಿ’ ಸಿನಿಮಾ ಮಾಡುತ್ತಿದ್ದಾರೆ.

ಇದೊಂದು ಕ್ರೈಂ ಥ್ರಿಲ್ಲರ್‌ ಸಿನಿಮಾವಂತೆ. “ಇದು ಕ್ರೈಮ್‌ ಥ್ರಿಲ್ಲರ್‌ ಸಿನಿಮಾ. ಚಿತ್ರದ ಕಥೆ 1980ಯಲ್ಲಿ ನಡೆಯುತ್ತದೆ. ಕ್ರೈಮ್‌ ಥ್ರಿಲ್ಲರ್‌ ಎಂದಾಕ್ಷಣ ಒಂದು ಫಾರ್ಮುಲಾ ಇರುತ್ತದೆ. ಬಹುತೇಕ ಸಿನಿಮಾಗಳು ಆ ಫಾರ್ಮುಲಾದ ಮೇಲೆಯೇ ಸಾಗುತ್ತದೆ. ಆದರೆ, “ಕರಾಳ ರಾತ್ರಿ’ಯಲ್ಲಿ ಆ ಫಾರ್ಮುಲಾವನ್ನು ಬಿಟ್ಟು ಹೊಸದನ್ನು ಪ್ರಯತ್ನಿಸುತ್ತಿದ್ದೇನೆ. ಚಿತ್ರದಲ್ಲಿ ಭಾವನೆಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ. ಎಮೋಶನ್‌ ಜೊತೆಗೆ ಸಾಗುವ ಕ್ರೈಮ್‌ ಥ್ರಿಲ್ಲರ್‌ ಸಿನಿಮಾವಿದು.

“ಹಗ್ಗದ ಕೊನೆ’ ತರಹನೇ ಈ ಸಿನಿಮಾ ಕೂಡಾ ಒಳ್ಳೆಯ ಹೆಸರು ತಂದುಕೊಡುತ್ತದೆ ಎಂಬ ವಿಶ್ವಾಸವಿದೆ’ ಎನ್ನುವುದು ದಯಾಳ್‌ ಮಾತು. ಚಿತ್ರದ ಚಿತ್ರೀಕರಣ ಮೂಡಿಗೆರೆಯ ಬಳಿಯ ಮನೆಯೊಂದರಲ್ಲಿ ನಡೆಯಲಿದ್ದು, ಸಿನಿಮಾಕ್ಕಾಗಿ ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ಆ ಮನೆಯನ್ನು ನವೀಕರಣ ಮಾಡುತ್ತಿದೆ ಚಿತ್ರತಂಡ.  ಶೇ. 70ರಷ್ಟು ಚಿತ್ರೀಕರಣ ಆ ಮನೆಯಲ್ಲೇ ನಡೆಯುತ್ತದೆಯಂತೆ.  

Advertisement

15 ದಿನಗಳಲ್ಲಿ “ಕರಾಳ ರಾತ್ರಿ’ ಚಿತ್ರೀಕರಣ ಮುಗಿಯಲಿದೆಯಂತೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸಾಹಿತ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವ ಹಾಡಂತೆ. ನಾಗರಾಜ್‌ ಎನ್ನುವವರು ಹಾಡು ಬರೆಯುತ್ತಿದ್ದಾರೆ. ಚಿತ್ರದ ಹಾಡೊಂದರ ಆರಂಭದಲ್ಲಿ ಡಿವಿಜಿಯವರ “ಮಂಕುತಿಮ್ಮನ ಕಗ್ಗ’ದ ನಾಲ್ಕು ಸಾಲು ಬರಲಿದ್ದು, ಉಳಿದಂತೆ ಅದಕ್ಕೆ ಹೊಂದುವ ರೀತಿ ನಾಗರಾಜ್‌ ಅವರು ಬರೆದಿದ್ದಾರೆ ಎಂದು ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ ದಯಾಳ್‌. 

ನಿರ್ಮಾಣದಲ್ಲಿ ದಯಾಳ್‌ಗೆ ಅವಿನಾಶ್‌ ಅವರು ಸಾಥ್‌ ನೀಡುತ್ತಿದ್ದಾರೆ. ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿರುವ ಜೆಕೆಗೆ ಬೌಂಡ್‌ ಸ್ಕ್ರಿಪ್ಟ್ ಕೊಟ್ಟ ಮೊದಲ ನಿರ್ದೇಶಕ ದಯಾಳ್‌ ಅಂತೆ. ಅನುಪಮಾ ಕೂಡಾ ಒಳ್ಳೆಯ ಪಾತ್ರ ಸಿಕ್ಕ ಖುಷಿ ಹಂಚಿಕೊಂಡರು. ಚಿತ್ರದಲ್ಲಿ ವೀಣಾ ಸುಂದರ್‌, ಸಿಹಿಕಹಿ ಚಂದ್ರು ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ನವೀನ್‌ ಕೃಷ್ಣ ಸಂಭಾಷಣೆ ಇದೆ. ಗಣೇಶ್‌ ನಾರಾಯಣ್‌ ಸಂಗೀತ, ಪಿಕೆಎಚ್‌ ದಾಸ್‌ ಛಾಯಾಗ್ರಹಣ ಚಿತ್ರಕ್ಕಿದೆ. 

ಪುಟ 109: ದಯಾಳ್‌ ಮಾಡುತ್ತಿರುವ ಮತ್ತೂಂದು ಸಿನಿಮಾ “ಪುಟ 109′. ಇದು “ಹಗ್ಗದ ಕೊನೆ’ ತರಹದ ಪ್ರಯತ್ನವಂತೆ. ಬಹುತೇಕ ಸಿನಿಮಾ ಎರಡು ಪಾತ್ರಗಳ ಸುತ್ತವೇ ಸಾಗುತ್ತದೆಯಂತೆ.  ಸಂಭಾಷಣೆ ಹೆಚ್ಚು ಕಮರ್ಷಿಯಲ್‌ ಅಂಶಗಳಿಂದ ಕೂಡಿದ್ದು, ಹೊಸ ಪ್ರಯತ್ನವಾಗಲಿದೆ ಎಂಬ ವಿಶ್ವಾಸ ದಯಾಳ್‌ಗಿದೆ. ಚೆನ್ನೈ ಮೂಲದ ಅರವಿಂದ್‌ ಎನ್ನುವವರ ಕಥೆಯನ್ನಿಟ್ಟುಕೊಂಡು ದಯಾಳ್‌ ಈ ಸಿನಿಮಾ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಜೆಕೆ, ನವೀನ್‌ ಕೃಷ್ಣ, ವೈಷ್ಣವಿ ಮೆನನ್‌ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಜೆಕೆ ಇಲ್ಲಿ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡರೆ, ನವೀನ್‌ ಕೃಷ್ಣ ಲೇಖಕನ ಪಾತ್ರ ಮಾಡುತ್ತಿದ್ದಾರೆ. ವೈಷ್ಣವಿ, ನವೀನ್‌ ಕೃಷ್ಣ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಶ್ರೀವತ್ಸ ಸಂಗೀತ ನೀಡುತ್ತಿದ್ದು, ಮೊದಲ ಬಾರಿಗೆ ಹಿನ್ನೆಲೆ ಸಂಗೀತದಲ್ಲಿ ಹೊಸ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ ನವೀನ್‌ ಕೃಷ್ಣ ಸಂಭಾಷಣೆ ಇದೆ. “ಕರಾಳ ರಾತ್ರಿ’ ಮುಗಿದ ನಂತರ ಮೂಡಿಗೆರೆ ಸುತ್ತ ಮುತ್ತವೇ “ಪುಟ 109′ ಕೂಡಾ ನಡೆಯಲಿದೆ. 

* ರವಿಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next