Advertisement
ಪ್ರಪಂಚದಲ್ಲಿ ಎಲ್ಲಿಯೂ ಕಾಣಸಿಗದ ” ಸ್ಫೆರೋಥೆಕಾ ವರ್ಷಾಬು’ ಬಿಲಗಪ್ಪೆಯು ಬೆಂಗ ಳೂರಿನ ರಾಜಾನುಕುಂಟೆ ಬುದುಮನಹಳ್ಳಿ ಗ್ರಾಮದಲ್ಲಿ ಗೋಚರಿಸಿವೆ. 7 ಸಂಶೋಧಕರಿದ್ದ ತಂಡವು ಎರಡು ವರ್ಷಗಳ ಸತತ ಪರಿಶ್ರಮ ನಡೆಸಿ ” ಸ್ಫೆರೋಥೆಕಾ ವರ್ಷಾಬು’ ಪತ್ತೆಹಚ್ಚಿದೆ. ಸಾಮಾನ್ಯವಾಗಿ ಸಂಶೋಧಕರಿಗೆ ಹೊಸ ಜಾತಿ ಕಪ್ಪೆಗಳು ಕಾಡಿನಲ್ಲಿ ಸಿಗುತ್ತವೆ. ಆದರೆ, ಇದೀಗ ಬೆಂಗಳೂರಿನಂತಹ ನಗರಗಳಲ್ಲೂ ಭಿನ್ನ ಮಾದರಿಯ ಅಪರೂಪದ ಕಪ್ಪೆ ಕಂಡು ಬಂದಿರುವುದು ವಿಶೇಷ.
Related Articles
Advertisement
ಡಾ.ದೀಪಕ್ ಉಭಯವಾಸಿಗಳ ಕುರಿತು ಪಿಎಚ್‌ಡಿ ವ್ಯಾಸಂಗ ಮಾಡಲು ಸಂಶೋಧಕ ಡಾ.ಕೆ.ಪಿ.ದಿನೇಶ್ ಅವರನ್ನು 2018ರಲ್ಲಿ ಸಂಪರ್ಕಿಸಿದ್ದರು. ಪಶ್ಚಿಮ ಘಟ್ಟಗಳಲ್ಲಿ ಸಾಕಷ್ಟು ಜಾತಿಯ ಕಪ್ಪೆಗಳನ್ನು ಪತ್ತೆಹಚ್ಚಿರುವ ದಿನೇಶ್ ಅವರು, ಬೆಂಗಳೂರಿನ ರಾಜನಕುಂಟೆ ಬಳಿ ಬಿಲಕಪ್ಪೆಗಳಲ್ಲಿ ಹೊಸ ಜಾತಿಯ ಕಪ್ಪೆ ಹುಡುಕುವ ಟಾಸ್ಕ್ ಅನ್ನು ಕೊಟ್ಟಿದ್ದರು. 2019ರಲ್ಲಿ ಬೂಡುಮನಹಳ್ಳಿ ಗ್ರಾಮದಲ್ಲಿ ಒಂದು ದಿನ ದೀಪಕ್ ಸಂಶೋಧನೆ ನಡೆಸುತ್ತಿದ್ದಾಗ ಜೋರಾಗಿ ಮಳೆ ಸುರಿದಿತ್ತು. ಇನ್ನೇನು ಹಿಂತಿರುಗಬೇಕು ಎನ್ನುವಷ್ಟರಲ್ಲಿ ಅಲ್ಲಿ ಭಿನ್ನ ಮಾದರಿಯ ಹತ್ತಾರು ಕಪ್ಪೆಗಳು ಏಕಾಏಕಿ ಬಿಲಗಳಿಂದ ಹೊರ ಬಂದಿರುವುದನ್ನು ದೀಪಕ್ ಗಮನಿಸಿದ್ದರು. ನಂತರ ಏಳೂ ಜನರ ತಂಡ ಜೈವಿಕ ತಂತ್ರಜ್ಞಾನ, ಆಕೃತಿ ವಿಜ್ಞಾನದ ಅಧ್ಯಯನ, ಜೈವಿಕ ಧ್ವನಿಶಾಸ್ತ್ರದ ಮಾದರಿ ಅನುಸರಿಸಿ ಈ ಹೊಸ ಪ್ರಭೇದವನ್ನು ಪತ್ತೆ ಹಚ್ಚಿದೆ. ವಿಜ್ಞಾನ ಪ್ರಯೋಗಾಲಯಗಳನ್ನು ಒಳಗೊಂಡ ಬಹು ಸಂಸ್ಥೆಗಳ ಸಹಯೋಗದಲ್ಲಿ ” ಸ್ಫೆರೋಥೆಕಾ ವರ್ಷಾಬು’ ಆವಿಷ್ಕರಿಸಲಾಗಿದೆ ಎಂಬ ರೋಚಕ ಸಂಗತಿಯನ್ನು ಸಂಶೋಧಕ ಡಾ.ಕೆ.ಪಿ.ದಿನೇಶ್ ಬಿಚ್ಚಿಟ್ಟಿದ್ದಾರೆ.
ಏಳು ಮಂದಿ ಸಂಶೋಧಕರು :
ಡಾ.ದೀಪಕ್, ಡಾ.ಕೆ.ಎಸ್.ಚೇತನ್‌ನಾಗ್, ಡಾ.ಕಾರ್ತಿಕ್ ಶಂಕರ್, ಡಾ.ಆಶಾದೇವಿ, ವಿಶಾಲ್ ಕುಮಾರ್ ಪ್ರಸಾದ್, ಡಾ. ಆನ್ನೆಮರಿ ಓಹ್ಲರ್, ಡಾ.ಕೆ.ಪಿ.ದಿನೇಶ್ ನೇತೃತ್ವದ ಸಂಶೋಧನಾ ತಂಡವು ” ಸ್ಫೆರೋಥೆಕಾ ವರ್ಷಾಬು’ ಬಿಲಕಪ್ಪೆಯನ್ನು ಜಗತ್ತಿಗೆ ಪರಿಚಯಿಸಿದೆ.
ಭಾರತದಲ್ಲಿ ಕಪ್ಪೆಗಳ ಮೇಲೆ ಸಂಶೋಧನೆಗಳು ಪ್ರಾರಂಭವಾಗಿ 220 ವರ್ಷಗಳು ಕಳೆದಿವೆ. ಅಷ್ಟು ವರ್ಷಗಳಲ್ಲಿ ಪತ್ತೆಯಾಗಿರುವ ಸಾವಿರಾರು ಹೊಸ ಪ್ರಬೇಧಗಳನ್ನು ಅಧ್ಯಯನ ನಡೆಸಿ ” ಸ್ಫೆರೋಥೆಕಾ ವರ್ಷಾಬು’ ಹೊಸ ಮಾದರಿಯ ಕಪ್ಪೆ ಎಂಬುದನ್ನು ದೃಢಪಡಿಸಿಕೊಳ್ಳಲು 2 ವರ್ಷಗಳೇ ಹಿಡಿಯಿತು.-ಡಾ.ಕೆ.ಪಿ.ದಿನೇಶ್, ಸಂಶೋಧಕ.
ಬಿಲಕಪ್ಪೆ ಜಾತಿಗೆ ಸೇರಿದ ಕಪ್ಪೆಗಳು ಶ್ರೀಲಂಕಾ, ದಕ್ಷಿಣ ಏಷಿಯಾದಲ್ಲಿ ಸಮಾನ್ಯವಾಗಿ ಕಾಣಸಿಗುತ್ತವೆ. ಈಗಾಗಲೇ ಭಾರತೀಯ ಪ್ರಾಣಿ ಸರ್ವೇಕ್ಷಣವು ಭಾರತದಲ್ಲಿ 454 ಪ್ರಭೇದಗಳನ್ನು ದಾಖಲಿಸಿದೆ. ” ಸ್ಫೆರೋಥೆಕಾ ವರ್ಷಾಬು’ ಸಂಶೋಧಿಸಿರುವುದು ಸಂತಸ ತಂದಿದೆ.-ಡಾ.ಪಿ.ದೀಪಕ್, ಸಂಶೋಧಕ.
ನಿರಂತರವಾಗಿ ಹುಡುಕಾಟ ನಡೆಸಿದರೆ ನಗರಗಳಲ್ಲಿ ಬಿಲ ಕಪ್ಪೆಗಳಲ್ಲೇ ಇನ್ನೂ ಹಲವು ಜಾತಿಯ ಕಪ್ಪೆಗಳು ಸಿಗಬಹುದು. ಪ್ರತಿ ವರ್ಷ ಮಾನ್ಸೂನ್ ಸಮಯಗಳಲ್ಲಿ ನಮ್ಮ ತಂಡವು ಹೊಸ ಮಾದರಿಯ ಕಪ್ಪೆಗಳ ಹುಡುಕಾಟದಲ್ಲಿ ನಿರತವಾಗುತ್ತದೆ.-ಡಾ.ಕೆ.ಎಸ್.ಚೇತನ್ ನಾಗ್, ಸಂಶೋಧಕ