Advertisement

ವಿಶ್ವದಾಖಲೆ ಸರಮಾಲೆ: ನಡಾಲ್‌ ಮತ್ತೆ ಫ್ರೆಂಚ್‌ ದೊರೆ

06:11 PM Jun 12, 2017 | Team Udayavani |

ಪ್ಯಾರಿಸ್‌: ಮಣ್ಣಿನಂಕಣದ ಟೆನಿಸ್‌ ದೊರೆ ಖ್ಯಾತಿಯ ಸ್ಪೇನ್‌ನ ರಫೆಲ್‌ ನಡಾಲ್‌ ತಮ್ಮ ಬಿರುದನ್ನು ಉಳಿಸಿಕೊಂಡಿದ್ದಾರೆ. ವಿಶ್ವದಾಖಲೆಯ ಹತ್ತನೇ ಬಾರಿಗೆ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಟೆನಿಸ್‌ ಆಟಗಾರ ಎನಿಸಿಕೊಂಡಿದ್ದಾರೆ. ರವಿವಾರ ಪ್ಯಾರಿಸ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್‌ ಅಂತಿಮ ಪಂದ್ಯದಲ್ಲಿ ನಡಾಲ್‌ ಅತ್ಯಂತ ಸುಲಭವಾಗಿ ಸ್ವಿಟ್ಸರ್‌ಲ್ಯಾಂಡಿನ ಸ್ಟಾನಿಸ್ಲಾಸ್‌ ವಾವ್ರಿಂಕ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದ್ದಾರೆ. ನಡಾಲ್‌ ಗೆಲುವಿನಂತರ 6-2, 6-3, 6-1.

Advertisement

ಸೆಮಿಫೈನಲ್‌ ಪಂದ್ಯದಲ್ಲಿ ಬ್ರಿಟನ್ನಿನ ಆ್ಯಂಡಿ ಮರ್ರೆಗೆ ಬೆವರಿಳಿಸಿದ್ದ ವಾವ್ರಿಂಕ ಫೈನಲ್‌ ಪಂದ್ಯದಲ್ಲಿ ನಡಾಲ್‌ ಸಮಕ್ಕೆ ಏರಲೇ ಇಲ್ಲ. ಮಣ್ಣಿನಂಕಣದ ದೊರೆಯೆದುರು ವಾವ್ರಿಂಕ ಬಿರುಸಿನ ಹೋರಾಟ ನಡೆಸಬಹುದೆನ್ನುವ ನಂಬಿಕೆ ಹುಸಿಯಾಯಿತು. ಮೊದಲ ಸೆಟ್‌ನಲ್ಲಿ 2-6 ಅಂಕಗಳಿಂದ ಸೋತ ವಾವ್ರಿಂಕಾ 2ನೇ ಸೆಟ್‌ನಲ್ಲಿ ತಿರುಗಿ ಬೀಳಬಹುದೆಂಬ ನಿರೀಕ್ಷೆಯಿತ್ತು. ಆದರೆ ಅಲ್ಲಿ ಗಳಿಸಿದ್ದು ಕೇವಲ 3 ಅಂಕ ಮಾತ್ರ. 3ನೇ ಸೆಟ್‌ನಲ್ಲಂತೂ ನಡಾಲ್‌ ಆಟಕ್ಕೆ ವಾವ್ರಿಂಕಾ ಬಸವಳಿದು ಹೋದರು. ಅವರಿಂದ ಗಳಿಸಲು ಸಾಧ್ಯವಾಗಿದ್ದು ಕೇವಲ 1 ಅಂಕ ಮಾತ್ರ. ಬಹುಶಃ ಫ್ರೆಂಚ್‌ ಓಪನ್‌ನಲ್ಲಿ ಫೈನಲ್‌ನಲ್ಲಿ ದಾಖಲಾದ ಸುಲಭ ಸೋಲುಗಳಲ್ಲಿ ಇದು ಒಂದಿರಬಹುದು.

ವಿಶ್ವದಾಖಲೆಗಳ ಸರದಾರ ನಡಾಲ್‌
ಹತ್ತನೇ ಫ್ರೆಂಚ್‌ ಓಪನ್‌ ಗೆಲ್ಲುವ ಮೂಲಕ ನಡಾಲ್‌ ಏಕಕಾಲಕ್ಕೆ ಹಲವು ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲೂ ಫ್ರೆಂಚ್‌ ಓಪನ್‌ನಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಒಟ್ಟಾರೆ ಇದು ಅವರ 15ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯಾಗಿದೆ.

ಪುರುಷರ ಟೆನಿಸ್‌ನಲ್ಲಿ ಗರಿಷ್ಠ ಗ್ರ್ಯಾನ್‌ಸ್ಲಾಮ್‌ ಗೆದ್ದಿರುವ 2ನೇ ಸಾಧಕನಾಗಿ ನಡಾಲ್‌ ಮೂಡಿಬಂದಿದ್ದಾರೆ. ಫ್ರೆಂಚ್‌ ಗೆಲುವಿನೊಂದಿಗೆ ಅವರ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಸಂಖ್ಯೆ 15ಕ್ಕೇರಿದೆ. 18 ಪ್ರಶಸ್ತಿ ಗೆಲ್ಲುವುದರ ಮೂಲಕ ರೋಜರ್‌ ಫೆಡರರ್‌ ನಂ. 1 ಸ್ಥಾನದಲ್ಲಿದ್ದಾರೆ. 14 ಗ್ರ್ಯಾನ್‌ಸ್ಲಾಮ್‌ ಗೆದ್ದಿರುವ ಅಮೆರಿಕದ ಪೀಟ್‌ ಸಾಂಪ್ರಾಸ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಮಣ್ಣಿನಂಕಣದಲ್ಲಿ ಸಾರ್ವಕಾಲಿಕ ಸಾಧಕ
ನಡಾಲ್‌ 10ನೇ ಬಾರಿಗೆ ಫ್ರೆಂಚ್‌ ಓಪನ್‌ ಕಿರೀಟ ಗೆದ್ದಿದ್ದಾರೆ. ಇದುವರೆಗೆ ಮಣ್ಣಿನಂಕಣದಲ್ಲಿ ಬೇರಾವುದೇ ಆಟಗಾರ/ ಆಟಗಾರ್ತಿ ಈ ಸಾಧನೆ ಮಾಡಿಲ್ಲ. ಆದ್ದರಿಂದ ಈ ಅಂಕಣದ ಸರ್ವಶ್ರೇಷ್ಠ ಎಂದು ಗುರ್ತಿಸಿಕೊಂಡಿದ್ದಾರೆ.

Advertisement

ಫ್ರೆಂಚ್‌ನಲ್ಲಿ 79 ಜಯ, 2 ಸೋಲು ಫ್ರೆಂಚ್‌ನಲ್ಲಿ ರಾಫೆಲ್‌ ನಡಾಲ್‌ ಒಟ್ಟು 79 ಪಂದ್ಯ ಗೆದ್ದಿದ್ದರೆ, ಕೇವಲ 2 ಸೋಲು ಕಂಡಿದ್ದಾರೆ. 2009ರಲ್ಲಿ ರಾಬಿನ್‌ ಸೋಡರ್ಲಿಂಗ್‌ ವಿರುದ್ಧ, 2014ರಲ್ಲಿ ಜೊಕೊವಿಚ್‌ ಎದುರು ಮಾತ್ರ ಸೋತಿದ್ದಾರೆ.

ಒಂದೇ ಗ್ರ್ಯಾನ್‌ಸ್ಲಾಮನ್ನು 10 ಬಾರಿ ಗೆದ್ದ ಮೊದಲಿಗ ಆಧುನಿಕ ಟೆನಿಸ್‌ನಲ್ಲಿ ಒಂದು ಗ್ರ್ಯಾನ್‌ಸ್ಲಾಮನ್ನು 10 ಬಾರಿ ಗೆದ್ದ (ಫ್ರೆಂಚ್‌ ಓಪನ್‌) ಮೊದಲ ಆಟಗಾರ/ಗಾರ್ತಿ ನಡಾಲ್‌. ಈ ಬಾರಿಯದ್ದು ನಡಾಲ್‌ ಅವರ 10ನೇ ಫ್ರೆಂಚ್‌ ಓಪನ್‌ ಕಿರೀಟ. ಒಂದು ಸ್ಲಾಮ್‌: ಸಾರ್ವಕಾಲಿಕವಾಗಿ 2ನೇ ಶ್ರೇಷ್ಠ ಸಾಧಕ ಒಂದು ಗ್ರ್ಯಾನ್‌ಸ್ಲಾಮನ್ನು ಗರಿಷ್ಠ ಬಾರಿ ಗೆದ್ದ ಕೇವಲ 2ನೇ ಸಾರ್ವಕಾಲಿಕ ಸಾಧಕ ರಾಫೆಲ್‌ ನಡಾಲ್‌. ಇದಕ್ಕೂ ಮುನ್ನ ಮಾರ್ಗರೆಟ್‌ ಕೋರ್ಟ್‌ 11 ಬಾರಿ ಆಸ್ಟ್ರೇಲಿಯನ್‌ ಓಪನ್‌ ಗೆದ್ದಿರುವುದು ವಿಶ್ವದಾಖಲೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next