ಉಳ್ಳಾಲ: ಸರ್ವಧರ್ಮದ ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಉಳ್ಳಾಲ, ಧರ್ಮಸ್ಥಳ ಮಾರ್ಗವಾಗಿ ಜಾವಗಲ್ ಗುಲ್ಬರ್ಗಕ್ಕೆ ತೆರಳುವ ಸೌಹಾರ್ದ ಸರಕಾರಿ ಬಸ್ ವ್ಯವಸ್ಥೆ ಆರಂಭಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು, ಈ ಕುರಿತು ಸರಕಾರದೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ಉಳ್ಳಾಲದಲ್ಲಿ ಸರ್ವಧರ್ಮದ ಧಾರ್ಮಿಕ ಕೇಂದ್ರಗಳಿದ್ದು, ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಧಾರ್ಮಿಕ ಕೇಂದ್ರಗಳೊಂದಿಗೆ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದು, ಉಳ್ಳಾಲಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಯಾತ್ರಾರ್ಥಿ ಗಳಿಗೆ ಇಲ್ಲಿನ ಧರ್ಮ ಕೇಂದ್ರಗಳನ್ನು ಸಂದರ್ಶಿಸುವ ನಿಟ್ಟಿನಲ್ಲಿ ಎಲ್ಲ ಧರ್ಮದ ಧಾರ್ಮಿಕ ಕೇಂದ್ರದ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿ ಚರ್ಚಿಸಲಾಗುವುದು. ಇದರೊಂದಿಗೆ ಪರವೂರಿನಿಂದ ಲಾರಿ, ಟೆಂಪೋಗಳ ಮೂಲಕ ಬರುವ ಪ್ರವಾಸಿಗರಿಗೆ ಪೂರಕವಾಗಿ ಉಳ್ಳಾಲ ದರ್ಗಾ, ಸಂತ ಸೆಬಾಸ್ತಿಯನ್ನರ ಚರ್ಚ್, ಧರ್ಮಸ್ಥಳ, ಮಾರ್ಗವಾಗಿ ಜಾವಗಲ್ ಸಂಪರ್ಕಿಸುವ ಸೌಹಾರ್ದ ಸರಕಾರಿ ಬಸ್‌ಗೆ ಆದ್ಯತ ನೀಡಲಾಗುವುದು ಎಂದರು.
Advertisement
ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಬಳಿ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಯಾತ್ರೀ ನಿವಾಸಕ್ಕೆ ರವಿವಾರ ಶಂಕುಸ್ಥಾಪನೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಗತ್ಯವಿದ್ದರೆ ಹೆಚ್ಚುವರಿ ಅನುದಾನ
ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾಕ್ಕೆ ಬರುವ ಯಾತ್ರಿಕರಿಗೆ ತಂಗಲು ಹೆಚ್ಚಿನ ಸೌಕರ್ಯದ ಅನಿವಾರ್ಯತೆಯನ್ನು ಅರಿತು ಪ್ರವಾಸೋಧ್ಯಮ ಇಲಾಖೆಯಿಂದ ಯಾತ್ರಿ ನಿವಾಸಕ್ಕೆ 75 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದ್ದು ಅಗತ್ಯವಿದ್ದರೆ ಮುಂದೆ ಮತ್ತೆ 75 ಲಕ್ಷ ರೂ. ಬಿಡುಗಡೆಗೊಳಿಸಲಾಗುವುದು
– ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವರು