Advertisement

 ಎಲ್ಲಿದ್ದರೂ ಟಿವಿ ಆಫ್‌ ಮಾಡಹುದು, ಮೈನ್‌ ಸ್ವಿಚ್‌ ತೆಗಿಯಬಹುದು!

10:17 AM Jul 05, 2018 | Team Udayavani |

ಕುಂದಾಪುರ: ಫ್ಯಾನ್‌ ಆನ್‌ ಮಾಡಿಟ್ಟು ಕಚೇರಿಗೆ ಬಂದಿರುತ್ತೀರಿ ಅಥವಾ ಯಾವುದೋ ಕೆಲಸಕ್ಕಾಗಿ ಮನೆಯಿಂದ ದೂರ, ಬೇರೆ ಊರಿಗೆ ಪ್ರವಾಸ, ಮದುವೆ ಇನ್ನಿತರ ಸಮಾರಂಭಕ್ಕೆಂದು ಮನೆಯಿಂದ ಹೊರಗಿರುತ್ತೀರಿ. ಆದರೆ ಅಷ್ಟರಲ್ಲಾಗಲೇ ಗುಡುಗು – ಮಿಂಚಿನ ಆರ್ಭಟ ಶುರುವಾಗಿರುತ್ತದೆ. ನಿಮ್ಮ ವಿದ್ಯುತ್‌ ಉಪಕರಣಗಳಿಗೆ ಹಾನಿಯಾಗುತ್ತದೆ ಎನ್ನುವ ಚಿಂತೆ ಇನ್ಮುಂದೆ ಮಾಡಬೇಕಾಗಿಲ್ಲ. ನೀವು ಎಲ್ಲಿದ್ದರೂ, ಅಲ್ಲಿಂದಲೇ ನಮ್ಮ ಮನೆಯ ಮೈನ್‌ ಸ್ವಿಚ್‌ ತೆಗೆಯುವ, ಫ್ಯಾನ್‌, ಟಿವಿ ಆಫ್‌ ಮಾಡುವ ಹೊಸ ಪ್ರಾಜೆಕ್ಟ್ವೊಂದನ್ನುಮೂಡ್ಲಕಟ್ಟೆ ಇಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿಗಳು ಕಂಡು ಹಿಡಿದಿದ್ದಾರೆ. 

Advertisement

ಮೂಡ್ಲಕಟ್ಟೆ ಇಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ವಿದ್ಯಾರ್ಥಿಗಳಾದ ಮಹಮ್ಮದ್‌ ಆಸೀಮ್‌, ನಾಗಭೂಷಣ ಉಡುಪ, ವಾಗೀಶ್‌ ಪ್ರಸಾದ್‌, ಸಾಕ್ಷಿ ಶೆಟ್ಟಿ ತಯಾರಿಸಿದ “ಇಂಟೆಲಿಜೆಂಟ್‌ ಹೋಂ ಸಿಸ್ಟಂ’ ಅನ್ನುವ ಜನೋಪ ಯೋಗಿ ಪ್ರಾಜೆಕ್ಟ್ ತಯಾರಿಸಿದ್ದಾರೆ. ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮುಖ್ಯಸ್ಥ ಪ್ರೊ| ಮೆಲ್ವಿನ್‌ ಡಿ’ಸೋಜ ಅವರ ಸಲಹೆ ಮೇರೆಗೆ, ಪ್ರೊ| ಶೈಲೇಶ್‌ ಬಿ.ಸಿ. ಅವರ ಮಾರ್ಗದರ್ಶನದಲ್ಲಿ ಈ ಪ್ರಾಜೆಕ್ಟ್ ತಯಾರಾಗಿದೆ. ಪ್ರಾಜೆಕ್ಟ್‌ನ ಕಾರ್ಯವೈಖರಿಯನ್ನು ವೀಕ್ಷಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ಧಾರ್ಥ ಶೆಟ್ಟಿ, ಪ್ರಾಂಶುಪಾಲ ಡಾ| ಕಾಟಯ್ಯ, ಶೈಕ್ಷಣಿಕ ನಿರ್ದೇಶಕ ಡಾ| ಚಂದ್ರಶೇಖರ್‌ ರಾವ್‌, ಡಾ| ಅರುಣ್‌ಕಾಶಿ, ವಿದ್ಯಾರ್ಥಿಗಳ ಪರಿಶ್ರಮವನ್ನು ಪ್ರಶಂಸಿದ್ದಾರೆ.

ಇದರ ಕಾರ್ಯ ವೈಖರಿ ಹೇಗೆ?
ಈ “ಇಂಟೆಲಿಜೆಂಟ್‌ ಹೋಂ ಸಿಸ್ಟಂ’ ಇರುವ ಸರ್ಕ್ನೂಟ್‌ ಬೋರ್ಡ್‌ನ್ನು ನಿಮ್ಮ ಮನೆಯ ವಿದ್ಯುತ್‌ ಮೈನ್‌ ಸ್ವಿಚ್‌ ಬೋರ್ಡ್‌ಗೆ ಅಳವಡಿಸಬೇಕು. ಆ ಬಳಿಕ ಮೊಬೈಲ್‌ ಮತ್ತು ಕಂಪ್ಯೂಟರ್‌ನಲ್ಲಿ ಒಂದು ವೆಬ್‌ಸೈಟ್‌ ಅಥವಾ ಆ್ಯಪ್‌ ಮೂಲಕ ದೇಶದ ಯಾವುದೇ ಭಾಗದಿಂದ ತಮ್ಮ ಮನೆಯ ಫ್ಯಾನ್‌, ವಿದ್ಯುದ್ದೀಪಗಳು ಹಾಗೂ ಯಾವುದೇ ಉಪಕರಣಗಳನ್ನೂ ನಿಯಂತ್ರಿಸಬಹುದು. ಗೃಹ ಬಳಕೆಯ ವಸ್ತುಗಳಲ್ಲದೆ ನೀರಾವರಿಗೆ ಬೇಕಾಗುವ ಪಂಪ್‌ಸೆಟ್‌ಗಳನ್ನು ನಿಯಂತ್ರಿಸುವ ಆಯ್ಕೆಯನ್ನು ಕೊಡಲಾಗಿದೆ. ಕೃಷಿ ಜಾಗದ ಮಣ್ಣಿನ ನೀರಿನ ಅಂಶ ಕಡಿಮೆ ಆದಲ್ಲಿ ಯಾರ ಸಹಾಯವೂ ಇಲ್ಲದೆ ಸ್ವಯಂಚಾಲಿತವಾಗಿ ನೀರುಣಿಸುವ ಕೆಲಸ ಈ ಪ್ರಾಜೆಕ್ಟ್ ಮಾಡುತ್ತದೆ. ಹಾಗೆ ಬಿಟ್ಟ ನೀರಿನ ಪ್ರಮಾಣ ಸಾಕಾದಾಗ ಪಂಪ್‌ಗ್ಳನ್ನು ಸ್ವಯಂಚಾಲಿತವಾಗಿ ಬಂದ್‌ ಮಾಡುವ ಆಯ್ಕೆಯನ್ನು ಕೊಡಲಾಗಿದೆ. ಪ್ರಾಜೆಕ್ಟ್‌ನಲ್ಲಿ ಇನ್ಸ್‌ಟಾಗ್ರಾಂ ಮೂಲಕ ಸಂದೇಶ ಕಳುಹಿಸಿ, ಧ್ವನಿ ಸಹಾಯದಿಂದ ಕೂಡ ಎಲ್ಲ ಉಪಕರಣಗಳನ್ನು ನಿಯಂತ್ರಿಸುವ ಆಯ್ಕೆಗಳನ್ನು ಇಡಲಾಗಿದೆ. ಪಾರ್ಕಿಂಗ್‌ ಸಿಸ್ಟಂ, ಗ್ಯಾಸ್‌ ಸಿಲಿಂಡರ್‌ ನಿಯಂತ್ರಿಸುವ ವೈಶಿಷ್ಟವನ್ನು ಹೊಂದಿದೆ. ನೀವು ಅಳವಡಿಸಲು ಮುಂದಾಗುವಿರಾದರೆ ನಿಮಗೆ ತಗಲುವ ವೆಚ್ಚ ಕೇವಲ 3 ಸಾವಿರ ರೂ. ಮಾತ್ರ. 

ವಿದ್ಯುತ್‌, ನೀರಿನ ಪೋಲನ್ನು ತಪ್ಪಿಸಬಹುದು
ಕೇವಲ 1 ವರ್ಷದಲ್ಲಿಯೇ ಈ ಪ್ರಾಜೆಕ್ಟ್‌ನು ವಿದ್ಯಾರ್ಥಿಗಳು ತಯಾರಿಸಿದ್ದು, ಇದರಿಂದ ದೇಶದಲ್ಲಾಗುತ್ತಿರುವ ವಿದ್ಯುತ್‌, ನೀರಿನ ಪೋಲನ್ನು ತಪ್ಪಿಸಬಹುದು. ನೀತಿ ಆಯೋಗದಿಂದ ಅನುದಾನ ಸಿಕ್ಕರೆ ಮುಂದಿನ ದಿನಗಳಲ್ಲಿ ಇದನ್ನೇ ಅಭಿವೃದ್ಧಿಪಡಿಸಿ, ನಳ್ಳಿ ನೀರನ್ನು ಕೂಡ ಪೋಲಾಗದಂತೆ, ಹೊಸ ಸಿಸ್ಟಂನ್ನು ತಯಾರಿಸುವ ಯೋಜನೆಯಿದೆ. 
– ಪ್ರೊ| ಮೆಲ್ವಿನ್‌ ಡಿ’ಸೋಜಾ, ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮುಖ್ಯಸ್ಥ 
 

Advertisement

Udayavani is now on Telegram. Click here to join our channel and stay updated with the latest news.

Next