ಹೊಸದಿಲ್ಲಿ: ವಿಶ್ವವಿದ್ಯಾಲಯ ಮಟ್ಟದಲ್ಲಿ 2021ರಿಂದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಬಯಸುವವರಿಗೆ ಪಿ.ಎಚ್.ಡಿ. ಜತೆಗೆ ನೆಟ್, ಸೆಟ್ ಪರೀಕ್ಷೆ ಕಡ್ಡಾಯವಾಗಲಿದೆ. ಇಂಥ ಹೊಸ ನಿಯಮ ಜಾರಿಗೆ ತರಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಮುಂದಾಗಿದೆ. ಸದ್ಯಕ್ಕೆ ಈ ಹುದ್ದೆಗಳಿಗೆ ಹೋಗಬಯಸುವವರು ರಾಷ್ಟ್ರೀಯ ಪ್ರವೇಶ ಪರೀಕ್ಷೆ (ನೆಟ್) ಅಥವಾ ರಾಜ್ಯ ಪ್ರವೇಶ ಪರೀಕ್ಷೆಗಳಲ್ಲಿ (ಸೆಟ್) ತೇರ್ಗಡೆಯಾಗಿರಬೇಕು ಅಥವಾ ಪಿ.ಎಚ್.ಡಿ. ಪದವಿ ಪಡೆದಿರಬೇಕು. ಈ ಮೂರರಲ್ಲಿ ಯಾವುದಾದರೊಂದು ಅರ್ಹತೆ ಗಳಿಸಿಕೊಂಡಿದ್ದರೆ ನೇರವಾಗಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕಗೊಳ್ಳಬಹುದಾಗಿದೆ. ಆದರೆ 2021ರಿಂದ ಪಿಎಚ್.ಡಿ. ಪಡೆದಿದ್ದರೂ ಆ ಅಭ್ಯರ್ಥಿ ನೆಟ್ ಅಥವಾ ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಲಿದೆ.
ಇದಿಷ್ಟೇ ಅಲ್ಲದೆ, ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗುವ ಅಭ್ಯರ್ಥಿಗಳು ವೃತ್ತಿ ಆರಂಭಿಸುವ ಮುನ್ನ ಒಂದು ತಿಂಗಳ ಓರಿಯಂಟೇಶನ್ ಕ್ಲಾಸ್‌ನಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕಿರುತ್ತದೆ. ವೃತ್ತಿಗೆ ಸೇರ್ಪಡೆಗೊಂಡ ಬಳಿಕ ಬೋಧನಾ ಅವಧಿ ಹೊರತುಪಡಿಸಿ ದಿನಕ್ಕೆರಡು ಗಂಟೆ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿ, ಪಠ್ಯೇತರ ಚಟುವಟಿಕೆಗಳ ಅಭಿವೃದ್ಧಿ ಬಗ್ಗೆ ಗಮನ ಕೊಡಬೇಕು ಎಂಬ ನಿಯಮ ಜಾರಿಗೆ ಇಲಾಖೆ ಚಿಂತಿಸಿದೆ.
ಇದೇ ವೇಳೆ, ಹೊಸ ನಿಯಮ ಕುರಿತು ಅಪಸ್ವರ ಎತ್ತಿರುವ ದಿಲ್ಲಿ ವಿವಿ ನಿವೃತ್ತ ಕುಲಪತಿ ದಿನೇಶ್ ಸಿಂಗ್, ‘ಎಷ್ಟೋ ಮಂದಿ ವಿದ್ಯಾರ್ಥಿಗಳು ನಡೆಸುವಂತಹ ಸಂಶೋಧನ ಪ್ರಬಂಧಗಳು ಜಾಗತಿಕ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿವೆ. ಖ್ಯಾತ ರಿಸರ್ಚ್ ಜರ್ನಲ್‌ಗಳಲ್ಲೂ ಅವುಗಳು ಪ್ರಕಟವಾಗಿವೆ. ಈಗ ಇಂಥ ವಿದ್ಯಾರ್ಥಿಗಳು ನೆಟ್ ಪರೀಕ್ಷೆಯನ್ನೂ ಬರೆಯಬೇಕೆಂದು ಕಡ್ಡಾಯಗೊಳಿಸಿದರೆ ಅವರ ಪಿಎಚ್.ಡಿ. ಕೆಲಸವನ್ನೇ ಅವಮಾನಿಸಿದಂತೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
– ವೃತ್ತಿ ಜೀವನ ಆರಂಭ ಮುನ್ನ ಓರಿಯಂಟೇಶನ್ ತರಗತಿ ಕಡ್ಡಾಯ
– ದಿನಕ್ಕೆರಡು ಗಂಟೆ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗೆ ಮೀಸಲು