Advertisement

ಬೆಂಗಳೂರು ಗೆಲ್ಲಲು ಮಿತ್ರರ ಕಾರ್ಯತಂತ್ರ

11:49 AM Mar 29, 2019 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆ ನಂತರ ಉಪ ಚುನಾವಣೆಯಲ್ಲಿ ಒಂದೇ ವೇದಿಕೆ ಹತ್ತಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ಲೋಕಸಭೆ ಚುನಾವಣಾ ಅಖಾಡಕ್ಕೂ ಒಟ್ಟಿಗೇ ಇಳಿದಿದ್ದಾರೆ.

Advertisement

ನಗರದ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ಜಂಟಿ ಸಭೆಯಲ್ಲಿ ಇಬ್ಬರೂ ಪಾಲ್ಗೊಂಡು, ಮೈತ್ರಿ ಬಗ್ಗೆ ಎರಡೂ ಪಕ್ಷಗಳ ಮುಖಂಡರು -ಕಾರ್ಯಕರ್ತರು ಸಣ್ಣಪುಟ್ಟ ವ್ಯತ್ಯಾಸಕ್ಕೂ ಅವಕಾಶವಿಲ್ಲದಂತೆ ಕೆಲಸ ಮಾಡಬೇಕು ಎಂಬ ಸಂದೇಶ ರವಾನಿಸಿದರು.

ಎಚ್‌.ಡಿ.ದೇವೇಗೌಡರು ಮಾತನಾಡಿ, ಮೈತ್ರಿ ವಿರುದ್ಧವಾಗಿ ಎರಡೂ ಪಕ್ಷಗಳ ಮುಖಂಡರು ಪಿಸು ಮಾತಿನಲ್ಲೂ ಮಾತನಾಡಬಾರದು. ಜೆಡಿಎಸ್‌ನಲ್ಲಿ ಯಾರಾದರೂ ಅಪಸ್ವರ ಎತ್ತಿದರೆ ಪಕ್ಷದಿಂದ ಹೊರಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕೃಷ್ಣ ಬೈರೇಗೌಡ ಜನಪರ ನಾಯಕ. ಆದರೆ, ಸದಾನಂದಗೌಡ ನಾಟಕಕಾರ. ನಗೋದು ಬಿಟ್ಟು ಬೇರೇನೂ ಮಾಡಿಲ್ಲ. ಈಬಾರಿ ನಮಗೆ ಗೆಲ್ಲುವ ಅವಕಾಶ ಹೆಚ್ಚಾಗಿದ್ದು, ಎರಡೂ ಪಕ್ಷಗಳ ನಾಯಕರು ಜತೆಗೂಡಿ ಕೆಲಸ ಮಾಡಿ ಎಂದು ಹೇಳಿದರು.

ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲಲಿದ್ದು, ಯಾವುದೇ ಸಂಶಯ ಬೇಡ. ಆದರೆ, ನಾವು ಮನೆ ಮನೆಗೆ ಹೋಗಿ ಬಿಜೆಪಿಯ ವೈಫ‌ಲ್ಯ ಹೇಳಬೇಕು ಎಂದು ತಿಳಿಸಿದರು.

Advertisement

ಕೃಷ್ಣ ಬೈರೇಗೌಡ ಮಾತನಾಡಿ, ನಾನು ನಿಮ್ಮ ಮುಂದೆ ಅಭ್ಯರ್ಥಿಯಾಗಿ ಬರಲು ದೇವೇಗೌಡರು ಪ್ರಮುಖ ಕಾರಣ. ಕಾಂಗ್ರೆಸ್‌ ನಾಯಕರೆಲ್ಲರೂ ಕೊಟ್ಟ ಸಲಹೆಗೆ ಗೌರವ ಕೊಟ್ಟು ಸ್ಪರ್ಧೆ ಮಾಡಿದ್ದೇನೆ. ಇಲ್ಲಿಂದ ದೇವೇಗೌಡರೇ ಸ್ಪರ್ಧಿಸಬೇಕು ಎಂಬ ಆಸೆ ನಮ್ಮದಾಗಿತ್ತು. ಅವರು ತುಮಕೂರು ಆಯ್ಕೆ ಮಾಡಿಕೊಂಡರು. ಹೀಗಾಗಿ, ನನಗೆ ಅವಕಾಶ ಸಿಕ್ಕಿದೆ ಎಂದು ಹೇಳಿದರು.

ಸಚಿವ ಜಮೀರ್‌ ಅಹಮದ್‌ ಮಾತನಾಡಿ, ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರು ಒಟ್ಟಾಗಿರುವುದು ನೋಡಿ ಸಂತೋಷವಾಗಿದೆ. ಬೆಂಗಳೂರಿನ ನಾಲ್ಕೂ ಸ್ಥಾನ ಗೆಲ್ಲುತ್ತೇವೆ. ತುಮಕೂರಿನಲ್ಲಿ ದೇವೇಗೌಡರು ಗೆಲ್ಲಲಿದ್ದಾರೆ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌, ಜೆಡಿಎಸ್‌ ಶಾಸಕರಾದ ಗೋಪಾಲಯ್ಯ, ಮಂಜುನಾಥ್‌, ಕಾಂಗ್ರೆಸ್‌ ಶಾಸಕ ಬೈರತಿ ಬಸವರಾಜ್‌ ಉಪಸ್ಥಿತರಿದ್ದರು.

ಏ.. ಜೆಡಿಎಸ್‌ ಯಾಕೆ ಎದ್ದು ಹೋಗ್ತಿಯ?: ಜಂಟಿ ಸಭೆಯಲ್ಲಿ ಜೆಡಿಎಸ್‌ನ ಕೆಲವು ಕಾರ್ಯಕರ್ತರು-ಮುಖಂಡರು ಸಭೆಯ ಮಧ್ಯೆ ಎದ್ದು ಹೋಗುತ್ತಿದ್ದರು. ಇದನ್ನು ಗಮನಿಸಿದ ಸಿದ್ದರಾಮಯ್ಯ, “ಹೇ ಎಲ್ಲರೂ ಕುಳಿತುಕೊಳ್ಳಿ. ಏ, ಜೆಡಿಎಸ್‌ ಯಾಕೆ ಎದ್ದು ಹೋಗುತ್ತೀಯ ಕೂತ್ಕೊ’ ಎಂದು ಗದರಿ ಕುಳ್ಳರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next