ಪ್ಯಾರಿಸ್: ಫ್ರೆಂಚ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿ “ಆಲ್ ಇಂಡಿಯನ್’ ಹಣಾಹಣಿಯೊಂದರ ಕ್ಷಣಗಣನೆಯಲ್ಲಿದೆ. ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಕೆ. ಶ್ರೀಕಾಂತ್ ಮತ್ತು ಎಚ್.ಎಸ್. ಪ್ರಣಯ್ ಪರಸ್ಪರ ಎದುರಾಗಲಿರುವುದರಿಂದ ಕುತೂಹಲ ಗರಿಗೆದರಿದೆ. ಇನ್ನೊಂದೆಡೆ ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಕೂಡ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ್ದಾರೆ.
ಕ್ವಾರ್ಟರ್ ಫೈನಲ್‌ನಲ್ಲಿ ಎಚ್.ಎಸ್. ಪ್ರಣಯ್ 21-16, 21-16 ನೇರ ಗೇಮ್‌ಗಳಿಂದ ದಕ್ಷಿಣ ಕೊರಿಯಾದ ಜಿಯೋನ್ ಹಿಯೋಕ್ ಅವರಿಗೆ ಸೋಲುಣಿಸಿದರು. ಕೆ. ಶ್ರೀಕಾಂತ್ ಮೊದಲ ಸೆಟ್ ಕಳೆದುಕೊಂಡೂ ಚೀನದ 4ನೇ ಶ್ರೇಯಾಂಕಿತ ಆಟಗಾರ ಶಿ ಯುಕಿ ವಿರುದ್ಧ 8-21, 21-19, 21-9 ಅಂತರದ ರೋಮಾಂಚಕ ಜಯ ಸಾಧಿಸುವಲ್ಲಿ ಯಶಸ್ವಿಯಾದರು. ಪಿ.ವಿ. ಸಿಂಧು ಚೀನದ ಉದಯೋನ್ಮುಖ ಆಟಗಾರ್ತಿ ಚೆನ್ ಯುಫಿ ಅವರನ್ನು 21-14, 21-14ರಿಂದ ಹಿಂದಿಕ್ಕಿದರು.
ಹಿಯೋಕ್ ವಿರುದ್ಧ ಎಚ್.ಎಸ್. ಪ್ರಣಯ್ ಆಗಾಗ ಒತ್ತಡವನ್ನು ಎದುರಿಸುತ್ತ ಬಂದರೂ ಇದನ್ನೆಲ್ಲ ಮೆಟ್ಟಿನಿಂತು ಕೇವಲ 47 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಕಳೆದ ವಾರವಷ್ಟೇ ಡೆನ್ಮಾರ್ಕ್ ಓಪನ್ ಪ್ರಶಸ್ತಿ ಗೆದ್ದಿದ್ದ ಶ್ರೀಕಾಂತ್ ಮೊದಲ ಗೇಮ್ ವೇಳೆ ಸಂಪೂರ್ಣವಾಗಿ ಲಯ ಕಳೆದುಕೊಂಡಿದ್ದರು. ಆದರೆ ಅಷ್ಟೇ ಬೇಗ ತಿರುಗಿ ಬಿದ್ದು ಚೀನೀ ಆಟಗಾರನನ್ನು ಸುಲಭದಲ್ಲಿ ಹಿಂದಿಕ್ಕಿದರು.
ಪಿ.ವಿ. ಸಿಂಧು ವಿಶ್ವದ 10ನೇ ರ್‍ಯಾಂಕಿಂಗ್‌ನ ಚೆನ್ ಯುಫಿ ವಿರುದ್ಧ ಪ್ರಭುತ್ವ ಸಾಧಿಸುತ್ತಲೇ ಹೋದರು. ಕೇವಲ 42 ನಿಮಿಷದಲ್ಲಿ ಜಯ ಒಲಿಸಿಕೊಂಡರು. ಸುಂಗ್ ಜು ಹ್ಯುನ್-ಅಕಾನೆ ಯಮಾಗುಚಿ ನಡುವಿನ ವಿಜೇತರನ್ನು ಸಿಂಧು ಸೆಮಿಫೈನಲ್‌ನಲ್ಲಿ ಎದುರಿಸಲಿದ್ದಾರೆ. ಅಕಾನೆ ಯಮಾಗುಚಿ ದ್ವಿತೀಯ ಸುತ್ತಿನಲ್ಲಿ ಸೈನಾ ನೆಹ್ವಾಲ್‌ಗೆ ಸೋಲುಣಿಸಿದ್ದರು.
ಡಬಲ್ಸ್‌ನಲ್ಲಿ ಸೋಲು
ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ. ಇವರನ್ನು ವಿಶ್ವದ ಅಗ್ರ ರ್‍ಯಾಂಕಿಂಗ್ ಜೋಡಿ, ಡೆನ್ಮಾರ್ಕ್‌ನ ಮಥಿಯಾಸ್ ಬೊ-ಕಾರ್ಸ್ಟನ್ ಮೊಗೆನ್ಸೆನ್ 21-5, 17-21, 21-17 ಅಂಕಗಳಿಂದ ಪರಾಭವಗೊಳಿಸಿದರು.