Advertisement

ಸಾಹಸ ಸಿಂಹನಿಂದ ರಾಜಾ ಸಿಂಹನವರೆಗೂ …

04:54 PM Feb 02, 2018 | |

ಮೊದಲ ನೋಟದಲ್ಲೇ ಅವಳ ಮೇಲೆ ಅವನಿಗೆ ಲವ್‌ ಆಗುತ್ತದೆ. ಆರಂಭದಲ್ಲಿ ಅವರಿಬ್ಬರ ನಡುವೆ ಗೊಂದಲ, ನಂತರ ಗದ್ದಲ ಆಗಿ ಇಬ್ಬರೂ ಒಂದಾಗಬೇಕು ಎನುವಷ್ಟರಲ್ಲಿ ಅವನಿಗೊಂದು ಸತ್ಯ ಗೊತ್ತಾಗುತ್ತದೆ. ಅದೇನೆಂದರೆ, ಅವಳಿಗೆ ಹೆಚ್ಚು ಕಡಿಮೆ ಮದುವೆ ಫಿಕ್ಸ್‌ ಆಗಿದೆ ಮತ್ತು ಅವಳು ತನ್ನ ಮಾವನ ಮಗನನ್ನೇ ಮದುವೆಯಾಗುತ್ತಿದ್ದಾಳೆಂದು ಸ್ಪಷ್ಟವಾಗುತ್ತದೆ.

Advertisement

ಸರಿ, ಅವಳ ಊರಿಗೆ ಹೋಗಿ ಅಲ್ಲಿ ಹೇಗಾದರೂ ಮಾಡಿ ಅವಳ ಮತ್ತು ಅವಳ ಕುಟುಂಬದವರನ್ನು ಪಟಾಯಿಸಬೇಕೆಂದು ಅವನು ಹೊರಡುತ್ತಾನೆ. ಸಿಂಹಾದ್ರಿ ಎಂಬ ಗ್ರಾಮಕ್ಕೆ ಹೋಗುತ್ತಿದ್ದಂತೆಯೇ, ಆ ಗ್ರಾಮಕ್ಕೂ ತನಗೂ ಒಂದು ಹಳೆಯ ನಂಟಿದೆ ಎಂಬುದು ಅವನಿಗೆ ಅರ್ಥವಾಗುತ್ತಾ ಹೋಗುತ್ತದೆ. ಇದೇನಪ್ಪಾ, “ರಾಜಾ ಸಿಂಹ’ ಚಿತ್ರದ ವಿಮರ್ಶೆಯಲ್ಲಿ “ಸಾರಥಿ’ ಚಿತ್ರದ ಕಥೆ ಹೇಳುತ್ತಿದ್ದಾರಲ್ಲ ಅಂತ ಅನ್ನಿಸಬಹುದು.

ಅದು ಸಹಜ. ಮೇಲಿನ ಕಥೆ “ಸಾರಥಿ’ಯದ್ದಲ್ಲ. “ರಾಜಾ ಸಿಂಹ’ನದ್ದೇ. ಎರಡೂ ಚಿತ್ರಗಳಿಗೆ ಸಾಕಷ್ಟು ಸಾಮ್ಯತೆಗಳಿವೆ ಎನ್ನುವುದು ವಿಶೇಷ. ಅಲ್ಲಿ ಸಾರಥಿಯ ತಂದೆಯನ್ನು ಅವನ ತಮ್ಮ ಕೊಂದು, ಆ ಊರಷ್ಟೇ ಅಲ್ಲ, ಸುತ್ತಮುತ್ತಲಿನ ಗ್ರಾಮಗಳನ್ನು ತನ್ನದಾಗಿಸಿಕೊಂಡಿರುತ್ತಾನೆ. ಇಲ್ಲಿ ರಾಜಾ ಸಿಂಹನ ತಂದೆಯನ್ನೂ ಅವನ ತಮ್ಮ ಕೊಂದು, 40 ಗ್ರಾಮಗಳನ್ನು ತನ್ನ ಸುಪರ್ದಿಯಲ್ಲಿಟ್ಟುಕೊಂಡಿರುತ್ತಾನೆ.

ಅಲ್ಲಿ ಸಾರಥಿ ಹೇಗೆ ಆ ಗ್ರಾಮವನ್ನು ತನ್ನ ಮಾವ ಮತ್ತು ಅವನ ಮಗನ ಕಪಿಮುಷ್ಠಿಯಿಂದ ಬಿಡಿಸುತ್ತಾನೋ, ಇಲ್ಲೂ ರಾಜಾ ಸಿಂಹ ಅದೇ ಕೆಲಸ ಮಾಡುತ್ತಾನೆ. ಈ ಮೂಲಕ ಆ ಊರಿನ ನಂದಾದೀಪವಾಗುತ್ತಾನೆ. ಈ ಚಿತ್ರವು ವಿಷ್ಣುವರ್ಧನ್‌ ಅವರ ಚಿತ್ರಗಳನ್ನು ನೆನಪಿಸಲಿದೆ ಎಂದು ಅನಿರುದ್ಧ್ ಮೊದಲೇ ಹೇಳಿದ್ದರು. ಅಂದರೆ, ವಿಷ್ಣುವರ್ಧನ್‌ ಅವರ ಚಿತ್ರಗಳ ಸಾಮಾಜಿಕ ಕಳಕಳಿ ಇಲ್ಲೂ ಮುಂದುವರೆಯುತ್ತದೆ ಎಂಬುದು ಅವರ ಅರ್ಥವಾಗಿತ್ತು.

ಅದು ಅಪ್ಪಟ ನಿಜ. ಇಲ್ಲಿ ಸಾಕಷ್ಟು ಅಂತಹ ವಿಷಯಗಳು ಇವೆ. ಚಿತ್ರ ಆರಂಭವಾಗುವುದೇ ಅಂತಹದ್ದೊಂದು ದೃಶ್ಯದಿಂದ. ಮಕ್ಕಳು ಕುಡಿಯುವ ಹಾಲಿಗೆ ಕಲಬೆರೆಕೆ ಮಾಡುವ ದಂಧೆಯನ್ನು ಮಟ್ಟಹಾಕುವುದರಿಂದ ಪ್ರಾರಂಭವಾಗುವ ರಾಜಾಸಿಂಹನ ಸಾಹಸಗಳು, ನಿರಂತರವಾಗಿ ಮುಂದುವರೆಯುತ್ತದೆ. ಪ್ರಮುಖವಾಗಿ ಸಿಂಹಾದ್ರಿ ಗ್ರಾಮಕ್ಕೆ ನೀರು ಪೂರೈಸುವುದು, ಶೌಚಾಲಯ ಕಟ್ಟಿಸುವುದು,

Advertisement

ಸರ್ಕಾರಿ ಶಾಲೆಯನ್ನು ರೌಡಿಗಳ ಸುಪರ್ದಿಯಿಂದ ಪಡೆದು ಮಕ್ಕಳಿಗೆ ಬಿಟ್ಟುಕೊಡುವುದು, ರೋಡು ಮಾಡಿಸುವುದು, ಅಂತರ್ಜಾತಿ ವಿವಾಹ ಮಾಡಿಸುವುದು … ಹೀಗೆ ಚಿತ್ರದುದ್ದಕ್ಕೂ ಮುಂದುವರೆಯುತ್ತದೆ. ಆ ಮಟ್ಟಿಗೆ ಚಿತ್ರವು, ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ. ಬಹುಶಃ ಪ್ರೇಕ್ಷಕರ ನಿರೀಕ್ಷೆ ಹುಸಿಯಾಗುವುದು ಒಂದೇ ವಿಷಯದಲ್ಲಿ. ಅದು ಡಾ. ವಿಷ್ಣುವರ್ಧನ್‌ ಅವರ ಪಾತ್ರದ ಬಗ್ಗೆ.

ಇದು “ಸಿಂಹಾದ್ರಿಯ ಸಿಂಹ’ದ ಮುಂದುವರೆದ ಭಾಗ ಮತ್ತು ನರಸಿಂಹೇಗೌಡನ ಪಾತ್ರವು ಅರ್ಧ ಸಿನಿಮಾ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ಚಿತ್ರವು “ಸಿಂಹಾದ್ರಿಯ ಸಿಂಹ’ದ ಮುಂದುವರೆದ ಭಾಗ ಖಂಡಿತಾ ಅಲ್ಲ. ಆ ಚಿತ್ರದ ನರಸಿಂಹೇಗೌಡನ ಪಾತ್ರವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ ಎನ್ನುವುದು ಬಿಟ್ಟರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ.

ಇನ್ನು ಆ ಪಾತ್ರವನ್ನು ಬಳಸಿಕೊಂಡಿರುವುದಾದರೂ ಹೇಗೆ ಎಂದು ನೋಡಿದರೆ, ಅದೂ ಡಾ ವಿಷ್ಣುವರ್ಧನ್‌ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಬಹುದು. “ಸಿಂಹಾದ್ರಿಯ ಸಿಂಹ’ ಚಿತ್ರದ ಸ್ಟಾಕ್‌ಶಾಟ್‌ಗಳನ್ನು, ಗ್ರಾಫಿಕ್ಸ್‌ ಅಂತೆಲ್ಲಾ ಸೇರಿಸಿದರೂ ಎರಡು ನಿಮಿಷ ಇದ್ದರೆ ಹೆಚ್ಚು. ಮಿಕ್ಕಂತೆ ನರಸಿಂಹೇಗೌಡರು ಪ್ರತಿಮೆಯಾಗಿಯೇ ಚಿತ್ರದುದ್ದಕ್ಕೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾ ಹೋಗುತ್ತಾರೆ. 

ಇದುವರೆಗೂ ಲವ್ವರ್‌ ಬಾಯ್‌ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ಅನಿರುದ್ಧ್, ಇಲ್ಲಿ ಎದ್ದು ಸಖತ್‌ ಫೈಟ್‌ ಮಾಡಿದ್ದಾರೆ, ಇಬ್ಬಿಬ್ಬರು ನಾಯಕಿಯರೊಂದಿಗೆ ರೊಮ್ಯಾನ್ಸ್‌ ಮಾಡಿದ್ದಾರೆ, ತಾಯಿಗೆ ತಕ್ಕ ಮಗನಾಗಿ ಪ್ರೇಕ್ಷಕರನ್ನು ಅಳಿಸಿದ್ದಾರೆ. ಆ ಮಟ್ಟಿಗೆ ಅವರು ತಮ್ಮ ಹೊಸ ಇನ್ನಿಂಗ್ಸ್‌ನ್ನು ದೊಡ್ಡ ಮಟ್ಟದಲ್ಲೇ ಪ್ರಾರಂಭಿಸಿದ್ದಾರೆ.

ನಿಖೀತಾ ಮಾತಿಗೆ, ಸಂಜನಾ ರೊಮ್ಯಾನ್ಸ್‌ಗೆ, ಭಾರತಿ ವಿಷ್ಣುವರ್ಧನ್‌ ಅವರ ಮಮತೆಗೆ, ಅಂಬರೀಶ್‌ ಅತಿಥಿ ಪಾತ್ರಕ್ಕೆ, ಶರತ್‌ ಲೋಹಿತಾಶ್ವ ಆಕ್ರೋಶಕ್ಕೆ, ಅರುಣ್‌ ಸಾಗರ್‌ ಆರ್ಭಟಕ್ಕೆ ಅಂತ ಇದ್ದಾರೆ. ಇನ್ನು ನಗಿಸುವುದಕ್ಕೆ ಬುಲೆಟ್‌ ಪ್ರಕಾಶ್‌ ಇದ್ದಾರೆ. ವಿಶೇಷವೆಂದರೆ, ಮೊದಲಾರ್ಧ ಪೂರ್ತಿ ಅವರೇ ಆವರಿಸಿಕೊಳ್ಳುತ್ತಾರೆ.

ಆದರೆ, ನಗು ಬರುವುದು ಕಡಿಮೆಯೇ. ಇನ್ನು ವಿಷ್ಣುವರ್ಧನ್‌ ಅವರ ಛಾಯಾಗ್ರಹಣ ಮತ್ತು ಜೆಸ್ಸಿ ಗಿಫ್ಟ್ ಅವರ ಸಂಗೀತದಲ್ಲಿ ಅದ್ಭುತ ಅಂತ ಹುಡುಕುವುದು ಕಷ್ಟವೇ. ಒಟ್ಟಿನಲ್ಲಿ ಹಲವು ವರ್ಷಗಳಿಂದ ಸಿಂಹದ ಆರ್ಭಟ ಕೇಳದೆ ನೊಂದಿದ್ದ ಪ್ರೇಕ್ಷಕರನ್ನು ಖುಷಿಪಡಿಸಲು ರಾಜಾ ಸಿಂಹವೇ ಬಂದಿದೆ. ಖುಷಿ ಪಡುವುದು ಇನ್ನು ನಿಮಗೆ ಬಿಟ್ಟಿದ್ದು.

ಚಿತ್ರ: ರಾಜಾ ಸಿಂಹ
ನಿರ್ದೇಶನ: ರವಿರಾಮ್‌
ನಿರ್ಮಾಣ: ಸಿ.ಡಿ. ಬಸಪ್ಪ
ತಾರಾಗಣ: ಅನಿರುದ್ಧ್, ನಿಖೀತಾ, ಸಂಜನಾ, ಭಾರತಿ ವಿಷ್ಣುವರ್ಧನ್‌, ಶರತ್‌ ಲೋಹಿತಾಶ್ವ, ಅರುಣ್‌ ಸಾಗರ್‌, ಬುಲೆಟ್‌ ಪ್ರಕಾಶ್‌ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next