Advertisement
ಕಂಠೀರವ ಕ್ರೀಡಾಂಗಣದಲ್ಲಿ ಡಿ.11ರವರೆಗೆ ನಡೆಯಲಿರುವ ಮತ್ಸ್ಯ ಮೇಳಕ್ಕೆ ಶುಕ್ರವಾರ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು. ಮತ್ಸ್ಯಮೇಳದಲ್ಲಿ ಮೀನುಗಾರಿಕೆ ಇಲಾಖೆಯ ಇತಿಹಾಸ, ಸಮುದ್ರ ಮೀನುಗಾರಿಕೆ, ಕೆರೆ ಮೀನುಗಾರಿಕೆ, ಮೀನು ಹಿಡಿಯುವ ಬಲೆ, ಸಮುದ್ರದಿಂದ ಹಿಡಿದು ತಂದಿರುವ ಬೃಹಧಾಕಾರದ ಮೀನುಗಳು, ಮೀನಿನ ಬಿಸಿ ಬಿಸಿ ಖಾದ್ಯಗಳ ಜತೆಗೆ ಅಕ್ವೇರಿಯಂ ಒಳಗೆ ಮದುವಣಗಿತ್ತಿಯಂತಿರುವ ಬಣ್ಣ ಬಣ್ಣದ ಮೀನುಗಳ ಪ್ರದರ್ಶನ ನೋಡುಗರನ್ನು ಸೆಳೆಯುತ್ತಿದೆ.
Related Articles
Advertisement
ಇತಿಹಾಸ ದರ್ಶನ: ಮೀನುಗಾರಿಕೆ ಇಲಾಖೆಯ 60 ವರ್ಷದ ಇತಿಹಾಸವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಮೇಳದಲ್ಲಿ ಇಲಾಖೆಯ ಸಾಧನೆಯ ಪಟ್ಟಿಯ ಜತೆಗೆ ಸಾಂಪ್ರದಾಯಿಕ ಮೀನುಗಾರಿಕೆಯಿಂದ ಆಧುನಿಕ ಮೀನುಗಾರಿಕೆವರೆಗೆ ಕೆಲವು ಮಜಲುಗಳ ಪ್ರದರ್ಶನವಿದೆ. ಇದದೊಂದಿಗೆ ವಿವಿಧ ಮಳಿಗೆಗಳಲ್ಲಿ ಕೆರೆ ಮೀನಿನ ಸಾಕಣೆ ಮಾಹಿತಿ, ಮೀನ ಆಹಾರ, ಮೀನುಗಾರಿಕೆಯ ಉಪಕರಣಗಳು, ಅಕ್ವೇರಿಯಂ, ಮೀನಿನ ಆಹಾರ ಮಾರಾಟವೂ ನಡೆಯುತ್ತಿದೆ.
ಮೀನಿನ ಖಾದ್ಯ: ಮತ್ಸ್ಯ ಮೇಳದಲ್ಲಿ ಮೀನಿನ ಖಾದ್ಯ ಕೂಡ ಪ್ರಮುಖ ಆಕರ್ಷಣೆ. 10 ಮಳಿಗೆಗಳಲ್ಲಿ ತಾಜಾ ಮೀನಿನ ಕಬಾಬ್, ಅಂಜಲ್, ಕಾಣೆ, ಬಂಗುಡೆ, ಮಾಂಜಿ ಮೊದಲಾದ ಮೀನಿನ ಫ್ರೈ, ಬಿರಿಯಾನಿ, ಮೀನಿನ ಸುಕ್ಕ ಹೀಗೆ ಹತ್ತಾರು ಬಗೆಯ ಮೀನು ಖಾದ್ಯ ಎಲ್ಲರ ಗಮನ ಸೆಳೆದಿದೆ. ಮೇಳಕ್ಕೆ ಬಂದವರಲ್ಲಿ ಬಹುತೇಕರು ಮೀನಿನ ರುಚಿ ನೋಡಿದ್ದಾರೆ. ಒಂದು ಪ್ಲೇಟ್ ಕಬಾಬ್‌ಗ 80 ರಿಂದ 120 ರೂ. ದರ ನಿಗದಿ ಮಾಡಿದ್ದಾರೆ. ಕಾಣೆ, ಅಂಜಲ್, ಮಾಂಜಿ ಮತ್ತು ಬಂಗುಡೆ ಫ್ರೈಗೆ 150ರಿಂದ 180 ರೂ. ಬೆಲೆ ಇದೆ. ಮೀನಿನ ಖಾದ್ಯ ತುಸು ತುಟ್ಟಿಯಾದರೂ, ವ್ಯಾಪಾರ ಜೋರಾಗಿತ್ತು.
ಉದ್ಯೋಗಕ್ಕಾಗಿ ಕುಂದಾಪುರದಿಂದ ಬೆಂಗಳೂರಿಗೆ ಬಂದಿದ್ದೇನೆ. ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಮತ್ಸ್ಯಮೇಳ ಕುರಿತ ಮಾಹಿತಿ ಓದಿ ಇಲ್ಲಿಗೆ ಆಗಮಿಸಿದ್ದೇನೆ. ಮೀನುಗಾರಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಮೀನಿನ ಕಬಾಬ್, ಫ್ರೈ ನೋಡಿದ ಮೇಲೆ ತಿನ್ನಲೇಬೇಕು ಎನಿಸಿತು. ಸ್ವಲ್ಪ ದುಬಾರಿಯಾದರೂ ರುಚಿ ಚೆನ್ನಾಗಿದೆ.-ದಿನೇಶ್, ಖಾಸಗಿ ಸಂಸ್ಥೆ ಉದ್ಯೋಗಿ ಹಸಿ ಮೀನು ಮಾರುಕಟ್ಟೆ ಅಭಿವೃದ್ಧಿಗೆ ಚಿಂತನೆ: ರಾಜಧಾನಿಯಲ್ಲಿ ಸಮುದ್ರದ ಮೀನಿನ ಬಳಕೆ ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರಿನ ಹಸಿಮೀನು ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವ ಚಿಂತನೆ ನಡೆಯುತ್ತಿದೆ ಎಂದು ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಮತ್ಸ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಶೇ.25ರಷ್ಟು ಜನ ರಾಜಧಾನಿಯಲ್ಲಿದ್ದಾರೆ. ಬೆಂಗಳೂರಿನ ಜನತೆ ಸಮುದ್ರ ಮೀನನ್ನು ಆಹಾರಕ್ಕಾಗಿ ಬಳಸಿಕೊಂಡರೆ, ರಾಜ್ಯದ ಮೀನುಗಳನ್ನು ವಿದೇಶ ಹಾಗೂ ಹೊರರಾಜ್ಯಕ್ಕೆ ರಫ್ತು ಮಾಡುವ ಅಗತ್ಯವೇ ಇರುವುದಿಲ್ಲ. ಸಮುದ್ರದ ಮೀನಿನ ಬಳಕೆ ಹೆಚ್ಚಿಸುವ ಉದ್ದೇಶದಿಂದ ಮೇಳದ ಮೂಲಕ ಸೂಕ್ತ ಮಾಹಿತಿ ನೀಡಲಿದ್ದೇವೆ. ಹಾಗೇ ಬೆಂಗಳೂರಿನಲ್ಲಿ ಹಸಿ ಮೀನಿನ ಮಾರುಕಟ್ಟೆ ಇರುವ ಬಗ್ಗೆ ಜನರಿಗೆ ಮಾಹಿತಿ ಇಲ್ಲ. ಹೀಗಾಗಿ ಹಸಿಮೀನು ಮಾರುಕಟ್ಟೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದರು. ಚುರುಕಾಗಿಸುವ ಆಹಾರ: ಮೀನನ್ನು ಆಹಾರವಾಗಿ ಬಳಸುವವರ ಮೆದುಳು ಚುರುಕಾಗಿರುತ್ತದೆ ಮತ್ತು ಅವರಿಗೆ ಹೃದ್ರೋಗದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ತರಕಾರಿ, ಹಣ್ಣು ಮತ್ತು ಕೋಳಿ, ಕುರಿ ಮಾಂಸಕ್ಕೆ ರಾಸಾಯನಿಕ ಬಳಸುವ ಸಾಧ್ಯತೆ ಇದೆ. ಎಷ್ಟು ತೊಳೆದರೂ ಶುದ್ಧವಾಗುವುದಿಲ್ಲ. ರಾಸಾಯನಿಕ ಬಳಸಿ ಸಿದ್ಧಪಡಿಸಿದ ಆಹಾರ ಪದಾರ್ಥದಿಂದ ಕ್ಯಾನರ್ ಮೊದಲಾದ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮಾಂಸದಲ್ಲಿ ಕೊಬ್ಬಿನ ಅಂಶ ಹೆಚ್ಚಿದೆ. ಆದರೆ ಮೀನು ತಿನ್ನುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ವಿವರಿಸಿದರು. ಲಾಭ ತರುವ ಟ್ಯಾಂಕ್ ಮೀನುಗಾರಿಕೆ: ಆಧುನಿಕ ತಂತ್ರಜ್ಞಾನ ವಿಸ್ತರಣೆಯಾದಂತೆ ಮೀನುಗಾರಿಕೆಯ ಆಯಾಮಗಳು ವಿಸ್ತರಣೆಯಾಗುತ್ತಾ ಸಾಗಿವೆ. ಇತ್ತೀಚಿನ ವರ್ಷಗಳಲ್ಲಿ ಕೆರೆ ಮೀನುಗಾರಿಕೆಯ ಜತೆಗೆ ಟ್ಯಾಂಕ್‌ನಲ್ಲಿ ಮೀನು ಸಾಕುವುದು ಆದಾಯದ ಮೂಲವಾಗಿದೆ. ಮೀನಿನ ಟ್ಯಾಂಕ್‌ನ ರಚನೆ, ಮೀನಿನ ಆರೈಕೆ ಎಲ್ಲ ಮಾಹಿತಿಯನ್ನು ಮತ್ಸ್ಯ ಮೇಳದಲ್ಲಿ ಪಡೆಯಬಹುದು. ನೀರಿನ ಮೂಲ ಚೆನ್ನಾಗಿದ್ದಲ್ಲಿ ಮೀನಿನ ಟ್ಯಾಂಕ್ ರಚನೆ ಮಾಡಿಕೊಂಡು, ಮೀನು ಸಾಕಬಹುದು. “ಈ ಟ್ಯಾಂಕ್ ಅನ್ನು ಒಂದೆಡೆಯಿಂದ ಇನ್ನೊಂದು ಕಡೆಗೆ ಕೊಂಡೊಯ್ಯಲೂ ಬಹುದು. ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ ಟ್ಯಾಂಕ್ ಮೀನುಗಾರಿಕೆಯಲ್ಲಿ ಖರ್ಚು ಕಡಿಮೆ ಮತ್ತು ಹೆಚ್ಚು ಆದಾಯ ಪಡೆಯಬಹುದು,’ ಎಂದು ಟ್ಯಾಂಕ್ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಶ್ಯಾಮ್ ಅಯ್ಯಪ್ಪ ಮಾಹಿತಿ ನೀಡಿದರು. ಅಕ್ವೇರಿಯಂ ಆಕರ್ಷಣೆ: ಮೇಳದಲ್ಲಿ ಸುಮಾರು 25 ಅಕ್ವೇರಿಯಂಗಳಲ್ಲಿ ಬಣ್ಣ ಬಣ್ಣದ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಒಳಗೆ ಪ್ರವೇಶಿಸುತ್ತಿದ್ದಂತೆ ಅಲಂಕಾರಿಕ ಮೀನುಗಳ ಅಕ್ವೇರಿಯಂಗಳು ನೋಟುಗರನ್ನು ಆಕರ್ಷಿಸುತ್ತವೆ. ಮೀನಿನ ಚಲನೆ, ನರ್ತನ ನೋಡುವುದಕ್ಕೆ ಆನಂದವಾಗಿರುತ್ತದೆ. ಆದರೆ ಮೇಳದಲ್ಲಿ ಈ ಅಕ್ವೇರಿಯಂಗಳು ಹಾಗೂ ಅದರಲ್ಲಿನ ಮೀನುಗಳ ಬಗ್ಗೆ ಮಾಹಿತಿ ನೀಡುವವರಿಲ್ಲ ಹಾಗೂ ಮೀನನ ಹೆಸರುಗಳನ್ನು ಬರೆದು, ಅಕ್ವೇರಿಯಂಗಳಿಗೆ ಅಂಟಿಸಿಲ್ಲ. ಆದರೂ, ಮೇಳಕ್ಕೆ ಬಂದವರು ಬಣ್ಣ ಬಣ್ಣದ ಮೀನಿನ ಎದುರು ನಿಂತು ಫೋಟೋ, ಸೆಲ್ಪಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.