ನವದೆಹಲಿ: ಸರ್ಕಾರದ ಒಪ್ಪಿಗೆ ಇಲ್ಲದೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ (MCD)ಗೆ ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಹೊಂದಿರುವುದಾಗಿ ಸುಪ್ರೀಂಕೋರ್ಟ್ ಸೋಮವಾರ (ಆಗಸ್ಟ್ 05) ಸ್ಪಷ್ಟಪಡಿಸಿದ್ದು, ಇದರೊಂದಿಗೆ ಆಡಳಿತರೂಢ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾದಂತಾಗಿದೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಕಾಯ್ದೆ ಪ್ರಕಾರ ಲೆಫ್ಟಿನೆಂಟ್ ಗವರ್ನರ್ ಈ ಅಧಿಕಾರವನ್ನು ಹೊಂದಿದ್ದಾರೆ. ಕಾಯ್ದೆ ಅನ್ವಯ ದೆಹಲಿ ಲೆ. ಗವರ್ನರ್ ದೆಹಲಿ ಸರ್ಕಾರದ ಸಲಹೆಯನ್ನು ಅನುಸರಿಸಬೇಕಾದ ಅಗತ್ಯವಿಲ್ಲ. ಇದೊಂದು ಶಾಸನಬದ್ಧ ಅಧಿಕಾರವಾಗಿದೆ. ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಸರ್ಕಾರದ ಸಲಹೆಯನ್ನು ಅನುಸರಿಸಬೇಕೆಂಬುದು ಕಡ್ಡಾಯವಲ್ಲ ಎಂದು ಹೇಳಿದೆ.
“ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರದ್ದು ಲಾಟರಿಯ ಅಧಿಕಾರ ಎಂದು ಗ್ರಹಿಸುವುದು ತಪ್ಪಾಗುತ್ತದೆ. ಸಂಸತ್ ಈ ಕಾನೂನನ್ನು ರೂಪಿಸಿದೆ. ಕಾನೂನಿನ ಪ್ರಕಾರ ಲೆಫ್ಟಿನೆಂಟ್ ಗವರ್ನರ್ ಅವರು ಅಧಿಕಾರವನ್ನು ಬಳಸುವುದು ಅವರ ವಿವೇಚನೆಗೆ ಬಿಟ್ಟಿದ್ದು, ಇದು ಕಲಂ 239ರ ಅಡಿ ವಿನಾಯ್ತಿ ಹೊಂದಿದೆ. ಇದು 1993ರ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಕಾಯ್ದೆಯಲ್ಲಿ ಸದಸ್ಯರ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್ ಗೆ ನೀಡಿದೆ ಎಂದು ಸುಪ್ರೀಂಕೋರ್ಟ್ ವಿವರಿಸಿದೆ.
ಸುಪ್ರೀಂಕೋರ್ಟ್ ಸಿಜೆಐ ಚಂದ್ರಚೂಡ್, ಜಸ್ಟೀಸ್ ಪಿಎಸ್ ನರಸಿಂಹ, ಜಸ್ಟೀಸ್ ಜೆಬಿ ಪರ್ಡಿವಾಲಾ ಅವರನ್ನೊಳಗೊಂಡ ಪೀಠವು 2023ರ ಮೇ 17ರಂದು ತೀರ್ಪನ್ನು ಕಾಯ್ದಿರಿಸಿತ್ತು. ದೆಹಲಿ ಸರ್ಕಾರದ ಸಲಹೆ ಪಡೆಯದೇ ಅಂದಿನ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ದೆಹಲಿ ಮಹಾನಗರ ಪಾಲಿಕೆಗೆ ಸದಸ್ಯರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು.