ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಸ್ನೇಹಿತನನ್ನೇ ಕೊಲೆಗೈದ ಆರೋಪಿಯನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸುಭಾಷ್‌ಲೇಔಟ್ ನಿವಾಸಿ ಮೊಹಮದ್ ಯಾಹಿಯಾ (35) ಅಲಿಯಾಸ್ ಮೂಸಾ ಕೊಲೆಯಾದವ. ಈ ಸಂಬಂಧ ಕೃತ್ಯವೆಸಗಿದ ಆರೋಪಿ ವಿನೋಬನಗರ ನಿವಾಸಿ ಜಫ್ರುಲ್ಲಾ ಖಾನ್(38) ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದರು.
ಮೊಹಮದ್ ಮತ್ತು ಜಫ್ರುಲ್ಲಾ ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರೂ ಹವಾನಿಯಂತ್ರಿತ ಯಂತ್ರಗಳನ್ನು ರಿಪೇರಿ ಮಾಡುವ ಮೆಕಾನಿಕ್‌ಗಳಾಗಿ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ಇಬ್ಬರು ಲಕ್ಷಾಂತರ ರೂ. ಬಂಡವಾಳ ಹೂಡಿ ರಿಪೇರಿ ಮಳಿಗೆ ತೆರೆದಿದ್ದರು. ಆದರೆ, ನಿರೀಕ್ಷಿತ ಲಾಭ ಸಿಗದೆ ಮಳಿಗೆ ಬಂದ್ ಮಾಡಿದ್ದರು. ಹೀಗಾಗಿ ಇಬ್ಬರ ನಡುವೆ ಜಗಳವಾಗಿದ್ದು, ಕಳೆದ ಆರು ವರ್ಷಗಳಿಂದ ಮಾತನಾಡುತ್ತಿರಲಿಲ್ಲ ಎಂದು ಪೊಲೀಸರು ಹೇಳಿದರು.
ನ.24ರಂದು ತಡರಾತ್ರಿ 12.30ರ ಸುಮಾರಿಗೆ ವಿನೋಬನಗರದ 10ನೇ ಅಡ್ಡರಸ್ತೆ ಬಳಿ ಮೊಹಮದ್ ಬೈಕ್‌ನಲ್ಲಿ ಹೋಗುತ್ತಿದ್ದ. ಇದೇ ವೇಳೆ ಬುಲೆಟ್‌ನಲ್ಲಿ ಬಂದ ಜಫ್ರುಲ್ಲಾ ಖಾನ್, ಮೊಹಮದ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಆಕ್ರೋಶಗೊಂಡ ಜಫ್ರುಲ್ಲಾ ಖಾನ್, ನಿನ್ನಿಂದಲೇ ವ್ಯವಹಾರದಲ್ಲಿ ಲಕ್ಷಾಂತರ ರೂ. ನಷ್ಟ ಹೊಂದಿರುವುದಾಗಿ ಆರೋಪಿ ಹಲ್ಲೆ ನಡೆಸಿದ್ದಾನೆ.
ಕತ್ತರಿಯಿಂದ ಕೊಲೆ: ಇಬ್ಬರ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಕೋಪಗೊಂಡ ಜಫ್ರುಲ್ಲಾ ಖಾನ್, ತನ್ನ ಬಳಿಯಿದ್ದ ಮೀಸೆ ಕತ್ತರಿಸುವ ಕತ್ತರಿಯಿಂದ ಮೊಹಮದ್‌ನ ಎದೆ ಮತ್ತು ಕುತ್ತಿಗೆ ಭಾಗಕ್ಕೆ ಬಲವಾಗಿ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಮೊಹಮದ್ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾನೆ. ಬಳಿಕ ಆರೋಪಿ ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೊಹಮದ್‌ನನ್ನು ಕಂಡ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.