Advertisement

ಮೃತದೇಹ ಕಾಪಿಡಲು “ಫ್ರಿಡ್ಜರ್‌’ಉಚಿತ ಸೇವೆ

05:56 PM Feb 08, 2022 | Team Udayavani |

ಕುಂದಾಪುರ: ಯಾವುದೋ ಕಾರಣದಿಂದ ಮೃತದೇಹಕ್ಕೆ ಆ ಕ್ಷಣ ಅಂತ್ಯಸಂಸ್ಕಾರ ನೆರವೇರಿಸಲು ಸಾಧ್ಯವಾಗದಿದ್ದರೆ, ಅದನ್ನು ಕಾಪಿಡುವ ಫ್ರಿಡ್ಜರ್‌ಗಳು ಈಗ ದುಬಾರಿಯಾಗಿದ್ದು, ಇದು ಬಡ ಜನರಿಗೆ ಕೈಗೆಟುಕದಂತಾಗಿದೆ. ಅದಕ್ಕಾಗಿಯೇ ಕುಂದಾಪುರದ ಯುವಕರ ತಂಡವೊಂದು ಮೃತದೇಹವನ್ನು ಕಾಪಿಡುವ ಫ್ರಿಡ್ಜರನ್ನು ಮೋಕ್ಷ ಎನ್ನುವ ಹೆಸರಲ್ಲಿ ಉಚಿತವಾಗಿ ಒದಗಿಸಲು ಮುಂದಾಗಿದೆ.

Advertisement

ವೃತ್ತಿಯಲ್ಲಿ ಪಿಕಪ್‌ ಚಾಲಕರಾಗಿರುವ ಸೂರಿ (ಸುರೇಂದ್ರ) ಕುಂದಾಪುರ ನೇತೃತ್ವದ ಸುಮಾರು 15-17 ಮಂದಿಯ ಯುವಕರ ತಂಡವು ಈ ಪುಣ್ಯದ ಕಾರ್ಯಕ್ಕೆ ಮುಂದಾಗಿದೆ.

ಏನಿದು ಮೋಕ್ಷ?
ಸೂರಿ ಹಾಗೂ ಅವರ ಸ್ನೇಹಿತರ ತಂಡವು “ಮೋಕ್ಷ’ ಅನ್ನುವ ಹೆಸರಲ್ಲಿ ಮೃತದೇಹವನ್ನು ಹೆಚ್ಚಿನ ಸಮಯದವರೆಗೆ ಹದಗೆಡದಂತೆ ಕಾಪಿಡಲು ಫ್ರಿಡ್ಜರ್‌ ಅನ್ನು ಉಚಿತವಾಗಿ ಒದಗಿಸುವ ಕೈಂಕರ್ಯ ಕೈಗೊಂಡಿದ್ದಾರೆ. ಪಿಕಪ್‌ ಚಾಲಕರಾಗಿರುವ ಸೂರಿ ಅವರು ಈವರೆಗೆ 174 ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸುವಲ್ಲಿ ಸಹಕರಿಸಿದ್ದಾರೆ. ಕೊರೊನಾ ಸಮಯದಲ್ಲಿ ಒಂದು ಮನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಅಂತ್ಯಸಂಸ್ಕಾರ ಅದೇ ದಿನ ನೆರವೇರಿಸಲು ಸಾಧ್ಯ ವಾಗಿರಲಿಲ್ಲ. ಅವರಿಗೆ ಸಕಾಲದಲ್ಲಿ ಮೃತದೇಹ ಇಡಲು ಫ್ರಿಡ್ಜರ್‌ ಸಿಗಲಿಲ್ಲ. 24 ಗಂಟೆಗಳ ಕಾಲ ಆ ಮೃತದೇಹವನ್ನು ಮನೆಯಲ್ಲಿಯೇ ಇಡುವಂತಾಗಿತ್ತು. ಇದನ್ನು ನೋಡಿ ನೊಂದ ಸೂರಿ ಅವರು ಅವರ ಕುಂದಾಪುರ, ಸಾಸ್ತಾನ ಹಾಗೂ ಬೆಂಗಳೂರಿನಲ್ಲಿರುವ ಸ್ನೇಹಿತರೆಲ್ಲರ ಸಹಕಾರದಿಂದ ಈ ಫ್ರಿಡ್ಜರ್‌ ಅನ್ನು ಉಚಿತವಾಗಿ ನೀಡಲು ಯೋಚನೆ ಮಾಡಿದರು. ಅದೀಗ ಕಾರ್ಯರೂಪಕ್ಕೆ ಬಂದಿದೆ.

ಕುಂದಾಪುರದಿಂದ ಸುಮಾರು 10 ಕಿ.ಮೀ.ವರೆಗೆ ಈ ಫ್ರಿಡ್ಜರ್‌ ಅನ್ನು ಉಚಿತವಾಗಿ ಸಾಗಾಟ ಮಾಡಲು ಸಹ ವಾಹನದ ವ್ಯವಸ್ಥೆಯನ್ನು ಈ ತಂಡವೇ ಮಾಡಿಕೊಡುತ್ತದೆ. ಅದಕ್ಕಿಂತ ದೂರವಿದ್ದರೆ, ಅದರ ಬಾಡಿಗೆ ವೆಚ್ಚವನ್ನು ಅಗತ್ಯವಿರುವವರೇ ಭರಿಸಬೇಕು. ಅಗತ್ಯವಿರುವವರು 9448501935 ಹಾಗೂ 9986720146 ಈ ಮೊಬೈಲ್‌ ನಂಬರ್‌ಗಳನ್ನು ಸಂಪರ್ಕಿಸಬಹುದು.

ಅಂತ್ಯಸಂಸ್ಕಾರ ತಡವಾಗಬಾರದು
ಮೃತಪಟ್ಟವರಿಗೆ ಸದ್ಗತಿ ಸಿಗಬೇಕಾದರೆ ಅಂತ್ಯಸಂಸ್ಕಾರವನ್ನು ಸರಿಯಾದ ರೀತಿಯಲ್ಲಿ ಮಾಡಬೇಕು. ಕೆಲವೊಮ್ಮೆ ಅಂತ್ಯಸಂಸ್ಕಾರ ತಡವಾಗಿ ಆಗುವುದರಿಂದ ಆ ವೇಳೆ ನೊಂದ ಮನೆಯವರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ನಾವು ಈ ಮೋಕ್ಷ ಎನ್ನುವ ಹೆಸರಲ್ಲಿ ಫ್ರಿಡ್ಜರನ್ನು ಉಚಿತವಾಗಿ ಒದಗಿಸಲು ಮುಂದಾಗಿದ್ದೇವೆ. ಅನೇಕ ಮಂದಿ ಸ್ನೇಹಿತರು ನನ್ನೊಂದಿಗೆ ಕೈಜೋಡಿಸಿದ್ದಾರೆ.
– ಸೂರಿ ಕುಂದಾಪುರ,
ಈ ತಂಡದ ನೇತೃತ್ವ ವಹಿಸಿದವರು

Advertisement

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next