Advertisement

ಫ್ರೆಂಚ್ ಓಪನ್ : 20ನೇ ಗ್ರಾಂಡ್ ಸ್ಲಾಮ್ ಗೆದ್ದ ನಡಾಲ್! ವೃತ್ತಿ ಜೀವನದ 100ನೇ ಗೆಲುವು

10:50 PM Oct 11, 2020 | sudhir |

ಪ್ಯಾರಿಸ್‌: ಟೆನಿಸ್‌ ದಿಗ್ಗಜರ ಹೋರಾಟವೆಂದೇ ಪರಿಗಣಿಸಲ್ಪಟ್ಟಿದ್ದ ಈ ಬಾರಿಯ ಫ್ರೆಂಚ್‌ ಓಪನ್‌ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ಆಟಗಾರ ಹಾಗೂ ವಿಶ್ವದ ದ್ವಿತೀಯ ಶ್ರೇಯಾಂಕಿತ ರಫೆಲ್‌ ನಡಾಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

Advertisement

ಫಿಲಿಪೆ ಚಾಟ್ರಿಯರ್‌ ಅಂಕಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಅವರು ವಿಶ್ವದ ಅಗ್ರ ಶ್ರೇಯಾಂಕಿತರಾದ ಸರ್ಬಿಯಾದ ನೊವಾಕ್‌ ಚೊಕೋವಿಕ್‌ ವಿರುದ್ಧ 6-0, 6-2 ಹಾಗೂ 7-5 ಸೆಟ್ ಗಳ ಅಂತರದಲ್ಲಿ ಮಣಿಸಿ ಗೆಲುವಿನ ನಗೆ ಬೀರಿ ತಮ್ಮ ವೃತ್ತಿ ಜೀವನದ 20 ಗ್ರಾಂಡ್ ಸ್ಲಾಮ್ ಗೆದ್ದರು ಮಾತ್ರವಲ್ಲದೆ ಇದು ನಡಾಲ್ ನ ಟೆನ್ನಿಸ್ ವೃತ್ತಿ ಜೀವನದ 100ನೇ ಗೆಲುವಾಗಿದೆ.

ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ನಡಾಲ್‌ ತಮ್ಮ ಸಾಂಪ್ರದಾಯಿಕ ಎದುರಾಳಿಯನ್ನು ಬೇಗನೇ ಮಣಿಸಲು ಪ್ರಯತ್ನಿಸಿದರು. ನಡಾಲ್‌ ಅವರ ಚುರುಕಿನ ಆಟದ ವಿರುದ್ಧ ಮಂಕಾದಂತೆ ಕಂಡ ಜೊಕೋವಿಕ್‌ ಮೊದಲ ಸೆಟ್‌ ಅನ್ನು 6-0 ಅಂಕಗಳ ಅಂತರದಿಂದ ಅನಾಯಾಸವಾಗಿ ಬಿಟ್ಟುಕೊಟ್ಟರು.

ಆನಂತರದ ಸೆಟ್‌ ನಲ್ಲಿ ಜೊಕೋ ಕೊಂಚ ರಕ್ಷಣಾತ್ಮಕವಾಗಿ ಆಡುತ್ತಾ ಆಟದಲ್ಲಿ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಲು ಪ್ರಯತ್ನಿಸಿದರಾದರೂ ಅದು ನಿರೀಕ್ಷಿತ ಫ‌ಲ ನೀಡಲಿಲ್ಲ. ತುಸು ಹೋರಾಟ ನೀಡುವಷ್ಟರಲ್ಲೇ ನಡಾಲ್‌ ಬಿರುಸಿನ ಆಟವಾಡಿ ನೋಡ ನೋಡುತ್ತಿದ್ದಂತೆ ಈ ಸೆಟ್ಟನ್ನೂ ತಮ್ಮ ಹೆಸರಿಗೆ ಬರೆದುಕೊಂಡರು.

Advertisement

ಆದರೆ ಅಷ್ಟರಲ್ಲಿ ನಡಾಲ್‌ ವೇಗಕ್ಕೆ ಪ್ರತಿ ವೇಗ ರೂಢಿಸಿಕೊಂಡಿದ್ದ ಜೊಕೋ ಮೂರನೇ ಸೆಟ್‌ನಲ್ಲಿ ಎದುರು ನಿಂತರು. ಪ್ರಬಲ ಪೈಪೋಟಿ ನೀಡಿದರು. ಇಬ್ಬರೂ ಬಹುತೇಕ ಸಮಬಲದ ಹೋರಾಟ ನೀಡಿದ್ದರಿಂದ ಈ ಸೆಟ್‌ ಟೈ ಬ್ರೇಕರ್‌ಗೆ ಜಾರುವ ಸಾಧ್ಯತೆಗಳು ಗೋಚರಿಸಿದ್ದವು. ಆದರೆ ನಡಾಲ್‌ ಅದಕ್ಕೆ ಅವಕಾಶ ನೀಡಲಿಲ್ಲ. ಅಂತಿಮವಾಗಿ, 7-5ರ ಅಂತರದಲ್ಲಿ ಈ ಸೆಟ್ಟನ್ನು ಗೆದ್ದು ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಪ್ಯಾರಿಸ್‌ನಲ್ಲಿ ಹ್ಯಾಟ್ರಿಕ್‌
ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಈ ಇಬ್ಬರದ್ದೂ 3ನೇ ಪಂದ್ಯ. ಈ ಮೊದಲು 2012ರಲ್ಲಿ ಹಾಗೂ 2014ರ ಫೈನಲ್‌ಗಳಲ್ಲಿ ಇವರಿಬ್ಬರೂ ಮುಖಾಮುಖೀಯಾಗಿದ್ದಾಗ ನಡಾಲ್‌ ಅವರೇ ಗೆಲುವು ಸಾಧಿಸಿದ್ದರು. ಈಗ ಮತ್ತೂಮ್ಮೆ ಗೆಲುವು ಸಾಧಿಸುವ ಮೂಲಕ ಜೊಕೋ ಮೇಲೆ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.

ಬಬೊಸ್‌-ಡಿಸೈರೆ ಜೋಡಿಗೆ ಪ್ರಶಸ್ತಿ
ಪುರುಷರ ಸಿಂಗಲ್ಸ್‌ನ ಫೈನಲ್‌ ಪಂದ್ಯಕ್ಕೂ ಮುನ್ನ ನಡೆದ ಮಹಿಳೆಯರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ ಹಂಗೇರಿಯಾ ಟಿಮಿಯಾ ಬಬೊಸ್‌- ಅಮೆರಿಕದ ಡಿಸೈರೆ ಕ್ವಾವಾಕಿlಕ್‌ ಜೋಡಿ ಜಯ ಸಾಧಿಸಿ ಪ್ರಶಸ್ತಿಗೆ ಭಾಜನವಾಯಿತು. ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಡೊವೆನಿಚ್‌ ಹಾಗೂ ಚಿಲಿಯ ಅಲೆಕ್ಸಾ ಗುರಾಚಿ ಜೋಡಿಯ ವಿರುದ್ಧ 6-4, 7-5 ನೇರ ಸೆಟ್‌ಗಳ ಮೂಲಕ ಪರಾಭವಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next