Advertisement

ಗೆಳೆಯನ ನೆನೆದು ಗದ್ಗದಿತರಾದ ಬಿಎಸ್‌ವೈ

12:37 AM Sep 23, 2019 | Lakshmi GovindaRaju |

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಏರಲು ಹಾಗೂ ನಾನು ಈ ಸ್ಥಾನಕ್ಕೇರಲು ಅನಂತಕುಮಾರ್‌ ಅವರ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಆತ್ಮೀಯ ಗೆಳೆಯ, ದಿವಂಗತ ಅನಂತ ಕುಮಾರ್‌ ಅವರನ್ನು ನೆನೆದು ಗದ್ಗದಿತರಾದರು.

Advertisement

ದಿವಂಗತ ಅನಂತಕುಮಾರ್‌ ಅವರ 60ನೇ ಹುಟ್ಟುಹಬ್ಬದ ನಿಮಿತ್ತ ಜಯನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಮ್ಮ ಆತ್ಮೀಯ ಗೆಳೆಯನ್ನು ನೆನೆದು ಕೆಲಕಾಲ ಗದ್ಗದಿತರಾದರು. ಕಣ್ಣೀರು ಒರೆಸಿಕೊಳ್ಳುತ್ತಲೇ, “ಅನಂತಕುಮಾರ್‌ ಅವರ ಕನಸಿನ ಬೆಂಗಳೂರು ನಿರ್ಮಾಣಕ್ಕೆ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ’ ಎಂದು ಕರೆ ನೀಡಿದರು.

“ಜನಸಂಘದ ಕಾಲದಿಂದಲೂ ರಾಜ್ಯದಲ್ಲಿ ಪಕ್ಷ ಕಟ್ಟಲು ನಾವಿಬ್ಬರೂ ಒಟ್ಟೊಟ್ಟಿಗೆ ಶ್ರಮಿಸಿದ್ದೇವೆ. ಪಕ್ಷ ಸಂಘಟನೆಗಾಗಿ ನಿತ್ಯದ ಪ್ರವಾಸವನ್ನು ಜತೆ ಸೇರಿ ರೂಪಿಸುತ್ತಿದ್ದೆವು. ರಾಷ್ಟ್ರೀಯ ನಾಯಕರಾದ ಅಟಲ್‌ ಬಿಹಾರಿ ವಾಜಪೇಯಿ, ಲಾಲಕೃಷ್ಣ ಅಡ್ವಾನಿ ಮೊದಲಾದವರು ರಾಜ್ಯ ಪ್ರವಾಸ ಮಾಡಿದ ಸಂದರ್ಭದಲ್ಲಿ ಇಬ್ಬರೂ ಜತೆಯಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದೆವು. ನನ್ನ ನೆಚ್ಚಿನ ಗೆಳೆಯ ಹಾಗೂ ಒಡನಾಡಿ, ಕೇಂದ್ರ ಸಚಿವ ದಿವಂಗತ ಅನಂತಕುಮಾರ್‌ ಅವರ ಅನುಪಸ್ಥಿತಿ ರಾಜ್ಯದಲ್ಲಿ ಎದ್ದು ಕಾಣುತ್ತಿದೆ. ನಾನು ಈ ಸ್ಥಾನಕ್ಕೇರಲು ಅನಂತಕುಮಾರ್‌ ಅವರು ಕಾರಣ,’ ಎಂದು ಭಾವುಕರಾದರು.

“ಚೈತನ್ಯದ ಚಿಲುಮೆಯಂತಿದ್ದ ಅನಂತಕುಮಾರ್‌ ಅವರು ದೇಶ ಸೇವೆಯೆ ಈಶ ಸೇವೆ ಎಂಬಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ಇನ್ನೂ ಇರಬೇಕಿತ್ತು. ಅನಂತಕುಮಾರ್‌ ಅವರ ಜನಸೇವೆಯ ನಡೆಯಲ್ಲೇ ನಡೆಯುತ್ತಿರುವ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಅವರ ಕೊಡುಗೆ ಬಹುದೊಡ್ಡದು. ಅನಂತ ಕುಮಾರ್‌ ಅವರ ಕುರಿತಾಗಿ ಯಾವುದೇ ಕಾರ್ಯಕ್ರಮ ನಡೆಸುವುದಾದರೂ ನಮ್ಮ ಸಹಕಾರ ಇದ್ದೇ ಇರುತ್ತದೆ,’ ಎಂದು ಹೇಳಿದರು.

“ಅನಂತಕುಮಾರ್‌ ಅವರು ಕೇಂದ್ರದಲ್ಲಿ ಬಹಳ ವರ್ಷಗಳ ಕಾಲ ಸಚಿವರಾಗಿದ್ದವರು. ನನಗೆ ಕೇವಲ ಐದು ನಿಮಿಷದಲ್ಲಿ ಅದ್ಭುತವಾಗಿ ಭಾಷಣ ತಯಾರಿಸಿಕೊಡುತ್ತಿದ್ದರು. ಅನಂತ ಕುಮಾರ್‌ ಅವರ ನೆನಪಿನ ಶಕ್ತಿಗೆ ಸರಿ ಸಾಟಿಯೇ ಇರಲಿಲ್ಲ. ಅವರು ಬೆಂಗಳೂರಿನ ಅಭಿವೃದ್ಧಿಯ ಕನಸು ಕಂಡಿದ್ದರು. ಅದರಂತೆ ಅದನ್ನು ಸಾಕಾರಗೊಳಿಸುವ ನಿಟ್ಟಿಲ್ಲಿ ಗಮನ ಸರಿಸಲಾಗುತ್ತದೆ,’ ಎಂದರು.

Advertisement

ಹಿಂದಿ ಜ್ಞಾನ ಅದ್ಭುತ: “ಅನಂತಕುಮಾರ್‌ ಅವರ ಹಿಂದಿ ಭಾಷಾ ಜ್ಞಾನ ಅದ್ಭುತವಾಗಿತ್ತು. ದೆಹಲಿಯ ತಮ್ಮ ಮನೆಯಲ್ಲಿ ಅನಂತಕುಮಾರ್‌ ಒಬ್ಬರೇ ಇದ್ದಿದ್ದು ನಾನು ನೋಡಿಲ್ಲ. ಸದಾ ಒಂದಲ್ಲೊಂದು ನಿಯೋಗದೊಂದಿಗೆ ಅಥವಾ ವಿವಿಧ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದರು. ದೇಶದ, ಎಲ್ಲ ರಾಜ್ಯಗಳ ನಾಯಕರೊಂದಗೂ ಉತ್ತಮ ಸಂಬಂಧ ಹೊಂದಿದ್ದ ಅನಂತಕುಮಾರ್‌ ಅವರ ಆದರ್ಶ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ,’ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡಿ, ಅನಂತ ಕುಮಾರ್‌ ನನಗಿಂತ ಹಿರಿಯರು. ಆದರೆ, ಅವರು ಎಂದಿಗೂ ನಾನು ಹಿರಿಯವನು ಎಂದು ತೋರಿಸಿಕೊಳ್ಳದೇ ನನ್ನನ್ನು ಗೆಳೆಯನಂತೆ ಕಾಣುತ್ತಿದ್ದರು. ಸಂಘಟನೆ ಜವಾಬ್ದಾರಿಯಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಆಗಾಗ ಸೇರುತ್ತಿದ್ದೇವು. ಅವರ ಚಿಂತನೆಗಳು ತುಂಬಾ ಉದಾತ್ತವಾಗಿತ್ತು ಎಂದರು.

ಸಂಘಟನೆಗೆ ಪ್ರೇರಣೆ: ಪಕ್ಷ ಸಂಘಟನೆ, ಸಮಾಜ ಪರಿವರ್ತನೆ ವಿಚಾರದಲ್ಲಿ ಅವರು ಎಲ್ಲರಿಗೂ ಪ್ರೇರಣೆಯಾಗಿದ್ದರು. ಅಂತಹ ನಾಯಕನ ಜತೆಗೆ ಕೆಲಸ ಮಾಡುವ ಸೌಭಾಗ್ಯ ನಮಗೆ ಸಿಕ್ಕಿತ್ತು. ನಾನು ಮತ್ತು ಅನಂತ್‌ ವಿದ್ಯಾರ್ಥಿ ಪರಿಷತ್‌ನಿಂದಲೂ ಪರಿಚಯಸ್ಥರಾಗಿದ್ದೆವು. ಅನಂತಕುಮಾರ್‌ ಬಹಳ ಗಂಭೀರ ಕಾಯಿಲೆಗೆ ತುತ್ತಾಗಿ ನಮ್ಮನ್ನು ಇಷ್ಟು ಬೇಗ ಬಿಟ್ಟು ಹೋಗುತ್ತಾರೆ ಎಂದು ಕೊಂಡಿರಲಿಲ್ಲ.

ಅವರಿಗೆ ಅಷ್ಟು ಗಂಭೀರ ಕಾಯಿಲೆ ಇದ್ದರೂ ಅವರ ಮುಖದ ಚಹರೆಯಲ್ಲಿ ಅದು ಕಾಣುತ್ತಲೇ ಇರಲಿಲ್ಲ ಮತ್ತು ಅದನ್ನು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ ಎಂದು ಹೇಳಿದರು. ಅನಂತ ಕುಮಾರ್‌ ದೂರದೃಷ್ಟಿತ್ವ ಹೊಂದಿದ ನಾಯಕ ಮಾತ್ರವಲ್ಲ ದೂರದೃಷ್ಟಿತ್ವ ಹೊಂದಿದ್ದ ಸಮಾಜ ಸೇವಕರೂ ಆಗಿದ್ದರು. ಅವರ ಮಾರ್ಗದರ್ಶನ ಹಾಗೂ ಆದರ್ಶದಂತೆಯೇ ತೇಜಸ್ವಿನಿ ಅನಂತಕುಮಾರ್‌ ಅವರು ನಡೆಯುತ್ತಿದ್ದಾರೆ ಎಂದರು.

ಇದೇ ವೇಳೆ ಅನಂತಕುಮಾರ್‌ ಪ್ರತಿಷ್ಠಾನಕ್ಕೆ ಚಾಲನೆ ನೀಡಲಾಯಿತು. ಅನಂತಕುಮಾರ್‌ ಪತ್ನಿ ತೇಜಸ್ವಿನಿ, ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯ ಉಸ್ತುವಾರಿ ಪಿ.ಮುರಳೀಧರ ರಾವ್‌, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಜಗದೀಶ್‌ ಶೆಟ್ಟರ್‌, ವಿ. ಸೋಮಣ್ಣ, ಆರ್‌.ಅಶೋಕ್‌, ಸಿ.ಟಿ.ರವಿ, ಸಂಸದ ತೇಜಸ್ವಿ ಸೂರ್ಯ, ವೈದ್ಯ ಡಾ.ಶ್ರೀಧರ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಪ್ರೊ.ಪಿ.ವಿ.ಕೃಷ್ಣಭಟ್‌ ಇದ್ದರು.

ಅನಂತ್‌-ಬಿಎಸ್‌ವೈ ಬಿಜೆಪಿಯ ಜೋಡೆತ್ತು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಕಟ್ಟಿದ ಜೋಡೆತ್ತುಗಳೆಂದರೆ ಅನಂತಕುಮಾರ್‌ ಮತ್ತು ಬಿ.ಎಸ್‌.ಯಡಿಯೂರಪ್ಪ. ನಾನು ಅಚಾನಕ್‌ ಆಗಿ ರಾಜ್ಯದ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅನಂತಕುಮಾರ್‌ ಅವರ ಮನೆಗೆ ಹೋಗಿ ಸಲಹೆ ಕೇಳಿದ್ದೆ. ಸ್ಥಿತಿಪ್ರಜ್ಞರಾಗಿ ಕರ್ತವ್ಯ ನಿರ್ವಹಿಸಿದಾಗ ಎಲ್ಲವೂ ಚೆನ್ನಾಗಿ ನಡೆಯುತ್ತದೆ. ಹೀಗಾಗಿ ಸ್ಥಿತಪ್ರಜ್ಞೆಯನ್ನು ಕಾಪಾಡಿಕೊಳ್ಳಿ ಎಂದು ಮಾರ್ಗದರ್ಶನ ಮಾಡಿದ್ದರು. ನಗು ಮತ್ತು ಸಮಯ ಯಾವತ್ತೂ ಒಟ್ಟೊಟ್ಟಿಗೆ ಇರುವುದಿಲ್ಲ. ನಗುವಿನಲ್ಲಿ ಸಮಯ ಮರೆಯುತ್ತೇವೆ. ಕೆಲವೊಮ್ಮೆ ಸಮಯ ನಗುವನ್ನು ಮರೆಸುತ್ತದೆ. ಆದರೆ, ಅನಂತಕುಮಾರ್‌ ಅವರು ನಗು ಮತ್ತು ಸಮಯದ ಸಮಾತೋಲನ ಕಾಯ್ದುಕೊಂಡಿದ್ದರು ಎಂದು ಬಣ್ಣಿಸಿದರು.

ಇವರಿಬ್ಬರನ್ನೂ ಹೇಗೆ ನಿಭಾಯಿಸುತ್ತೀರಿ?: “ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಬಿ.ಎಸ್‌.ಯಡಿಯೂರಪ್ಪ ಮತ್ತು ಅನಂತ ಕುಮಾರ್‌ ಅವರನ್ನು ಒಟ್ಟೊಟ್ಟಿಗೆ ಕರೆದುಕೊಂಡು ಹೋಗಬೇಕಿತ್ತು. ಒಮ್ಮೆ ಪ್ರಮುಖ ವಿಷಯವೊಂದರ ನಿರ್ಧಾರಕ್ಕಾಗಿ ನಾವೆಲ್ಲರೂ ದೆಹಲಿಗೆ ಹೋಗಿದ್ದೆವು. ಅಲ್ಲಿ ಅಡ್ವಾಣಿಯವರು, ಇವರಿಬ್ಬರನ್ನೂ ಹೇಗೆ ನಿಭಾಯಿಸುತ್ತೀರಿ ಎಂದು ಕೇಳಿದ್ದರು. ಆಗ, “ಇವರಿಬ್ಬರೂ ಗಾಳಿ ಮತ್ತು ಬೆಂಕಿ ಇದ್ದಂತೆ- ಸದಾ ಸ್ವಲ್ಪ ಅಂತರ ಕಾಯ್ದುಕೊಳ್ಳುವಂತೆ ನೋಡುತ್ತಿದ್ದೆ’ ಎಂದು ಹೇಳಿದ್ದೆ. ಆಗ, ಅನಂತಕುಮಾರ್‌ ಪ್ರತಿಕ್ರಿಯಿಸಿ “ಬುಡಕ್ಕೆ ಕತ್ತಿ ಇಡುತ್ತಿಯಾ?’ ಎಂದು ಹಾಸ್ಯ ಮಾಡಿದ್ದರು’ ಎಂದು ಸಚಿವ ಸದಾನಂದ ಗೌಡ ನೆನಪಿಸಿಕೊಂಡರು.

ರಾಸಾಯನಿಕ ರಸಗೊಬ್ಬರ ಇಲಾಖೆಯಿಂದ ರಾಜ್ಯದಲ್ಲಿ ಸಿಪೆಟ್‌ ಸಂಸ್ಥೆಯ ಮೂಲಕ ಆರಂಭಿಸುತ್ತಿರುವ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರಕ್ಕೆ ಅನಂತಕುಮಾರ್‌ ಹೆಸರಿಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಜನೌಷಧ ಹಾಗೂ ರಾಸಾಯನಿಕ ರಸಗೊಬ್ಬರ ಇಲಾಖೆಗೆ ಅನಂತಕುಮಾರ್‌ ಅವರು ಕೊಡುಗೆ ಅಪಾರವಾಗಿದೆ. ಇಲಾಖೆಯಲ್ಲಿ ಅವರ ಹೆಸರು ಚಿರಾಯುವಾಗಿರುವಂತೆ ಮಾಡುತ್ತೇವೆ.
-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next